ADVERTISEMENT

ಹಾಸನ- ಸೋಲಾಪುರ ರೈಲಿನ ಬ್ರೇಕ್ ಬೈಂಡಿಂಗ್‌ನಲ್ಲಿ ದಟ್ಟ ಹೊಗೆ!

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 4:53 IST
Last Updated 21 ಜುಲೈ 2025, 4:53 IST
   

ಕಲಬುರಗಿ: ಇಲ್ಲಿನ ಮರತೂರು ಸಮೀಪದಲ್ಲಿ ಸೋಮವಾರ ಹಾಸನ- ಸೋಲಾಪುರ ಎಕ್ಸ್‌ಪ್ರೆಸ್‌ ರೈಲಿನ ಬ್ರೇಕ್ ಬೈಂಡಿಂಗ್‌ನಲ್ಲಿ ದಟ್ಟ ಹೊಗೆ ಕಾಣಿಸಿಕೊಂಡು ಕೆಲ ಹೊತ್ತು ಪ್ರಯಾಣಿಕರಲ್ಲಿ ಆತಂಕ ಉಂಟು ಮಾಡಿತು.

ರೈಲಿನ 4ನೇ ಕೋಚ್‌ನ ಬ್ರೇಕ್ ಬೈಂಡಿಂಗ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಇದರಿಂದಾಗಿ ಬ್ರೇಕ್‌ ಬೈಂಡಿಂಗ್‌ನಿಂದ ದಟ್ಟ ಹೊಗೆ ಬರುತ್ತಿತ್ತು. ಮರತೂರು ನಿಲ್ದಾಣ‌ ಸಮೀಪದಲ್ಲಿ ಇದ್ದ ರೈಲ್ವೆ ಗಾರ್ಡ್ ಒಬ್ಬರು ಇದನ್ನು ಗಮನಿಸಿ ರೈಲು ನಿಲ್ಲಿಸುವಂತೆ ನಿಲ್ದಾಣಕ್ಕೆ ಸೂಚಿಸಿದರು.

ನಿಲ್ದಾಣದಲ್ಲಿ ರೈಲು ನಿಲುಗಡೆ ಆಗುತ್ತಿದ್ದಂತೆ ನಿದ್ರೆಯಲ್ಲಿದ್ದ ಪ್ರಯಾಣಿಕರಿಗೆ ದಟ್ಟ ಹೊಗೆಯ ಬಗ್ಗೆ ಕಿವಿಗೆ ಬಿತ್ತು. ಆತಂಕದಿಂದ ರೈಲಿನಿಂದ ಇಳಿದು ಪ್ಲಾಟ್‌ಫಾರ್ಮ್‌ನತ್ತ ತೆರಳಿದರು. ಕೆಲವರು ರೈಲಿನ ಹಳಿಗಳ ಮೇಲೆ ನಿಂತು ಹೊಗೆ ಬರುವುದನ್ನು ನೋಡುತ್ತಾ ನಿಂತರು. ರೈಲಿನ ಸಿಬ್ಬಂದಿ ಬಂದು ಹೊಗೆ ಬರುವುದನ್ನು ನಿಲ್ಲಿಸಿ, ಬ್ರೇಕ್ ಬೈಂಡಿಂಗ್‌ನಲ್ಲಿನ ತಾಂತ್ರಿಕ ದೋಷವನ್ನು ಸರಿಪಡಿಸಿದರು.

ADVERTISEMENT

ಈ ಬಗ್ಗೆ 'ಪ್ರಜಾವಾಣಿ'ಗೆ ಪ್ರತಿಕ್ರಿಯೆ ನೀಡಿದ ಕಲಬುರಗಿ ರೈಲು ನಿಲ್ದಾಣದ ಸ್ಟೇಷನ್‌ ಮ್ಯಾನೇಜರ್‌ ಜಿ.ಜಿ.ಮೋಹನ್‌, 'ರೈಲು ನಿಲುಗಡೆ ಹಾಗೂ ನಿಧಾನಕ್ಕೆ ಚಲಾಯಿಸುವಾಗ ಬ್ರೇಕ್ ಬೈಂಡಿಂಗ್ ಗಾಲಿಗೆ ತಾಗುತ್ತದೆ.‌ ಅದನ್ನು ಮತ್ತೆ ಹಿಂದಕ್ಕೆ ತೆಗೆದರೆ ಸರಾಗವಾಗಿ ರೈಲು ಚಲಾಯಿಸುತ್ತದೆ. ಕೆಲವೊಮ್ಮೆ ಗಾಲಿಗೆ ತಾಗಿಕೊಂಡೇ ಇದ್ದರೆ ಹೊಗೆ ಕಾಣಿಸಿಕೊಳ್ಳುತ್ತದೆ. ಹಾಸನ-ಸೋಲಾಪುರ ರೈಲಿಗೆ ಬ್ರೇಕ್ ಬೈಂಡಿಂಗ್ ಗಾಲಿಗೆ ತಾಗಿಕೊಂಡಿದ್ದರಿಂದ ಹೊಗೆ ಕಾಣಿಸಿಕೊಂಡಿತ್ತು. ತಕ್ಷಣವೇ ಸಿಬ್ಬಂದಿ ಅದನ್ನು ಸರಿಪಡಿಸಿದ್ದು, ಯಾವುದೇ ಹಾನಿಯಾಗಿಲ್ಲ. ರೈಲು ಕೂಡ ಸೋಲಾಪುರದ ಕಡೆಗೆ ತೆರಳಿದೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.