ADVERTISEMENT

ಕಾಳಸಂತೆಯಲ್ಲಿ ಸ್ಪ್ರಿಂಕ್ಲರ್‌ ಮಾರಾಟ: ಆರೋಪ

ಪರಿಶಿಷ್ಟ ರೈತರಿಗೆ ಮಂಜೂರಾದ ಕೃಷಿ ಪರಿಕರ; ಏಜೆನ್ಸಿ ಮೂಲಕ ದುಬಾರಿ ಬೆಲೆಗೆ ಬಿಕರಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2021, 15:34 IST
Last Updated 11 ಜನವರಿ 2021, 15:34 IST
ಅಫಜಲಪುರ ರೈತ ಸಂಪರ್ಕ ಕೇಂದ್ರದಿಂದ ವ್ಯಕ್ತಿಯೊಬ್ಬರು ಸೋಮವಾರ ದುಬಾರಿ ದರ ನೀಡಿ ಖರೀದಿಸಿದ ಸ್ಪ್ರಿಂಕ್ಲರ್‌ ಸೆಟ್‌
ಅಫಜಲಪುರ ರೈತ ಸಂಪರ್ಕ ಕೇಂದ್ರದಿಂದ ವ್ಯಕ್ತಿಯೊಬ್ಬರು ಸೋಮವಾರ ದುಬಾರಿ ದರ ನೀಡಿ ಖರೀದಿಸಿದ ಸ್ಪ್ರಿಂಕ್ಲರ್‌ ಸೆಟ್‌   

ಅಫಜಲಪುರ: ‘ತುಂತುರು ನೀರಾವರಿಗಾಗಿ ರೈತರಿಗೆ ಸಯಾಧನದ ಅಡಿ ಮಂಜೂರಾದ ಸ್ಪ್ರಿಂಕ್ಲರ್‌ ಸೆಟ್‌ಗಳಲ್ಲಿ, ಇಲ್ಲಿನ ಕೃಷಿ ಇಲಾಖೆ ಅಧಿಕಾರಿಗಳು ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಿಕೊಳ್ಳುತ್ತಿದ್ದಾರೆ’ ಎಂದು ಫಲಾನುಭವಿ ರೈತರು ದೂರಿದ್ದಾರೆ.

‘ಪಟ್ಟಣದ ಕೃಷಿ ಇಲಾಖೆ ಕಚೇರಿ ಮುಂದೆ ಒಂದು ವಾಹನದಲ್ಲಿ ಸ್ಪ್ರಿಂಕ್ಲರ್‌ ಸೆಟ್‌ ಸಾಗಿಸುತ್ತಿರುವುದು ಕಂಡುಬಂತು. ಅವರನ್ನು ವಿಚಾರಣೆ ಮಾಡಿದಾಗ ₹ 10 ಸಾವಿರ ನೀಡಿ ಏಜೆನ್ಸಿಯೊಂದರ ಮೂಲಕ ಖರೀದಿಸಿದ್ದಾರೆ ಹೇಳಿದ್ದಾರೆ. ಇದೇ ರೀತಿ ಕಳೆದ 15 ದಿನಗಳಿಂದ ಸ್ಪ್ರಿಂಕ್ಲರ್‌ ಮಾರಾಟ ಮಾಡಲಾಗುತ್ತಿದೆ. ತುಂತುರು ನೀರಾವರಿಗೆ ಅಗತ್ಯವಿರುವ ಪರಿಕರಗಳ ಕೃತಕ ಅಭಾವ ಸೃಷ್ಟಿ ಮಾಡಿ, ರೈತರೂ ಹೆಚ್ಚಿನ ಬೆಲೆ ನೀಡುವ ಅನಿವಾರ್ಯ ತಂದೊಡ್ಡಲಾಗಿದೆ. ರೈತರಿಗೆ ಸಹಾಯ ಧನದಲ್ಲಿ ₹ 2070ಕ್ಕೆ ಒಂದು ಸ್ಪ್ರಿಂಕ್ಲರ್‌ ಸೆಟ್ ಮಂಜೂರಾಗಿದೆ. ಆದರೆ, ಕೃಷಿ ಇಲಾಖೆಯ ಕೆಲವರು ಏಜೆನ್ಸಿಗಳ ಜತೆಗೆ ಒಪ್ಪಂದ ಮಾಡಿಕೊಂಡು, ಕಾಳಸಂತೆಯಲ್ಲಿ ಮಾರುತ್ತಿದ್ದಾರೆ’ ಎಂದೂ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಅಫಜಲಪುರ, ಕರಜಗಿ, ಅತನೂರರೈತ ಸಂಪರ್ಕ ಕೇಂದ್ರಗಳ ಇವುಗಳ ಮುಖಾಂತರ ಸ್ಪ್ರಿಂಕ್ಲರ್‌ ನೀಡಲಾಗುತ್ತಿದೆ. ಈ ಹಿಂದೆಯೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ಈ ಸೆಟ್‌ಗಳನ್ನು ಸಹಾಯ ಧನದಲ್ಲಿ ಮಾರಾಟ ಮಾಡಲಾಗಿದೆ. ಆದರೆ, ಕಳೆದ 15 ದಿನಗಳಿಂದ ಸಾಮಾನ್ಯ ರೈತರಿಗೂ ಸಹಾಯಧನದಲ್ಲಿ ಸೆಟ್‌ಗಳನ್ನು ವಿತರಿಸುವ ಕೆಲಸ ನಡೆದಿದೆ’ ಎಂದು ರೈತರು ಹೇಳಿದ್ದಾರೆ.

ADVERTISEMENT

ಈ ಕುರಿತು ಅಫಜಲಪುರ ರೈತ ಸಂ‍ಪರ್ಕ ಕೇಂದ್ರದ ಕೃಷಿ ಅಧಿಕಾರಿ ಅರವಿಂದಕುಮಾರ ರಾಠೋಡ ಅವರನ್ನು ವಿಚಾರಿಸಿದಾಗ, ‘ಸಾಮಾನ್ಯ ರೈತರಿಗೆ ಸ್ಪ್ರಿಂಕ್ಲರ್‌ ಬಂದಿಲ್ಲ. ಬರುವುದೂ ಇಲ್ಲ’ ಎಂದರು.

‘ಈಗಾಗಲೇ ಈ ಸೆಟ್‌ ಪಡೆಯಲು ಕರಜಗಿ ರೈತ ಸಂಪರ್ಕ ಕೇಂದ್ರಕ್ಕೆ ಒಂದು ಸಾವಿರ, ಅಫಜಲಪುರಕ್ಕೆ 750, ಅತನೂರ ಕೇಂದ್ರಕ್ಕೆ 700 ಅರ್ಜಿಗಳು ಬಂದಿವೆ. ಸ್ಪ್ರಿಂಕ್ಲರ್‌ಗಳಿಗಾಗಿ ರೈತರು ರೈತ ಸಂಪರ್ಕ ಕೇಂದ್ರಕ್ಕೆ ಅಲೆಯುತ್ತಿದ್ದಾರೆ. ಆದರೂ ಫಲಾನುಭವಿಗಳನ್ನು ನೆಪ ಹೇಳಿ ಸಾಗಹಾಕುವ ಅಧಿಕಾರಿಗಳು ಕಾಳಸಂತೆಯಲ್ಲಿ ಮಾರಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕ್ರಮ ಜರುಗಿಸಬೇಕು’ ಎಂದೂ ರೈತರು ಆಗ್ರಹಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.