ADVERTISEMENT

‘ಫುಲೆ’ ಚಿತ್ರ ಬಿಡುಗಡೆಗೆ ಅಡ್ಡಿ ಸಲ್ಲದು’: ಅರ್ಜುನ ಭದ್ರೆ

​ಪ್ರಜಾವಾಣಿ ವಾರ್ತೆ
Published 7 ಮೇ 2025, 14:09 IST
Last Updated 7 ಮೇ 2025, 14:09 IST
ಅರ್ಜುನ ಭದ್ರೆ
ಅರ್ಜುನ ಭದ್ರೆ   

ಕಲಬುರಗಿ: ‘ಅನಂತ್ ಮಹಾದೇವನ್ ನಿರ್ದೇಶನದ ‘ಫುಲೆ’ ಚಲನಚಿತ್ರದಲ್ಲಿನ ಕೆಲವು ದೃಶ್ಯ ಹಾಗೂ ಸಂಭಾಷಣೆಗೆ ಕೇಂದ್ರ ಸೆನ್ಸಾರ್ ಮಂಡಳಿ ಕತ್ತರಿ ಹಾಕಿದ್ದು ಖಂಡನೀಯ’ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿಯ (ಕ್ರಾಂತಿಕಾರಿ) ರಾಜ್ಯ ಸಂಚಾಲಕ ಅರ್ಜುನ ಭದ್ರೆ ಹೇಳಿದರು.

‘ಸಮಾಜ ಸುಧಾರಕ ಜ್ಯೋತಿಬಾ ಫುಲೆ ಅವರ ಪತ್ನಿ ಸಾವಿತ್ರಿಬಾಯಿ ಫುಲೆ ಅವರು ಭಾರತೀಯ ದಾರ್ಶನಿಕ ಮಹಿಳೆ. ಐವತ್ತು ವರ್ಷಗಳ ಕಾಲ ನಿರಂತರವಾಗಿ ತುಳಿತಕ್ಕೆ ಒಳಗಾದ ಸಮುದಾಯದ ನಡುವೆ ಇದ್ದುಕೊಂಡು ಅವರ ಸೇವೆಯನ್ನು ಮಾಡಿದ್ದವರು. ದಲಿತ ಸಮುದಾಯದ ಬಹುಜನರ ಏಳಿಗೆಗಾಗಿ ಶ್ರಮಿಸಿದ್ದವರು. ಅಂತಹ ಮಹನೀಯರ ಜೀವನಾಧಾರಿತ ಸಿನಿಮಾ ಬಿಡುಗಡೆಗೆ ಅಡ್ಡಿ ಮಾಡಲಾಗುತ್ತಿದೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಅಕ್ಷರವನ್ನು ಅನ್ನದ ದಾರಿ ಎಂದುಕೊಂಡ ಸಾವಿತ್ರಿಬಾಯಿ ಅವರು ಸನಾತನ ಪರಂಪರೆಯ ವಿರುದ್ಧ ಹೋರಾಡಿದ್ದರು. ದಲಿತರಿಗೆ ಅಕ್ಷರವನ್ನೂ ಕಲಿಸಿದ್ದರು. ಇಂತಹ ಮಹಾನ್ ದಂಪತಿಯ ಜೀವನ ಕುರಿತ ಸಿನಿಮಾ ಏಪ್ರಿಲ್ 11ಕ್ಕೆ ಬಿಡುಗಡೆ ಆಗಬೇಕಿತ್ತು. ಆದರೆ, ಬ್ರಾಹ್ಮಣ ಸಮುದಾಯದ ಸಂಘಟನೆಯೊಂದು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಬಿಡುಗಡೆಯ ದಿನಾಂಕ ಮುಂದೂಡಿಕೆಯಾಗಿದೆ. ವೈದಿಕಶಾಹಿಗಳು ಸಿನಿಮಾಗೆ ಅಡೆತಡೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಫುಲೆ’ ಸಿನಿಮಾದಲ್ಲಿ ನಿಜವಾದ ಘಟನೆಗಳ ದೃಶ್ಯಗಳಿವೆ. ಅವುಗಳನ್ನು ತೆಗೆದು ಹಾಕುವ ಕಿಡಿಗೇಡಿತನವನ್ನು ನಿಲ್ಲಿಸಬೇಕು. ಸಿನಿಮಾದ ದೃಶ್ಯಗಳಿಗೆ ಕತ್ತರಿ ಹಾಕದೆ ಯಥಾವತ್ತಾದ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಕ್ರಾಂತಿ, ಮಲ್ಲಿಕಾರ್ಜುನ ಖನ್ನಾ, ಸೂರ್ಯಕಾಂತ ಅಜಾದಪುರ್, ಮಹೇಶ ಕೋಕಿಲೆ, ಮಾನು ಗುರಿಕಾರ, ಅಜೀಜ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.