
ಜೇವರ್ಗಿ: ಎಸ್ಎಸ್ಎಲ್‌ಸಿ ಫಲಿತಾಂಶವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಜೇವರ್ಗಿ ಹಾಗೂ ಯಡ್ರಾಮಿ ಅವಳಿ ತಾಲ್ಲೂಕಿನಲ್ಲಿ ವಿನೂತನವಾಗಿ ‘ಮಿಷನ್ 40+ ಫಾರ್ 90 ಡೇಸ್’ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಕಳೆದ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಹಿಂದುಳಿದಿರುವ ಎರಡೂ ತಾಲ್ಲೂಕಿನ ಯಡ್ರಾಮಿ ಸರ್ಕಾರಿ ಬಾಲಕರ ಪ್ರೌಢಶಾಲೆ, ಜೇವರ್ಗಿ ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆ, ನೆಲೋಗಿ ಸರ್ಕಾರಿ ಪ್ರೌಢಶಾಲೆ, ಬಿಳವಾರ ಸರ್ಕಾರಿ ಪ್ರೌಢಶಾಲೆಯ ಶಾಲೆ ಸೇರಿದಂತೆ ಕೆಲವು ಶಾಲೆಗಳನ್ನು ಗುರುತಿಸಿ ವಿಶೇಷ ತರಗತಿ ನಡೆಸುವ ಮೂಲಕ ಸುಧಾರಣೆ ತರಲು ಕಾರ್ಯಯೋಜನೆ ರೂಪಿಸಲಾಗಿದೆ.
ಪ್ರತಿ ವಿದ್ಯಾರ್ಥಿಯು 90 ದಿನಗಳಲ್ಲಿ ಕನಿಷ್ಠ 40 ಅಂಕಗಳನ್ನು ಪಡೆಯುವಂತೆ ಮಾಡಲು ಕ್ರಮವಹಿಸಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಫಲಿತಾಂಶ ಉತ್ತಮಗೊಳಿಸಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಈಗಾಗಲೇ ನೀಲನಕ್ಷೆ ಹಾಗೂ 4 ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆಯಿಂದ ಮಕ್ಕಳ ಉತ್ತೀರ್ಣಕ್ಕೆ ಸಹಾಯಕವಾಗಿದೆ ಎಂದು ಹೇಳಲಾಗುತ್ತಿದೆ.
ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪಠ್ಯಾಧಾರಿತ ಪ್ರಶ್ನಾವಳಿ ತಯಾರಿಸಲಾಗಿದೆ. ಒಂದು ಅಂಕದ ಪ್ರಶ್ನೆಗಳ ಜತೆಗೆ ಸಾಧಾರಣ ಉತ್ತರ ಬಯಸುವ ಪ್ರಶ್ನೆ ಗ್ರಹಿಸಿ, ಸರಳವಾಗಿ ಉತ್ತರ ಬರೆಯಲು ಪ್ರೇರೇಪಿಸುವ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ 40+ ಮಿಷನ್ ವಿಶಿಷ್ಟ ಯೋಜನೆಯ ಕಾರ್ಯ ಅನುಷ್ಠಾನವಾಗುತ್ತಿದ್ದು, ಮಕ್ಕಳು ಧೈರ್ಯವಾಗಿ ಪರೀಕ್ಷೆ ಎದುರಿಸಲು ಸಜ್ಜಾಗುತ್ತಿರುವುದು ಕಂಡು ಬರುತ್ತಿದೆ.
ವಿಷಯವಾರು ಪ್ರತಿಭಾವಂತ, ಅನುಭವಿ ಶಿಕ್ಷಕರನ್ನು ಗುರುತಿಸಿ ಪ್ರಶ್ನೋತ್ತರ ಮಾಲಿಕೆಯುಳ್ಳ ಪುಸ್ತಕ ರೂಪಿಸಿದ್ದು, ಶಿಕ್ಷಕರು ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಇದನ್ನು ಆಧಾರವಾಗಿಟ್ಟುಕೊಂಡು ಬೋಧನೆ, ಅಭ್ಯಾಸ ಮಾಡಿಸುತ್ತಿದ್ದಾರೆ.
