ADVERTISEMENT

ಟಿಪ್ಪು ಇತಿಹಾಸ ತಿರುಚುವ ಚಟ ಬಿಟ್ಟುಬಿಡಿ: ಪ್ರಿಯಾಂಕ್‌ ಖರ್ಗೆ

ಟಿಪ್ಪು ಸುಲ್ತಾನ್‌ ಜಯಂತಿಯಲ್ಲಿ ಬಿಜೆಪಿ ಮುಖಂಡರಿಗೆ ಸೂಜಿಮೊನೆ ತಾಗಿಸಿದ ಸಚಿವ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2018, 11:15 IST
Last Updated 10 ನವೆಂಬರ್ 2018, 11:15 IST
   

ಕಲಬುರ್ಗಿ: ‘ಟಿಪ್ಪು ಸುಲ್ತಾನ್‌ ಸತ್ತಿದ್ದು ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಹೊರತು; ಹಿಂದೂಗಳ ವಿರುದ್ಧದ ಹೋರಾಟದಲ್ಲಿ ಅಲ್ಲ. ಬಿಜೆಪಿ ಮುಖಂಡರು ಇತಿಹಾಸ ತಿರುಚಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವುದನ್ನು ಬಿಟ್ಟು ಸತ್ಯವನ್ನು ಒಪ್ಪಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಿ’ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಆಶ್ರಯದಲ್ಲಿ ನಗರದಲ್ಲಿ ಶನಿವಾರ ನಡೆದ ಟಿಪ್ಪು ಸುಲ್ತಾನ್‌ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

‘ಟಿಪ್ಪುವಿನ ಯುದ್ಧ ಚಾಣಾಕ್ಷತೆ, ವೈಜ್ಞಾನಿಕ ಮನೋಭಾವ, ಸಮತಾವಾದಿ ನಡೆ, ಶೌರ್ಯ ಈ ದೇಶಕ್ಕೆ ಕಳಶಪ್ರಾಯ. ಭಾರತದ ಇತಿಹಾಸ ಮಾತ್ರವಲ್ಲ; ಯೂರೋಪಿನ ಇತಿಹಾಸದಲ್ಲೂ ಟಿಪ್ಪು ರಾರಾಜಿಸುತ್ತಿದ್ದಾರೆ. ಲಂಡನ್‌ನಲ್ಲಿರುವ ಪುರಾತತ್ವ ವಸ್ತು ಸಂಗ್ರಹಾಲಯದಲ್ಲಿ ಟಿಪ್ಪು ಅವರಿಗಾಗಿಯೇ ಪ್ರತ್ಯೇಕ ವಿಭಾಗವಿದೆ. ಬ್ರಿಟಿಷರನ್ನು ನಡುಗಿಸಿದ ಜಗತ್ತಿನ ಏಕಮಾತ್ರ ನಾಯಕ ಎಂದು ಅಲ್ಲಿನ ಇತಿಹಾಸಕಾರರೇ ಬರೆದಿದ್ದಾರೆ. ಬುದ್ಧಿವಂತರು ಒಮ್ಮೆ ಹೋಗಿ ನೋಡಿಕೊಂಡು ಬನ್ನಿ. ಆಮೇಲೆ ಮಾತನಾಡಿ’ ಎಂದು ಅವರು ಲೇವಡಿ ಮಾಡಿದರು.

ADVERTISEMENT

‘ಟಿಪ್ಪುವಿನ ಕುರಿತು ಸರ್ಕಾರ ಪ್ರಕಟಿಸಿದ ಗ್ರಂಥದಲ್ಲಿ ಬಿಜೆಪಿ ಮುಖಂಡ ಜಗದೀಶ ಶೆಟ್ಟರ್‌ ಅವರೇ ಮುನ್ನುಡಿ ಬರೆದು, ಹಾಡಿ ಹೊಗಳಿದ್ದಾರೆ. ಕೆಜೆಪಿ ಕಟ್ಟಿದಾಗ ಬಿ.ಎಸ್‌.ಯಡಿಯೂರಪ್ಪ, ಶೋಭಾ ಕರಂದ್ಲಾಚೆ ಅವರು ಟಿಪ್ಪು ಕಿರೀಟ ಧರಿಸಿ, ಖಡ್ಗ ಹಿಡಿದು ಮೆರೆದರು. ಈಗ ಅದೇ ಸುಲ್ತಾನನ ವಿರುದ್ಧ ಮಾತನಾಡಲು ಇವರಿಗೆ ನೈತಿಕತೆ ಬೇಡವೇ?’ ಎಂದು ಖಾರವಾಗಿ ಪ್ರಶ್ನಿಸಿದರು.

