ADVERTISEMENT

ಮಳಖೇಡ; 18 ಗಂಟೆಗಳಿಂದ ವಾಹನ ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 28 ಜುಲೈ 2023, 5:20 IST
Last Updated 28 ಜುಲೈ 2023, 5:20 IST
   

ಸೇಡಂ: ತಾಲ್ಲೂಕಿನ ಮಳಖೇಡ ಸೇತುವೆ ಮೇಲೆ ಕಾಗಿಣಾ ನದಿ ನೀರು ಹರಿಯುತ್ತಿರುವುದರಿಂದ 18 ಗಂಟೆಗಳಿಂದ ಸೇಡಂ-ಕಲಬುರಗಿ ರಾಜ್ಯಹೆದ್ದಾರಿ-10 ಸಂಪರ್ಕ ಸ್ಥಗಿತಗೊಂಡಿದೆ.

ತಾಲ್ಲೂಕಿನಾದ್ಯಂತ ಗುರುವಾರ ಸುರಿದ ಮಳೆಯಿಂದಾಗಿ ನಾಲಾಗಳು ತುಂಬಿ ಹರಿದು ಕಾಗಿಣಾ ನದಿ ಸೇರಿದೆ. ಚಿಂಚೋಳಿಯ ಮುಲ್ಲಾಮಾರಿ ನದಿ ನೀರು ಮತ್ತು ಬೆಣ್ಣೆತೊರೆ ನೀರು ಕಾಗಿಣಾ ಒಡಲಿಗೆ ಹರಿದುಬಂದಿದ್ದರಿಂದ ಗುರುವಾರ ಸಂಜೆ 4.30 ಕ್ಕೆ ಮಳಖೇಡ ಸೇತುವೆ ಮೇಲಿಂದ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಶುಕ್ರವಾರವು ಸಹ ಸೇತುವೆ ಮೇಲಿಂದ ನೀರು ಹರಿಯುತ್ತಿದೆ. ಇದರಿಂದ ಸೇಡಂನಿಂದ ಕಲಬುರಗಿಗೆ ತೆರಳುವ ವಾಹನಗಳು ಚಿತ್ತಾಪುರ ಮತ್ತು ಶಹಾಬಾದ್ ಮೇಲಿಂದ ತೆರಳುತ್ತಿವೆ.

ಕಲಬುರಗಿ ಕಡೆಯಿಂದ ಬರುವ ವಾಹನಗಳು ಸಹ ಚಿತ್ತಾಪುರ ಮಾರ್ಗದಿಂದ ಬರುತ್ತಿವೆ. ಶುಕ್ರವಾರ ಬೆಳಿಗ್ಗೆ ಶಾಲಾ-ಕಾಲೇಜಿಗೆ ಕಲಬುರಗಿಯಿಂದ ಬರುವ ಶಿಕ್ಷಕ, ಉಪನ್ಯಾಸ ಬಳಗ ಪರದಾಡಿದರು. ನದಿಯಲ್ಲಿ ‌ನೀರಿನ ಹರಿವಿನ ಪ್ರಮಾಣ ಕಡಿಮೆ ಆಗುತ್ತಿದ್ದು ಶುಕ್ರವಾರ ಸಂಜೆ ವೇಳೆಗೆ ಸೇತುವೆ ಮೇಲಿಂದ ವಾಹನಗಳ ಸಂಚಾರಕ್ಕೆ ಮುಕ್ತವಾಗಬಹುದು.

ADVERTISEMENT

ತಾಲ್ಲೂಕಿನ ಬಿಬ್ಬಳ್ಳಿ ಸೇತುವೆ ಮೇಲಿಂದ ಕಾಗಿಣಾ ನದಿ‌ ನೀರು ಇಳಿದಿದ್ದರಿಂದ ಸೇತುವೆ ಮೇಲಿಂದ ವಾಹನಗಳು ಸಂಚರಿಸುತ್ತಿವೆ. ಮಳಖೇಡ ನಿಂದ ಸಂಗಾವಿ (ಎಂ) ಸೇತುವೆ ಮೇಲಿಂದ ನೀರು ಹರಿಯುತ್ತಿದ್ದು, ಎರಡನೇ ದಿನವು ಸಂಗಾವಿ(ಎಂ) ಮಳಖೇಡನಿಂದ ಸ್ಥಗಿತಗೊಂಡಿದೆ. ತಾಲ್ಲೂಕಿನ ಮಳಖೇಡ ಸೇತುವೆ ಬಳಿ ಪೊಲೀಸರು ಬೀಡು ಬಿಟ್ಟಿದ್ದು, ನದಿಯತ್ತ ತೆರಳದಂತೆ ಮುನ್ನೆಚ್ಚರಿಕೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.