ADVERTISEMENT

ಕಲಬುರ್ಗಿ: ಚೇತರಿಕೆ ನಿರೀಕ್ಷೆಯಲ್ಲಿ ವೃತ್ತಿ ರಂಗಭೂಮಿ

ಕಲಬುರ್ಗಿಯ ಕುಮಾರೇಶ್ವರ ರಂಗಮಂದಿರದಲ್ಲಿ ನಾಟಕ ಪ್ರದರ್ಶನ

ರಾಹುಲ ಬೆಳಗಲಿ
Published 24 ಡಿಸೆಂಬರ್ 2020, 3:58 IST
Last Updated 24 ಡಿಸೆಂಬರ್ 2020, 3:58 IST
ಕಲಬುರ್ಗಿಯ ಸೂಪರ್ ಮಾರ್ಕೆಟ್ ಬಳಿಯಿರುವ ಕುಮಾರೇಶ್ವರ ರಂಗಮಂದಿರ
ಕಲಬುರ್ಗಿಯ ಸೂಪರ್ ಮಾರ್ಕೆಟ್ ಬಳಿಯಿರುವ ಕುಮಾರೇಶ್ವರ ರಂಗಮಂದಿರ   

ಕಲಬುರ್ಗಿ: ‘ಕೊರೊನಾ ಸೋಂಕಿನ ಪ್ರಭಾವವು ಕಡಿಮೆಯಾದ ಕಾರಣ ನಾಟಕ ಪ್ರದರ್ಶನ ಆರಂಭಿಸಿದೆವು. ಇನ್ನೇನೂ ಸಂಕಷ್ಟದ ದಿನಗಳು ಮುಗಿದವು. ಎಲ್ಲವೂ ಮೊದಲಿನಂತಾಗುತ್ತದೆ ಎಂದು ಹರ್ಷಪಟ್ಟೆವು. ಆದರೆ, ಈಗಮತ್ತೆಇಂಗ್ಲೆಂಡ್‌ನಿಂದ ಕೊರೊನಾ ಭೀತಿ ಆವರಿಸಿದೆ. ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಜಾರಿಯಾಗಿದೆ’.

ಗುಬ್ಬಿಯ ಬಿ.ಎಸ್‌.ಆರ್‌.ನಾಟಕ ಸಂಘದ ಕಲಾವಿದರು ಮತ್ತು ತಂತ್ರಜ್ಞರು ವ್ಯಕ್ತಪಡಿಸಿದ ಆತಂಕವಿದು. ನಗರದ ಸೂಪರ್ ಮಾರ್ಕೆಟ್ ಸಮೀಪದ ಕುಮಾರೇಶ್ವರ ರಂಗಮಂದಿರದಲ್ಲಿ ಮೂರು ವಾರಗಳಿಂದ ನಾಟಕ ಪ್ರದರ್ಶಿಸುತ್ತಿರುವ ಅವರು 9 ತಿಂಗಳು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದನ್ನು ನೆನಪಿಸಿಕೊಂಡರು.

ಸಂಘದ ಕಲಾವಿದರು ಮಾರ್ಚ್‌ ತಿಂಗಳಲ್ಲಿ ಶಿರಸಿ ಮತ್ತು ಸಾಗರದಲ್ಲಿ ನಾಟಕ ಪ್ರದರ್ಶಿಸುತ್ತಿದ್ದರು. ಕೊರೊನಾ ನಿಯಂತ್ರಿಸಲು ಏಕಾಏಕಿ ಲಾಕ್‌ಡೌನ್‌ ಘೋಷಣೆಯಾದಾಗ, ನಾಟಕ ಪ್ರದರ್ಶನ ಸ್ಥಗಿತಗೊಳಿಸಿ ಎಲ್ಲರೂ ತಮ್ಮ ಊರುಗಳಿಗೆ ಮರಳಿದರು. ದಿಕ್ಕು ತೋಚದಂತಾದ ಅವರ ಬದುಕಿನಲ್ಲಿ ಸಂಕಷ್ಟದ ಛಾಯೆ ಆವರಿಸಿತು.

ADVERTISEMENT

ಕಲಾವಿದರು ಮತ್ತು ತಂತ್ರಜ್ಞರಿಗೆ ಸಂಘದ ಮಾಲೀಕರು ಮತ್ತು ಸರ್ಕಾರದಿಂದ ನೆರವು ದೊರೆಯಿತು. ಅದು ಸಾಲದಾದಾಗ, ಕೆಲವರು ಹಣ್ಣು ತರಕಾರಿ ವ್ಯಾಪಾರ ಮಾಡಿದರು, ಗಾರೆ ಕೆಲಸದಲ್ಲಿ ತೊಡಗಿಸಿಕೊಂಡರು. ಆಟೊ ಓಡಿಸಿ, ಬದುಕು ಕಟ್ಟಿಕೊಳ್ಳಲು ಯತ್ನಿಸಿದರು.