‘ಇಷ್ಟಕ್ಕೂ, ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ, ಆರ್‌ಎಸ್‌ಎಸ್‌ ಮುಖಂಡರ ಪಾಲು ಏನು? ಸ್ವಾತಂತ್ರ್ಯ ನಂತರ ದೇಶಕ್ಕೆ ನಿಮ್ಮ ಕೊಡುಗೆ ಏನು? ಕರ್ನಾಟಕ ಏಕೀಕರಣದಲ್ಲಿ ಯಾರಾದರೂ ಪ್ರಾಣ ಕೊಟ್ಟಿದ್ದೀರೇನು? ಬರೀ ಮಾತಿನಲ್ಲಿ ದೇಶಭಕ್ತಿ ಕೊಚ್ಚಿಕೊಂಡರೆ ಮುಗಿಯಿತೇ?’ ಎಂದು ಅವರು ಮಾತಿನಲ್ಲೇ ಸೂಜಿಮೊನೆ ತಾಗಿಸಿದರು.

ಶಾಸಕಿ ಕನೀಜ್‌ ಫಾತಿಮಾ, ಮೇಯರ್‌ ಮಲ್ಲಮ್ಮ ವಳಕೇರಿ, ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ, ಎಸ್ಪಿ ಎನ್‌.ಶಶಿಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪಿ.ರಾಜ, ಪಾಲಿಕೆ ಆಯುಕ್ತ ಪೆದ್ದಪ್ಪಯ್ಯ ಆರ್.ಎಸ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್‌ ಮರಬನಳ್ಳಿ ವೇದಿಕೆ ಮೇಲಿದ್ದರು.

ಟಿಪ್ಪು ಕೂಡ ಸೂಫಿ ಸಂತ

‘ಟಿಪ್ಪು ಮಹಾಶೂರನಾಗಿದ್ದರೂ ಸಮಾಜವಾದಿ ತತ್ವದಲ್ಲಿ ಆಡಳಿತ ನಡೆಸಿದ. ಒಬ್ಬ ಸೂಫಿ ಸಂತರಿಗೆ ಇರಬೇಕಾದ ಎಲ್ಲ ಗುಣಗಳೂ ಅವರಲ್ಲಿ ಇದ್ದವು’ ಎಂದು ಸೊಲ್ಲಾಪುರದ ಉಪನ್ಯಾಸಕ ಮಹಮದ್‌ ನಿಜಾಮುದ್ದೀನ್‌ ಅಭಿಪ್ರಾಯಪಟ್ಟರು.

ವಿಶೇಷ ಉಪನ್ಯಾಸ ನೀಡಿದ ಅವರು, ‘ಮಹಾತ್ಮ ಗಾಂಧೀಜಿ ತಮ್ಮ ‘ಎಂಗ್‌ ಇಂಡಿಯಾ’ ಪತ್ರಿಕೆಯಲ್ಲಿ ಟಿಪ್ಪುವನ್ನು ‘ಜಾತ್ಯತೀತ ರಾಜ’ ಎಂದು ಬರೆದಿದ್ದರು. ಆತ ಎಷ್ಟು ಶೂರನಾಗಿದ್ದನೋ ಅಷ್ಟೇ ಸಂತನೂ ಆಗಿದ್ದ’ ಎಂದರು.

ತಾರಾಮಂಡಲ ಪೇಟೆ ಗೊತ್ತೇ?

‘ಕಲಬುರ್ಗಿ ನಗರದ ಎಸ್‌ಪಿ ರಸ್ತೆ ನಿಮಗೆ ಗೊತ್ತಿರಬಹುದು. ಟಿಪ್ಪು ಕಾಲದಲ್ಲಿ ಈ ಜಾಗವನ್ನು ‘ತಾರಾಮಂಡಲ ಪೇಟೆ’ ಎಂದು ಕರೆಯುತ್ತಿದ್ದರು ಎಂಬ ಮಾಹಿತಿ ಇದೆ. ಅಲ್ಲಿ ಭೌಗೋಳಿಕ ಸಂಶೋಧನೆಗೆ ಆಸ್ಪದ ನೀಡಿದ್ದು ಟಿಪ್ಪು’ ಎಂದು ಸಚಿವ ಪ್ರಯಾಂಕ್‌ ಖರ್ಗೆ ಹೇಳಿದರು.

