
ಜೇವರ್ಗಿ: ‘ಸಾಮಾಜಿಕ ಸ್ವಾಸ್ಥ್ಯವೇ ತತ್ವಪದಗಳ ಜೀವಾಳ. ಸಮಾಜದ ಉನ್ನತಿಗೆ ಬೇಕಾದ ಮಾರ್ಗದರ್ಶನವನ್ನು ತತ್ವಪದಕಾರರು ಯಶಸ್ವಿಯಾಗಿ ನೀಡುತ್ತಾರೆ’ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ, ಶಾಸಕ ಡಾ.ಅಜಯಸಿಂಗ್ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ವತಿಯಿಂದ ಪ್ರಥಮ ತತ್ವಪದಕಾರರ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
‘ಜೇವರ್ಗಿ ತಾಲ್ಲೂಕು ಅನೇಕ ಜನ ಶರಣರು, ಸಂತರು, ಸೂಫಿಗಳು, ತತ್ವಪದಕಾರರು ನೆಲೆಸಿದ ಪುಣ್ಯ ತಾಣವಾಗಿದ್ದು, ಇಂತಹ ಪುಣ್ಯದ ನೆಲದಲ್ಲಿ ಪ್ರಪ್ರಥಮ ತತ್ವಪದಕಾರರ ಸಮ್ಮೇಳನ ಆಯೋಜನೆ ಮಾಡಿರುವುದು ಸಂತಸದ ವಿಷಯವಾಗಿದೆ’ ಎಂದರು.
ಸಮ್ಮೇಳನದ ಅಧ್ಯಕ್ಷ ಶಖಾಪೂರ ತಪೋವನಮಠದ ಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ನೆಲೋಗಿ ಸಿದ್ದಲಿಂಗ ಸ್ವಾಮೀಜಿ, ಪಾಳಾದ ಗುರುಮೂರ್ತಿ ಶಿವಾಚಾರ್ಯರು ಸಾನಿದ್ಯ ವಹಿಸಿದ್ದರು.
ಶಿರಸಗಿಯ ಬಸವರಾಜ ಶರಣರು ಆಶಯ ನುಡಿಗಳನ್ನಾಡಿದರು. ಮಾಜಿ ಶಾಸಕರಾದ ರಾಜಕುಮಾರ ಪಾಟೀಲ, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಕೇದಾರಲಿಂಗಯ್ಯ ಹಿರೇಮಠ, ಶಿವರಾಜ ಪಾಟೀಲ, ವಿಜಯಕುಮಾರ ತೇಗಲತಿಪ್ಪಿ, ಮಲ್ಲಿಕಾರ್ಜುನ ವಡ್ಡನಕೇರಿ ಸೇರಿದಂತೆ ಮತ್ತಿತರರು ಆಗಮಿಸಿದ್ದರು.
‘ಹಾಡಿತು ತಪೋವನ ಕೋಗಿಲೆ’ ಮತ್ತು ‘ತಪೋವನ ತತ್ವದರ್ಶನ’ ಕೃತಿಯನ್ನು ಕೇಂದ್ರೀಯ ವಿವಿ ಕುಲಸಚಿವ ಆರ್.ಆರ್.ಬಿರಾದಾರ ಬಿಡುಗಡೆ ಮಾಡಿದರು.
ಮಧ್ಯಾಹ್ನ ನಡೆದ ಪ್ರಥಮ ಗೋಷ್ಠಿಯಲ್ಲಿ ಸಾಹಿತಿ ಡಾ.ನಾಗೇಂದ್ರ ಮಸೂತಿ ಅಧ್ಯಕ್ಷತೆ, ಡಾ.ಧರ್ಮಣ್ಣ ಬಡಿಗೇರ, ಮಹಾಂತಗೌಡ ಪಾಟೀಲ ಸೊನ್ನ ಉಪನ್ಯಾಸ ನೀಡಿದರು. ದ್ವಿತೀಯ ಗೋಷ್ಠಿಯಲ್ಲಿ ಸಾಹಿತಿ ಶಿವರಾಜ ಪಾಟೀಲ ಅಧ್ಯಕ್ಷತೆ, ಚಿಂತಕ ಲಕ್ಷ್ಮೀಕಾಂತ ಮೋಹರೀರ ಆಶಯ ನುಡಿಗಳನ್ನಾಡಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಚೌಡಾಪೂರದ ಮಹಾಂತ ಶಿವಾಚಾರ್ಯರು ಸಾನ್ನಿಧ್ಯ, ಗುವಿವಿ ಕುಲಸಚಿವ ಪ್ರೋ.ರಮೇಶ ಲಂಡನಕರ್ ಅಧ್ಯಕ್ಷತೆ ವಹಿಸಿದ್ದರು. ಚಿತ್ರನಟ ಚೇತನಕುಮಾರ, ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ ಸಮಾರೋಪ ಭಾಷಣ ಮಾಡಿದರು.
ಇದೇ ಸಂದರ್ಭದಲ್ಲಿ ಬಸವಪಟ್ಟಣದ ಮರೆಪ್ಪ ಶರಣರು, ನಿವೃತ್ತ ಉಪ ತಹಶೀಲ್ದಾರ್ ಸಿದ್ಧಯ್ಯ ಮಠಪತಿ, ಸಂಶೋದಕ ಅಶೋಕ ದೊಮ್ಮಲೂರು ಸೇರಿದಂತೆ ವಿವಿಧ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮೆರವಣಿಗೆ: ಪಟ್ಟಣದ ಹಳೆಯ ತಹಶೀಲ್ದಾರ್ ಕಚೇರಿಯಿಂದ ವೇದಿಕೆವರೆಗೆ ನಡೆದ ಸಮ್ಮೇಳನದ ಅಧ್ಯಕ್ಷ ಸಿದ್ದರಾಮ ಶಿವಾಚಾರ್ಯ ಸ್ವಾಮೀಜಿಯವರ ಅದ್ದೂರಿ ಮೆರವಣಿಗೆಯಲ್ಲಿ ಡೊಳ್ಳು, ಭಾಜಾ ಭಜಂತ್ರಿ ಸೇರಿದಂತೆ ಹಲವಾರು ಕಲಾ ತಂಡಗಳು ಭಾಗವಹಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.