ADVERTISEMENT

ಅಮೃತಸರ ರೈಲು ದುರಂತ ಬಗ್ಗೆ ಉನ್ನತ ತನಿಖೆಯಾಗಲಿ: ಮಲ್ಲಿಕಾರ್ಜುನ ಖರ್ಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2018, 9:57 IST
Last Updated 20 ಅಕ್ಟೋಬರ್ 2018, 9:57 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಕಲಬುರ್ಗಿ: ‘ಅಮೃತಸರ ರೈಲ್ವೆ ದುರಂತಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕು’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರೈಲ್ವೆ ಹಳಿ ಪಕ್ಕ ಸಾರ್ವಜನಿಕ ಕಾರ್ಯಕ್ರಮ ಮಾಡುವಾಗ ಇಲಾಖೆ ಎಚ್ಚರಿಕೆ ವಹಿಸಬೇಕಿತ್ತು. ಯಾವುದೇ ಮುನ್ನೆಚ್ಚರಿಕೆ ಕೈಗೊಳ್ಳದೆ ಕಾರ್ಯಕ್ರಮ ಮಾಡಿರುವುದು ರೈಲ್ವೆ ಇಲಾಖೆ ಹಾಗೂ ರೈಲ್ವೆ ಪೊಲೀಸರ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ’ ಎಂದು ಹೇಳಿದರು.

‘ಈ ಬಗ್ಗೆ ಇಲಾಖೆ ಮಟ್ಟದಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಮುಂಬರುವ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಧಾರ್ಮಿಕ ವಿಚಾರ ಮಾತನಾಡಲ್ಲ:ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದಂತೆ ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ‘ರಾಜಕೀಯದಲ್ಲಿ ಧಾರ್ಮಿಕ ವಿಚಾರ ಮಾತನಾಡುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಈ ಮಾತುಗಳು ಅಗತ್ಯವಿಲ್ಲ. ನಾವು ಪಕ್ಷದ ಪ್ರಣಾಳಿಕೆ ಮೇಲೆ ಮತ ಕೇಳುತ್ತೇವೆ. ಧರ್ಮಕ್ಕೆ ಸಂಬಂಧಿಸಿದಂತೆ ಬೇಕಿದ್ದರೆ ಧಾರ್ಮಿಕ ಸಂವಾದ ಆಯೋಜಿಸಲಿ, ನಾನು ಮಾತನಾಡುತ್ತೇನೆ’ ಎಂದರು.

‘ಸಚಿವ ಡಿ.ಕೆ.ಶಿವಕುಮಾರ್ ಕ್ಷಮೆಯಾಚನೆ ವಿಚಾರ ನನಗೆ ಗೊತ್ತಿಲ್ಲ. ನಾನು ಆ ಸರ್ಕಾರದಲ್ಲಿ ಇರಲಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರದಲ್ಲಿ ಸುಪ್ರೀಂಕೋರ್ಟ್ ಹೇಳಿದ್ದನ್ನು ನಾವೆಲ್ಲರೂ ಪಾಲಿಸಬೇಕು. ನಮ್ಮ ಹಕ್ಕುಗಳು ಮೊಟಕುಗೊಂಡಾಗ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ. ಸಂವಿಧಾನ ಹೇಳಿದ ಹಾಗೆ ನಾವು ನಡೆದುಕೊಳ್ಳಬೇಕು. ಈ ವಿಚಾರವಾಗಿ ನಾನು ರಾಜಕೀಯ ಮಾಡುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.