ADVERTISEMENT

ಕಲಬುರಗಿಯಲ್ಲಿ ಹೆಚ್ಚುತ್ತಲೇ ಇದೆ ಉಷ್ಣಾಂಶ; ಬಿಸಿಲಿನ ಶಾಖಕ್ಕೆ ಬಳಲಿದ 7 ಜನ

ಮುನ್ನೆಚ್ಚರಿಕೆ ವಹಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2024, 15:29 IST
Last Updated 7 ಏಪ್ರಿಲ್ 2024, 15:29 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ಕಲಬುರಗಿ: ಜಿಲ್ಲೆಯಲ್ಲಿ ಕಳೆದೊಂದು ವಾರದಲ್ಲಿ ಬಿಸಿಲಿನ ಶಾಖದಿಂದ ಸೌಮ್ಯ ಪ್ರಮಾಣದಲ್ಲಿ ಬಳಲಿದ ಏಳು ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಅಧಿಕಾರಿ ಡಾ.ರತಿಕಾಂತ ವಿ.ಸ್ವಾಮಿ ತಿಳಿಸಿದ್ದಾರೆ.

‘ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಬಿಸಿಲಿನ ತಾಪಮಾನವು ಹೆಚ್ಚಾಗಿದ್ದರೂ ಕೂಡಾ ಯಾವುದೇ ಅಹಿತಕರ ಘಟನೆಗಳು ಘಟಿಸಿಲ್ಲ. ಜಿಲ್ಲೆಯಲ್ಲಿ ಈವರೆಗೆ ಬಿಸಿಲ ಶಾಖದಿಂದ ಬಳಲಿದ ಏಳು ಸೌಮ್ಯ ಪ್ರಕರಣಗಳು ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿ ದಾಖಲಾಗಿ ಅಲ್ಲಿಯೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ’ ಎಂದು ಹೇಳಿದ್ದಾರೆ.

ADVERTISEMENT

‘ಹವಾಮಾನ ಇಲಾಖೆಯ ಪ್ರಕಾರ ಇನ್ನೂ ಬಿಸಿಲಿನ ತಾಪಮಾನವು ಇದೇ ತೆರನಾಗಿ ಮುಂದುವರಿಯಲಿದ್ದು, ಸಾರ್ವಜನಿಕರು, ಮಕ್ಕಳು, ಗರ್ಭಿಣಿಯರು ಇನ್ನೂ ಹೆಚ್ಚಿನ ರೀತಿಯಲ್ಲಿ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು. ಬಿಸಿಲಿನ ತಾಪಮಾನದಿಂದ ಆರೋಗ್ಯದಿಂದ ಯಾವುದೇ ತೆರನಾದ ಬದಲಾವಣೆಗಳು ಕಂಡಲ್ಲಿ ಕೂಡಲೇ ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆಯಬೇಕು’ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ವೈದ್ಯಕೀಯ ನೆರವು ಪಡೆಯಿರಿ: ತಾಪಾಘಾತವು ವೈದ್ಯಕೀಯ ತುರ್ತು ಸಂದರ್ಭವಾಗಿದೆ. ಈ ಕೆಳಗಿನ ಚಿಹ್ನೆಗಳು ಅಪಾಯಕಾರಿಯಾಗಿದ್ದು, ಇವುಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯಕೀಯ ನೆರವು ಪಡೆಯಬೇಕು.

ವಯಸ್ಕರಲ್ಲಿ ಅರೆ ಪ್ರಜ್ಞಾವಸ್ಥೆ, ಪ್ರಜ್ಞೆ ತಪ್ಪುವುದು, ಸಿಡಿಮಿಡಿಗೊಳ್ಳುವುದು, ದ್ವಂದ್ವ, ಗಾಬರಿಗೊಳ್ಳುವುದು ಅಥವಾ ಕೋಮಾ ಸ್ಥಿತಿ ತಲುಪುವುದು, ಬಿಸಿ ಕೆಂಪಾದ ಒಣ ಚರ್ಮ, ದೇಹದ ಉಷ್ಣತೆ 40 ಡಿಗ್ರಿ ಸೆ. ಅಥವಾ 104 ಡಿಗ್ರಿ ಎಫ್., ಅತಿ ತಲೆನೋವು, ಆತಂಕ, ತಲೆ ಸುತ್ತುವಿಕೆ ಹಾಗೂ ಪ್ರಜ್ಞೆ ತಪ್ಪುವುದು, ಮಾಂಸ ಖಂಡಗಳಲ್ಲಿ ಸುಸ್ತು ಅಥವಾ ಸೆಳೆತ, ವಾಕರಿಕೆ ಮತ್ತು ವಾಂತಿ, ಹೃದಯ ಬಡಿತ ಹೆಚ್ಚಳ/ ತೀವ್ರವಾದ ಉಸಿರಾಟದ ಚಿಹ್ನೆಗಳು ಅಪಾಯಕಾರಿಯಾಗಿದ್ದು, ಇವುಗಳು ಕಂಡು ಬಂದಲ್ಲಿ ತಕ್ಷಣ ಸಮೀಪದ ವೈದ್ಯರನ್ನು ಸಂಪರ್ಕಿಸಬೇಕು.

ಮಕ್ಕಳು ಆಹಾರ ಸೇವಿಸಲು ನಿರಾಕರಿಸುವುದು, ಅತೀ ಸಿಡಿಮಿಡಿಗೊಳ್ಳುವುದು, ಕನಿಷ್ಠ ಮೂತ್ರ ವಿಸರ್ಜನೆ ಪ್ರಮಾಣ, ಬಾಯಿ ಒಣಗುವಿಕೆ ಹಾಗೂ ಗುಳಿ ಬಿದ್ದ ಕಣ್ಣುಗಳು, ಆಲಸ್ಯ /ಅರೆ ಪ್ರಜ್ಞಾವಸ್ಥೆ, ಮೂರ್ಛೆ ಹೋಗುವುದು, ದೇಹದ ಯಾವುದೇ ಭಾಗದಲ್ಲಿ ರಕ್ತಸ್ರಾವ, ದೇಹದ ಉಷ್ಣಾಂಶ ಹೆಚ್ಚಿಸಿದರೆ, ಬೆವರುವಿಕೆ ಸ್ಥಗಿತವಾಗಿದ್ದರೆ ತಕ್ಷಣವೇ 108/102ಕ್ಕೆ ಸಂಪರ್ಕಿಸಬೇಕು ಎಂದೂ ಆರೋಗ್ಯ ಇಲಾಖೆ ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.