ಒಟ್ಟು ಆರು ವಿಷಯಗಳ 40+ ಮಿಷನ್ ಯೋಜನೆಯ ಪುಸ್ತಕ ಸಿದ್ಧಪಡಿಸಲಾಗಿದ್ದು, ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗಿದೆ. ತಾಲ್ಲೂಕಿನಲ್ಲಿ ಕಡಿಮೆ ಫಲಿತಾಂಶ ಪಡೆದುಕೊಂಡ ಶಾಲೆಗಳನ್ನು ಪಟ್ಟಿ ಮಾಡಲಾಗಿದ್ದು, ಅಂತಹ ಶಾಲೆಗಳಿಗೆ ಡಯಟ್ ಅಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ವಿಶೇಷವಾಗಿ ಭೇಟಿ ನೀಡಿ ಶಾಲೆಯ ಮುಖ್ಯೋಪಾಧ್ಯಾಯರು, ವಿಷಯವಾರು ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿ ಮಕ್ಕಳನ್ನು ನಿರಂತರ ಅಭ್ಯಾಸ ಮಾಡುವ ನಿಟ್ಟಿನಲ್ಲಿ ಪ್ರೇರೇಪಿಸಲು ಮಾರ್ಗದರ್ಶನ ನೀಡುತ್ತಿದ್ದಾರೆ.
‘ಜೇವರ್ಗಿ ಹಾಗೂ ಯಡ್ರಾಮಿ ತಾಲ್ಲೂಕಿನಲ್ಲಿ 44 ಸರ್ಕಾರಿ ಪ್ರೌಢಶಾಲೆಗಳಿದ್ದು, 9 ಅನುದಾನಿತ ಪ್ರೌಢಶಾಲೆಗಳಿವೆ. ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳು 4,155 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶೇ 30ರಿಂದ 40ರಷ್ಟು ಮಿಷನ್ 40+ ಯೋಜನೆಗೆ ಮಕ್ಕಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದ್ದು, ಎಲ್ಲ ತರಹದ ತರಬೇತಿ ನೀಡುತ್ತಿದ್ದೇವೆ’ ಎಂದು ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿ ದೇವಿಂದ್ರಪ್ಪ ಗುಂಡಾಪೂರ ತಿಳಿಸಿದ್ದಾರೆ.
‘ಜೇವರ್ಗಿ ಹಾಗೂ ಯಡ್ರಾಮಿ ತಾಲ್ಲೂಕಿನಲ್ಲಿ 40+ ಮಿಷನ್ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುತ್ತಿದ್ದೇವೆ. ವಿಷಯವಾರು ಹಿಂದುಳಿದಿರುವಿಕೆ ಗುರುತಿಸಿ, ಸಂಬಂಧಪಟ್ಟ ಶಿಕ್ಷಕರಿಗೆ ತರಬೇತಿ ನೀಡಿ, ಬೋಧನೆಗೆ ಸಜ್ಜುಗೊಳಿಸಿದ್ದೇವೆ. ಶೇ100ರಷ್ಟು ಫಲಿತಾಂಶ ಪಡೆಯುವ ಗುರಿ ಹೊಂದಿದ್ದೇವೆ’ ಎಂದು ಜೇವರ್ಗಿ ಬಿಇಒ ವೀರಣ್ಣ ಬೊಮ್ಮನಹಳ್ಳಿ ತಿಳಿಸಿದ್ದಾರೆ.
ನಿರಾಸೆಗೊಳಿಸಿದ್ದ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ 4,155 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿಯಲ್ಲಿ ವಿದ್ಯಾಭ್ಯಾಸ 90 ದಿನದಲ್ಲಿ ಕನಿಷ್ಠ 40 ಅಂಕ ಗಳಿಕೆಗೆ ತರಬೇತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.