ADVERTISEMENT

ರೈತರಿಗೆ ದ್ರೋಹ ಬಗೆದ ಬಿಜೆಪಿ ಸರ್ಕಾರ: ಕಮ್ಮರಡಿ ಪ್ರಕಾಶ್

200 ಟ್ರ್ಯಾಕ್ಟರ್‌ಗಳ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 5:17 IST
Last Updated 26 ಜನವರಿ 2021, 5:17 IST

ಕಲಬುರ್ಗಿ: ಕೇಂದ್ರ ಸರ್ಕಾರದ ಕೃಷಿ ನೀತಿಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ನಗರದಲ್ಲಿಯೂ ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿ ಹಾಗೂ ಕಾಂಗ್ರೆಸ್ ನೇತೃತ್ವದಲ್ಲಿ ವಿವಿಧ ರೈತ ಸಂಘಟನೆಗಳು ಇದೇ 26ರಂದು ಗಣರಾಜ್ಯೋತ್ಸವದ ಅಂಗವಾಗಿ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲಿವೆ.

ಇದಕ್ಕಾಗಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಕಾಂಗ್ರೆಸ್ಮುಖಂಡ ಬಿ.ಆರ್. ಪಾಟೀಲ, ಬಾಬಾಖಾನ, ಶೌಕತ್‍ಅಲಿ ಆಲೂರ, ಉಮಾಪತಿ ಪಾಟೀಲ, ಶರಣು ಭೂಸನೂರ, ಅಬ್ದುಲ್ ಹಮೀದ್, ಶರಣಬಸಪ್ಪ ಮಮಶೆಟ್ಟಿ, ಗಣೇಶ ಪಾಟೀಲ, ಎಸ್.ಆರ್.ಕೊಲ್ಲೂರ, ಎಸ್‌.ಎಂ.ಶರ್ಮಾ, ಮೆಹಬೂಬ್ ಮೊಕ್ಕದ್ದಮ ಜಿಲ್ಲೆಯ ವಿವಿಧ ಭಾಗಗಳಿಂದ 200 ಟ್ರ್ಯಾಕ್ಟರ್‌ಗಳನ್ನು ತರಲು ಯೋಜಿಸಿರುವುದಾಗಿ ತಿಳಿಸಿದರು. ಸುಮಾರು 1500 ರೈತರು ಭಾಗವಹಿಸಲಿದ್ದಾರೆ.

ಸೋಮವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ. ಪ್ರಕಾಶ ಕಮ್ಮರಡಿ, ‘ದೆಹಲಿಯ ಹೋರಾಟ ಚಾರಿತ್ರಕವಾಗಿಲಿದೆ. ಅದರಂತೆ ಬೆಂಗಳೂರು ಮತ್ತು ಕಲಬುರ್ಗಿಯಲ್ಲಿ ಜ 26ರಂದು ಐತಿಹಾಸಿಕ ಹೋರಾಟ ನಡೆಸಲು ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಅನ್ನದಾರರ ಪರವಾಗಿರುವವರು ಪಾಲ್ಗೊಳ್ಳಬೇಕು’ ಎಂದು ರೈತರ ಮುಖಂಡರೆಲ್ಲರು ಮನವಿ ಮಾಡಿದರು.

ADVERTISEMENT

‘ಕಾರ್ಪೊರೇಟ್ ವಲಯದವರಿಗೆ ಕೃಷಿ ಭೂಮಿ ಸಿಗುವಂತೆ ಮಾಡಬೇಕು, ಎಪಿಎಂಸಿಯನ್ನು ಸಂಪೂರ್ಣವಾಗಿ ಹಾಳು ಮಾಡಿ ರೈತರನ್ನು ಬೀದಿಪಾಲು ಮಾಡಲು ಕೊರೊನಾ ಸಂಕಷ್ಟದಲ್ಲಿದ್ದ ಜನರನ್ನು ಕತ್ತಲಲ್ಲಿಟ್ಟು ಕೃಷಿಕರ ವಿರೋಧಿಯಾಗಿ ಮೂರು ಕಾಯ್ದೆ
ಗಳನ್ನು ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ರೂಪಿಸಿ ಜಾರಿಗೊಳಿಸಿದ್ದು ಸಂವಿಧಾನ ಬಾಹಿರವಾಗಿದೆ. ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಲಿದೆ ಎಂಬ ಕಾರಣಕ್ಕೆ ದೇಶದಲ್ಲಿ ಕೋಟ್ಯಂತರ ರೈತರು ಸಂಘಟಿತರಾಗಿ ಹೋರಾಟಕ್ಕಿಳಿದಿದ್ದಾರೆ’ ಎಂದರು.

‘ಎಪಿಎಂಸಿ ರಾಜ್ಯ ಸರ್ಕಾರದ ಪರಿಧಿ. ಆದರೆ, ಕಾಯ್ದೆ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರದ ಅಧಿಕಾರಿ ಮೇ ತಿಂಗಳಲ್ಲಿ ಬರೆದಂತೆ ಸದನ ನಡೆಸದೆ, ಕೇಂದ್ರ ಸರ್ಕಾರ ಕಳುಹಿಸಿದ ಕರಡು ಮುಂದಿಟ್ಟುಕೊಂಡು ಸುಗ್ರೀವಾಜ್ಞೆ ಹೊರಡಿಸಲಾಯಿತು’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.