
ಕಲಬುರಗಿ: ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆ ಉತ್ತೇಜಿಸಿ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಉದ್ದೇಶದಿಂದ ಕೇಂದ್ರ ಜಾರಿಗೆ ತಂದ ‘ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜಲಿ ಯೋಜನೆ’ ಜಾರಿಯಲ್ಲಿ ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ಹಿಂದೆ ಬಿದ್ದಿದೆ.
ಬಿಸಿಲಿನ ಕಾರಣಕ್ಕಾಗಿಯೇ ಗುರುತಿಸಿಕೊಂಡಿರುವ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸೌರಶಕ್ತಿಯನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಲು ಅವಕಾಶ ಇದೆ. ಆದರೂ ಇಲ್ಲಿನ ಜನ ಮನೆಗಳ ಚಾವಣಿ ಮೇಲೆ ಸೌರಫಲಕ ಅಳವಡಿಸಿಕೊಳ್ಳಲು ಮುಂದೆ ಬರುತ್ತಿಲ್ಲ.
ರಾಜ್ಯದಲ್ಲಿ ಸರ್ಕಾರ ‘ಗೃಹಜ್ಯೋತಿ’ಯ ಗ್ಯಾರಂಟಿ ನೀಡುವ ಮೂಲಕ 200 ಯುನಿಟ್‌ವರೆಗೂ ಉಚಿತ ವಿದ್ಯುತ್ ನೀಡುತ್ತಿರುವುದೂ ಹಾಗೂ ಪ್ರಚಾರದ ಕೊರತೆ ಈ ಯೋಜನೆಯ ತೆವಳುವಿಕೆಗೆ ಕಾರಣವಾಗಿದೆ.
ಯೋಜನೆ ಜಾರಿಗೆ ಬಂದ ದಿನದಿಂದ ಸೆಪ್ಟೆಂಬರ್‌ವರೆಗೂ ಏಳು ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೇವಲ 614 ಕುಟುಂಬಗಳು ಈ ಯೋಜನೆಯ ಲಾಭ ಪಡೆದಿವೆ. ರಾಜ್ಯದ ಐದು ಎಸ್ಕಾಂಗಳ ಪೈಕಿ ಬೆಸ್ಕಾಂ ವ್ಯಾಪ್ತಿಯಲ್ಲಿ ಹೆಚ್ಚು ಅಂದರೆ 4,476 ಕುಟುಂಬಗಳು ಈ ಯೋಜನೆಯ ಲಾಭ ಪಡೆದಿವೆ. ಎರಡನೇ ಸ್ಥಾನದಲ್ಲಿ ಮೆಸ್ಕಾಂ ಇದೆ. ಇಲ್ಲಿ 2,390 ಕುಟುಂಬಗಳು ಸೂರ್ಯಫಲಕ ಅಳವಡಿಸಿಕೊಂಡಿವೆ. ಮೂರನೇ ಸ್ಥಾನದಲ್ಲಿ ಹೆಸ್ಕಾಂ, ನಾಲ್ಕನೇ ಸ್ಥಾನದಲ್ಲಿ ಸೆಸ್ಕ್ ಇದೆ. ಕೊನೆಯ ಸ್ಥಾನದಲ್ಲಿ ಜೆಸ್ಕಾಂ ಇದೆ.
ಬಳ್ಳಾರಿ ಪ್ರಥಮ: ಜೆಸ್ಕಾಂ ವ್ಯಾಪ್ತಿಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚು ಜನ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. 157 ಕುಟುಂಬಗಳು ಸೂರ್ಯಫಲಕಗಳನ್ನು ಅಳವಡಿಸಿಕೊಂಡಿವೆ. ಎರಡನೇ ಸ್ಥಾನದಲ್ಲಿ ಕಲಬುರಗಿ ಹಾಗೂ ಮೂರನೇ ಸ್ಥಾನದಲ್ಲಿ ರಾಯಚೂರು ಇದೆ. ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದ್ದು, ಇಲ್ಲಿ ಕೇವಲ 15 ಕುಟುಂಬಗಳು ಈ ಯೋಜನೆಯ ಲಾಭ ಪಡೆದಿವೆ.
ಈ ಯೋಜನೆಯಡಿ ಕೇಂದ್ರ ಸರ್ಕಾರ ಜೆಸ್ಕಾಂಗೆ ₹4.14 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಈ ಅನುದಾನವನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಲಾಗಿದೆ.
ಈ ಸಂಬಂಧ ಪ್ರತಿಕ್ರಿಯೆ ಪಡೆಯಲು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಎಇಇ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದಾಗ ಸಂಪರ್ಕಕ್ಕೆ ಸಿಗಲಿಲ್ಲ.
* ಸ್ವಂತ ಮನೆ ಹಾಗೂ ಮನೆ ಚಾವಣಿ ಮೇಲೆ ಜಾಗ ಹೊಂದಿರಬೇಕು
* ವಿದ್ಯುತ್ ಸಂಪರ್ಕ ಹೊಂದಿರಬೇಕು
* ಬೇರೆ ಯೋಜನೆಗಳಡಿ ಸೌರಫಲಕ ಅಳವಡಿಕೆಗೆ ಸಹಾಯಧನ ಪಡೆದಿರಬಾರದು
ಯೋಜನೆಯ ಲಾಭಗಳು
* 300 ಯುನಿಟ್ ವಿದ್ಯುತ್ ಬಳಕೆಗೆ ಅವಕಾಶ
* ಮಾಸಿಕ ವಿದ್ಯುತ್ ಬಿಲ್‌ನಲ್ಲಿ ಉಳಿತಾಯ
* ಪರಿಸರ ಮಾಲಿನ್ಯ ನಿಯಂತ್ರಣ* ಮನೆಯ ಚಾವಣಿಯ ಸದ್ಬಳಕೆ
* ಹೆಚ್ಚುವರಿ ವಿದ್ಯುತ್ ಮಾರಾಟದಿಂದ ಲಾಭ
* ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.