
ವಾಡಿ (ಕಲಬುರಗಿ ಜಿಲ್ಲೆ): ನಿಂದನೆ, ಅಪಹಾಸ್ಯದ ನಡುವೆ ಜೀವನ ಪ್ರೀತಿಯನ್ನು ಉಳಿಸಿಕೊಂಡಿದ್ದ ಲಿಂಗತ್ವ ಅಲ್ಪಸಂಖ್ಯಾತೆಯೊಬ್ಬರು ₹65 ಲಕ್ಷ ವೆಚ್ಚದಲ್ಲಿ ದರ್ಗಾ ಕಟ್ಟಿಸಿದ್ದಾರೆ.
ಇವರು, ಚಿತ್ತಾಪುರ ತಾಲ್ಲೂಕಿನ ಹಣ್ಣಿಕೇರಾ ಗ್ರಾಮದ ನಿವಾಸಿ ಶಾಂತಿಯಮ್ಮ. ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಅಭಿಮಾನಿ ಯೂ ಹೌದು. ಮುಂಬೈನಲ್ಲಿದ್ದ ಸ್ವಂತ ಮನೆಯನ್ನು ಮಾರಿ, ಆ ಹಣದಲ್ಲಿ ಗ್ರಾಮವ್ಯಾಪ್ತಿಯ ಕಡಿದಾದ ಬೆಟ್ಟದ ಮೇಲೆ ಹಜರತ್ ಮೌಲಾಲಿ ದರ್ಗಾ ನಿರ್ಮಿಸಿದ್ದಾರೆ.
ದರ್ಗಾದ ಗುಂಬಜ್ 15 ಅಡಿ ಎತ್ತರವಿದೆ. ನಾಲ್ಕು ಮಿನಾರು ಹೊಂದಿದೆ. ದರ್ಗಾಕ್ಕೆ 5.5 ಕೆ.ಜಿ ತೂಕದ ಬೆಳ್ಳಿ ಕುದುರೆಯನ್ನು ಅರ್ಪಿಸಿ, ಶೀಘ್ರವೇ ಉದ್ಘಾಟನೆ ನೆರವೇರಿಸುವ ತೀರ್ಮಾನ ಮಾಡಿದ್ದಾರೆ.
ಶಾಂತಿಯಮ್ಮ 25 ವರ್ಷಗಳ ಹಿಂದೆ ಮುಂಬೈನಿಂದ ಹಣ್ಣಿಕೇರಾಕ್ಕೆ ಬಂದು ನೆಲೆನಿಂತರು. ಬೆಟ್ಟದ ಮೇಲೆ ಕೋಮು ಸೌಹಾರ್ದದ ಪ್ರತೀಕವಾಗಿ ದರ್ಗಾ ಮತ್ತು ದೇವಸ್ಥಾನ ನಿರ್ಮಿಸುವ ಬಯಕೆಯನ್ನು ಗ್ರಾಮಸ್ಥರ ಎದುರು ಇಟ್ಟಾಗ, ಸ್ಥಳೀಯರಿಂದ ಪ್ರೋತ್ಸಾಹದ ಬದಲು ಅಪಹಾಸ್ಯ ಎದುರಾಗಿತ್ತು.
ಇದನ್ನೇ ಸವಾಲಾಗಿ ಸ್ವೀಕರಿಸಿ 2023ರಲ್ಲಿ ದರ್ಗಾ ನಿರ್ಮಿಸಲು ಅಣಿಯಾದರು. ಹಣ್ಣಿಕೇರಾ ಮತ್ತು ಕರದಾಳ ರಸ್ತೆಗೆ ಹೊಂದಿಕೊಂಡ ಅಂದಾಜು 550 ಅಡಿ ಎತ್ತರದ ಬೆಟ್ಟದ ಮೇಲೆ ದರ್ಗಾ ನಿರ್ಮಿಸಲು ಆರಂಭಿಸಿದರು. ಅವರಿಗೆ ಬೆಟ್ಟದ ತುದಿಗೆ ಸಾಮಗ್ರಿಯನ್ನು ಸಾಗಿಸುವುದೇ ಕಠಿಣವಾಯಿತು.
ನಿರ್ಮಾಣ ವೆಚ್ಚ ಅಂದಾಜನ್ನು ಮೀರಿ ದರೂ ಛಲ ಬಿಡಲಿಲ್ಲ. ಅಂತಿಮವಾಗಿ 2024ರ ಮೇ ತಿಂಗಳಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಂಡಿತು.
‘ದರ್ಗಾ ಗಮನ ಸೆಳೆಯುತ್ತಿದೆ. ಶಾಂತಿಯಮ್ಮ ಅವರ ಕಾರ್ಯ ಶ್ಲಾಘನೀಯ’ ಎನ್ನುತ್ತಾರೆ ಕರದಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುಮ್ತಾಜ್ ಬೇಗಂ, ಸ್ಥಳೀಯ ಮುಖಂಡ ಮಲ್ಲಣ್ಣಗೌಡ ಮಾಲಿಪಾಟೀಲ.
ಗ್ರಾಮದಲ್ಲಿ ಮಕ್ಕಳಿಗೆ ಉಚಿತವಾಗಿ ಪಾಠ ಹೇಳಿಕೊಡುವ ಶಾಂತಿಯಮ್ಮ, ಹಲವು ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಕ್ಕೂ ಕೈ ಜೋಡಿಸಿದ್ದಾರೆ.
‘ದೇಗುಲವನ್ನೂ ನಿರ್ಮಿಸುತ್ತೇನೆ’
‘ಪ್ರತಿ ವರ್ಷ ಮೊಹರಂ ವೇಳೆ ಹಣ್ಣಿಕೇರಾ ಗ್ರಾಮಕ್ಕೆ ಬರುತ್ತಿದ್ದೆ. ಇದನ್ನೇ ತವರಾಗಿಸಿ ಕೊಂಡಿದ್ದೇನೆ. ದರ್ಗಾ ನಿರ್ಮಿಸಬೇಕು ಎಂಬ ಬೇಡಿಕೆಗೆ ಸ್ಪಂದಿಸಿದ್ದೇನೆ. ಕಾಳಿಕಾ ಮತ್ತು ಮಲ್ಲಯ್ಯ ದೇವಸ್ಥಾನ ನಿರ್ಮಿಸುವ ಉದ್ದೇಶವಿದೆ. ಕೆಲಸ ಮಾಡಿ ಬಂದ ಹಣವನ್ನು ಸಮಾಜಸೇವೆಗಾಗಿ ವ್ಯಯಿಸಿದ್ದೇನೆ’ ಎನ್ನುತ್ತಾರೆ ಶಾಂತಿಯಮ್ಮ.
‘ಹಣ್ಣಿಕೇರಾದ ಈ ಬೆಟ್ಟ ನಾಡಿನ ತುಂಬಾ ಕೋಮುಸೌಹಾರ್ದಕ್ಕೆ ಹೆಸರು ಮಾಡಲಿ. ಹಿಂದೂ–ಮುಸ್ಲಿಂ ಸಹೋದರರು ಸಹಬಾಳ್ವೆ ನಡೆಸಲಿ’ ಎಂದು ಆಶಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.