‘ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರ ನೀಡಿರುವ ಮಾರ್ಗಸೂಚಿ ಅನುಸಾರ ಡಿ.4ರಿಂದ ‘ಚಡ್ಡಿ ಚಿಲಿಕ್ಯಾ ಮಡ್ಡಿ ಮಲಿಕ್ಯಾ’ ನಾಟಕ ಪ್ರದರ್ಶನ ಆರಂಭಿಸಿದೆವು. ಸಾಕಷ್ಟು ಪ್ರಚಾರ ನಡೆಸಿದ್ದರಿಂದ ರಂಗಾಸಕ್ತರು ನಾಟಕ ವೀಕ್ಷಣೆಗೆ ಬಂದರು’ ಎಂದು ಸಂಘದ ಹಿರಿಯ ಕಲಾವಿದ ಶಾಮರಾವ್ ಭೋಸ್ಲೆ ತಿಳಿಸಿದರು.

‘ಪ್ರತಿ ದಿನ ಮಧ್ಯಾಹ್ನ 3 ಮತ್ತು ಸಂಜೆ 6.15ಕ್ಕೆ ನಾಟಕ ಪ್ರದರ್ಶಿಸಿದರೂ ಬದುಕು ಪೂರ್ಣಪ್ರಮಾಣದಲ್ಲಿ ಚೇತರಿಸಿಕೊಂಡಿಲ್ಲ. ರಂಗಮಂದಿರದಲ್ಲಿ ನಾಟಕ ವೀಕ್ಷಣೆಗೆ 150ಕ್ಕೂ ಹೆಚ್ಚು ಕುರ್ಚಿಗಳಿದ್ದು, ಕೆಲ ಸಂದರ್ಭಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಂಗಾಸಕ್ತರು ಬರುವುದಿಲ್ಲ. ಕಡಿಮೆ ಪ್ರೇಕ್ಷಕರ ಮಧ್ಯೆಯೇ ನಾಟಕ ಪ್ರದರ್ಶಿಸುತ್ತೇವೆ’ ಎಂದು ತಿಳಿಸಿದರು.

‘ಜನರ ಬೇಡಿಕೆ ಮತ್ತು ನಾಟಕದ ಜನಪ್ರಿಯತೆ ಆಧಾರದ ಮೇಲೆ ನಾಟಕ ಪ್ರದರ್ಶಿಸುತ್ತೇವೆ. ಕೆಲ ನಾಟಕಗಳು 6 ತಿಂಗಳಿಗೂ ಹೆಚ್ಚು ಕಾಲ ಪ್ರದರ್ಶನಗೊಂಡರೆ, ಕೆಲ ನಾಟಕಗಳು ಒಂದು ತಿಂಗಳು ಅಥವಾ 15 ದಿನ ಪ್ರದರ್ಶನಗೊಂಡರೆ ಹೆಚ್ಚು. ಎಲ್ಲವೂ ಪ್ರೇಕ್ಷಕರ ಆಸಕ್ತಿ ಮತ್ತು ಪ್ರತಿಕ್ರಿಯೆ ಮೇಲೆ ಅವಲಂಬಿಸಿರುತ್ತದೆ’ ಎಂದರು.

ವೃತ್ತಿ ರಂಗಭೂಮಿಯು ಹಲವು ಸವಾಲುಗಳನ್ನು ಎದುರಿಸುತ್ತಿದೆ. ಅಂತರ್ಜಾಲದ ಅಬ್ಬರ, ಸಿನಿಮಾಗಳ ಮಧ್ಯೆಯೂ ಜನರು ನಾಟಕ ನೋಡಲು ಬರುತ್ತಾರೆ ಎಂಬುದೇ ನಮಗೆ ಖುಷಿ ಮತ್ತು ಸಮಾಧಾನ ಎಂದರು.

‘ಕಾಗಕ್ಕ, ಗುಬ್ಬಕ್ಕ’ ನಾಟಕ ಪ್ರದರ್ಶನ
‘ಡಿ.14ರಿಂದ ‘ಕಾಗಕ್ಕ ಗುಬ್ಬಕ್ಕ’ ನಾಟಕ ಪ್ರದರ್ಶಿಸುತ್ತಿದ್ದು, ರಂಗಾಸಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶನಿವಾರ ಮತ್ತು ಭಾನುವಾರದಂದು ಪ್ರೇಕ್ಷಕರ ಸಂಖ್ಯೆ ಹೆಚ್ಚಿರುತ್ತದೆ’ ಎಂದು ಬಿ.ಎಸ್‌.ಆರ್‌.ನಾಟಕ ಸಂಘದ ಅಧ್ಯಕ್ಷ ಜಿ.ಎನ್.ಪ್ರಶಾಂತ ಗುಬ್ಬಿ ತಿಳಿಸಿದರು.

‘ನಾಟಕ ನೋಡಲು ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳಬೇಕು. ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಸರ್ಕಾರದ ನಿಯಮಗಳನ್ನು ತಪ್ಪದೇ ಪಾಲಿಸಬೇಕೆಂದು ಪ್ರತಿ ದಿನ ಮನವಿ ಮಾಡಿಕೊಳ್ಳುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.