ಕಲಬುರಗಿ: ರಾಜ್ಯದ ಎಲ್ಲ ಜನರ ಸ್ಥಿತಿಗತಿ ಅರಿತು ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೆ ಜಿಲ್ಲೆಯಲ್ಲಿ ಬಹುತೇಕ ಗ್ರಹಣ ಹಿಡಿದಿದೆ.
ಮೊದಲ ದಿನ ಕಾಡಿದ್ದ ಆ್ಯಪ್ ತೊಂದರೆ 2ನೇ ದಿನವೂ ಮುಂದುವರಿಯಿತು. ಮೊಬೈಲ್ ನೆಟ್‌ವರ್ಕ್ ಸಮಸ್ಯೆ, ಸರ್ವರ್ ಸಮಸ್ಯೆ, ಲಾಗಿನ್ ಸಮಸ್ಯೆಗಳಿಂದ ಜಿಲ್ಲೆಯಲ್ಲಿ ಸಮೀಕ್ಷಾ ಕಾರ್ಯ ತೆವಳುತ್ತಿದೆ. ‘ಮಂಗಳವಾರ ಸಂಜೆ ಹೊತ್ತಿಗೆ ಜಿಲ್ಲೆಯಲ್ಲಿ 11,00ಕ್ಕೂ ಅಧಿಕ ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ’ ಎಂದು ಮೂಲಗಳು ತಿಳಿಸಿವೆ.
ಕಲಬುರಗಿಯ ಸುಂದರ ನಗರದಲ್ಲಿ ಸೋಮವಾರ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ನಡೆದ ಜಿಲ್ಲೆಯ ಮೊದಲ ಮನೆಯ ಬಳಿಕ ಆ ಸಮೀಕ್ಷಕರಿಗೆ ದಿನವಿಡೀ ಎರಡೇ ಮನೆಗಳ ಸಮೀಕ್ಷೆ ನಡೆಸಲು ಸಾಧ್ಯವಾಗಿದೆ. ಎರಡನೇ ದಿನವಾದ ಮಂಗಳವಾರ ಒಂದೂ ಮನೆಯ ಸಮೀಕ್ಷೆ ನಡೆಸಲು ಸಾಧ್ಯವಾಗಿಲ್ಲ.
‘ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮೀಕ್ಷೆ ಉದ್ಘಾಟನೆಯಾದ ಬಳಿಕ ಆ್ಯಪ್ ಸಮಸ್ಯೆ ಕಾಡಿದ್ದರಿಂದ ಬರೀ ಎರಡೇ ಮನೆಗಳನ್ನು ಸಮೀಕ್ಷೆ ಮಾಡಲು ಸಾಧ್ಯವಾಗಿದೆ. ಮಂಗಳವಾರ ಇಡೀ ದಿನ ತಾಂತ್ರಿಕ ತೊಂದರೆ ಕಾಡಿದೆ. ಒಂದೂ ಮನೆ ಸಮೀಕ್ಷೆ ಮಾಡಲು ಸಾಧ್ಯವಾಗಿಲ್ಲ. ಕೆಲವೊಮ್ಮೆ ಆ್ಯಪ್ ತೆರೆದುಕೊಳ್ಳುತ್ತಿಲ್ಲ. ತೆರೆದುಕೊಂಡರೂ ಲೊಕೇಷನ್ ಸರಿಯಾಗಿ ತೋರಿಸುತ್ತಿಲ್ಲ. ಕುಟುಂಬ ಪಟ್ಟಿಯನ್ನೂ ಆಯ್ಕೆ ಮಾಡಲು ಸಾಧ್ಯವಾಗುತ್ತಿಲ್ಲ. ಮೊದಲಿಗೆ ಲೋಡಿಂಗ್ ಎಂದು ತೋರಿಸುತ್ತದೆ. ಕೆಲ ನಿಮಿಷದ ಬಳಿಕ ಎರರ್ ಎಂದು ತೋರಿಸುತ್ತಿದೆ. ದಿನವಿಡೀ ಇದೇ ಕತೆಯಾಗಿದೆ’ ಎಂದು ಜಿಲ್ಲೆಯ ಮೊದಲ ಮನೆ ಸಮೀಕ್ಷೆ ಮಾಡಿದ್ದ ಸಮೀಕ್ಷೆದಾರರು ಬೇಸರಿಸಿದರು.