‘ನಮ್ಮ ಪ್ರಧಾನಿ ಈಗ ‘ಮೇಕ್‌ ಇನ್‌ ಇಂಡಿಯಾ’ ಎನ್ನುತ್ತಿದ್ದಾರೆ. ಆದರೆ, 250 ವರ್ಷಗಳ ಹಿಂದೆಯೇ ಟಿಪ್ಪು ‘ಮೇಕ್‌ ಇನ್‌ ಮೈಸೂರು’ ಮಾಡಿದ್ದರು. ವಿದೇಶಿ ತಂತ್ರಜ್ಞರನ್ನು ಕರೆಯಿಸಿ ಗನ್‌ಗಳನ್ನು ತಯಾರಿಸಿದ್ದರು. ರಾಕೆಟ್‌ ಅಭಿವೃದ್ಧಿಪಡಿಸಿದ ಜಗತ್ತಿನ ಮೊದಲ ದೊರೆ ಟಿಪ್ಪು. ಅವರು ಸತ್ತ ಮೇಲೆ ಮೈಸೂರಿನಲ್ಲಿ 9 ಸಾವಿರಕ್ಕೂ ಹೆಚ್ಚು ರಾಕೆಟ್‌ಗಳು ದೊರೆತವು. ಅವರು ತಯಾರಿಸಿದ ರಾಕೆಟ್‌ ಮಾದರಿ ಈಗಲೂ ‘ಇಸ್ರೊ’ದಲ್ಲಿ ಇದೆ’ ಎಂದು ವಿವರಿಸಿದರು.

ಟಿಪ್ಪು ಆಸ್ಥಾನದಲ್ಲಿ ಹಿಂದೂ ಮಂತ್ರಿಗಳು

‘ಮೈಸೂರನ್ನು ಆಳುತ್ತಿದ್ದಾಗ ಟಿಪ್ಪುವಿನ ಆಸ್ಥಾನದಲ್ಲಿದ್ದ 15 ಮಂತ್ರಿಗಳಲ್ಲಿ 12 ಮಂದಿ ಹಿಂದೂಗಳೇ ಆಗಿದ್ದರು. ಸುಲ್ತಾನ್‌ ಹಿಂದೂ ವಿರೋಧಿಯಾಗಿದ್ದರೆ ಆಸ್ಥಾನದಲ್ಲಿ ಹಿಂದೂ ಮಂತ್ರಿಗಳು ಬದುಕಿರುತ್ತಿದ್ದರೇ?’ ಎಂದು ವಿಜಯಪುರದ ಉಪನ್ಯಾಸಕ ಹಾಸೀಮ್‌ ಪೀರ್‌ ವಾಲೀಕಾರ್‌ ಪ್ರಶ್ನಿಸಿದರು.

ವಿಶೇಷ ಉಪನ್ಯಾಸ ನೀಡಿದ ಅವರು, ‘ಮೈಸೂರು ಸುತ್ತಲಿನ 156 ದೇವಸ್ಥಾನಗಳಿಗೆ ನಿರಂತರ ದತ್ತಿ ದೇಣಿಗೆ ನೀಡಿದ್ದು, ಶೃಂಗೇರಿ ಶಾರದಾ ಪೀಠವನ್ನು ಮರಾಠರ ದಾಳಿಯಿಂದ ರಕ್ಷಿಸಿದ್ದು, ಬ್ರಿಟಿಷರ ವಿರುದ್ಧ ಒಂದಾಗಿ ಹೋರಾಡಲು ಭಾರತದ ಎಲ್ಲ ರಾಜರನ್ನೂ ಸಂಪರ್ಕಸಿದ್ದು ಟಿಪ್ಪುವನ ದೇಶಪ್ರೇಮ, ಧರ್ಮಸಹಿಷ್ಣುತೆಗೆ ಸಾಕ್ಷಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.