ADVERTISEMENT

ಜಿಲ್ಲೆಯಲ್ಲಿ ಇಂದು ಬಂದ್‌: ವಿವಿಧ ಸಂಘಟನೆಗಳ ಬೆಂಬಲ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 9:20 IST
Last Updated 28 ಸೆಪ್ಟೆಂಬರ್ 2020, 9:20 IST

ಕಲಬುರ್ಗಿ: ಭೂ ಸುಧಾರಣಾ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಗಳಿಗೆ ತಂದ ತಿದ್ದುಪಡಿ ವಿರೋಧಿಸಿ, ದೇಶದಾದ್ಯಂತ ಬಂದ್‌ ಕರೆ ನೀಡಿದ ಅಂಗವಾಗಿ ಜಿಲ್ಲೆಯಲ್ಲಿಯೂ ಸೆ. 28ರಂದು ಬಂದ್ ಆಚರಿಸಲು ನಿರ್ಧರಿಸಲಾಗಿದೆ.

ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ 33ಕ್ಕೂ ಹೆಚ್ಚು ಸಂಘಟನೆಗಳು ಈ ಬಂದ್‌ಗೆ ಕರೆ ನೀಡಿವೆ.ಕರ್ನಾಟಕ ಪ್ರಾಂತ ರೈತ ಸಂಘ, ರಾಜ್ಯ ರೈತ ಸಂಘ, ಹಸಿರು ಸೇನೆ, ಸಿಐಟಿಯುಸಿ, ಎಸ್‌ಡಿಪಿಐ, ಕೆಕೆಆರ್‌, ಆರ್‌ಪಿಐ, ಕರ್ನಾಟಕ ರಕ್ಷಣಾ ವೇದಿಕೆ, ಎಸ್‌ಎಫ್ಐ, ಸಿಐಟಿಯು, ಜಿಲ್ಲಾ ಕಾರ್ಮಿಕರ ಹೋರಾಟ ಸಮಿತಿ, ಜೈ ಕನ್ನಡಿಗರ ರಕ್ಷಣಾ ವೇದಿಕೆ, ಜೆಡಿಎಸ್‌ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರೂ ಬಂದ್‌
ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದುತಿಳಿಸಲಾಗಿದೆ.

ಹಾಲು, ತರಕಾರಿ, ಔಷಧಿ ಸೇರಿದಂತೆ ಎಲ್ಲ ತುರ್ತು ಹಾಗೂ ಅಗತ್ಯ ವಸ್ತುಗಳ ಮಾರಾಟಕ್ಕೆ ತೊಂದರೆ ಇಲ್ಲ. ಉಳಿದ ವರ್ತಕರು, ಎಲ್ಲ ಬಗೆಯ ಖಾಸಗಿ ವಾಹನಗಳ ಚಾಲಕರ ಸಂಘದವರು ಸ್ವಯಂ ಪ್ರೇರಣೆಯಿಂದ ಬಂದ್‌ ಮಾಡಿ ಸಹಕರಿಸಬೇಕು ಎಂದು ರೈತ ಮುಖಂಡರು ಕೋರಿದ್ದಾರೆ. ಆದರೆ, ಸರ್ಕಾರಿ ಬಸ್‌ ಸಂಚಾರ ಹಾಗೂ ಕಚೇರಿ ಕೆಲಸಗಳಿಗೆ ಯಾವುದೇ ಅಡಚಣೆ ಇರಲ್ಲ ಜಿಲ್ಲಾಡಳಿತ ಮೂಲಗಳು ತಿಳಿಸಿವೆ.

ADVERTISEMENT

ಜೆಡಿಎಸ್‌ ಬೆಂಬಲ: ಎಪಿಎಂಸಿ ಹಾಗೂ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತಪರ ಸಂಘಟನೆಗಳು ಹಾಗೂ ಕಾರ್ಮಿಕ ಸಂಘಟನೆಗಳಿಂದ ಕರೆಯಲಾದ ರಾಜ್ಯ ಬಂದ್‌ಗೆ ಜೆಡಿಎಸ್ ಜಿಲ್ಲಾ ಘಟಕದ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ ತಿಳಿಸಿದ್ದಾರೆ.

ಬೆಂಬಲ: ಭೂ ಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತರು, ರೈತಪರ ಸಂಘಟನೆಗಳು ನಡೆಸುತ್ತಿರುವ ಹೋರಾಟಕ್ಕೆ ಜೈ ಕನ್ನಡಿಗರ ರಕ್ಷಣಾ ವೇದಿಕೆ ಬೆಂಬಲ ನೀಡುತ್ತದೆ. ರಾಜ್ಯ ಸರ್ಕಾರ ಏಕಪಕ್ಷೀಯ ನಿರ್ಧಾರ ಕೈ ಗೊಂಡಿರುವುದು ಸರಿಯಲ್ಲ. ರೈತಾಪಿ ವರ್ಗಕ್ಕೆ ಸರ್ಕಾರ ಅನ್ಯಾಯ ಮಾಡುತ್ತಿದೆ. ಈ ನಿಟ್ಟಿನಲ್ಲಿ ರೈತರ ಪರವಾಗಿ ತಾವು ನಿಲ್ಲುವುದಾಗಿ ವೇದಿಕೆ ಅಧ್ಯಕ್ಷ ಸಚಿನ್ ಫರಹತಾಬಾದ್ ತಿಳಿಸಿದ್ದಾರೆ.

ಅದೇ ರೀತಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ, ದಲಿತ ಹಾಗೂ ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆಗಳನ್ನು ಖಂಡಿಸಿ ಸೆ. 28ರಂದು ಕರೆ ನೀಡಿದ ‘ಭಾರತ ಬಂದ್’ಗೆ ಬೆಂಬಲ ನೀಡು
ವುದಾಗಿ ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕರಾದ ಪಾಂಡುರಂಗ ಮಾವಿನಕರ ಹಾಗೂ ಸುಧಾಮ ಧನ್ನಿ ತಿಳಿಸಿದ್ದಾರೆ. ಬಂದ್‌ಗೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಜೈ ಕನ್ನಡಿಗರ ಸೇನೆ ಸಂಸ್ಥಾಪಕ ಅಧ್ಯಕ್ಷ ದತ್ತು ಹೆಚ್ ಭಾಸಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.