‘ಸೋಮವಾರ ಸಮೀಕ್ಷೆಯ ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡಿದ್ದೆ. ಅದು ತಾಂತ್ರಿಕ ತೊಂದರೆಯಾಗಿ ಮೊದಲ ದಿನ ಸಮೀಕ್ಷೆ ನಡೆಸಲಿಲ್ಲ. ಮಂಗಳವಾರ ಆ ಆ್ಯಪ್ ಪರಿಷ್ಕೃರಿಸಿಕೊಂಡೆ (ಅಪ್‌ಡೇಟ್). ಲಾಗಿನ್ ಕೂಡ ಆಯಿತು. ಆದರೆ, ಮನೆಗಳ ಪಟ್ಟಿಯನ್ನೇ ಆಯ್ಕೆ ಮಾಡಲು ಸಾಧ್ಯವಾಗುತ್ತಿಲ್ಲ. ಎರಡು ದಿನ ಮುಗಿದರೂ ಒಂದೂ ಮನೆಯ ಸಮೀಕ್ಷೆಯಾಗಿಲ್ಲ. ಆತಂಕವಾಗುತ್ತಿದೆ’ ಎಂದು ಕಲಬುರಗಿಯ ಡೋಹರ ಗಲ್ಲಿಯಲ್ಲಿ ಮಂಗಳವಾರ ಸಮೀಕ್ಷೆ ನಡೆಸಬೇಕಿದ್ದ ಸಮೀಕ್ಷಕಾರರೊಬ್ಬರು ಅಳಲು ತೋಡಿಕೊಂಡರು.
ಮುಗಿಯದ ಕಿಟ್ ಹಂಚಿಕೆ
ಸಮೀಕ್ಷೆ ಆರಂಭವಾಗಿ ಎರಡು ದಿನಗಳು ಮುಗಿದರೂ, ಜಿಲ್ಲೆಯ ಹಲವೆಡೆ ಸಮೀಕ್ಷೆಯ ಕಿಟ್ ವಿತರಣೆ ಕಾರ್ಯ ಪೂರ್ಣಗೊಂಡಂತಿಲ್ಲ. ಗಣತಿ ಕೈಪಿಡಿ, ಟೊಪ್ಪಿಗೆ, ಮನೆಯ ಮುಖ್ಯಸ್ಥರಿಂದ ಸ್ವಯಂ ದೃಢೀಕರಣ ಪಡೆಯುವ ಫಾರಂಗಳನ್ನು ಸಮೀಕ್ಷಾ ಕಿಟ್ ಒಳಗೊಂಡಿದ್ದು, ಈ ಕಿಟ್ ಸಮೀಕ್ಷಕರಿಗೆ ಮಂಗಳವಾರ ಸಂಜೆ ತನಕವೂ ವಿತರಿಸುವ ದೃಶ್ಯ ಕಂಡುಬಂತು.
ಆ್ಯಪ್ ಸಮಸ್ಯೆ ಮಂಗಳವಾರ ಬಹುತೇಕ ಬಗೆಹರಿದಿದ್ದು ಸಮೀಕ್ಷೆ ಚುರುಕು ಪಡೆದಿದೆ. ಕಲಬುರಗಿ ಜಿಲ್ಲೆ ರಾಜ್ಯದಲ್ಲಿ 8ನೇ ಸ್ಥಾನದಲ್ಲಿದೆ.– ಸೋಮಶೇಖರ ವೈ., ಸದಸ್ಯ ಕಾರ್ಯದರ್ಶಿ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯ ಜಿಲ್ಲಾ ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.