
ಚಿಂಚೋಳಿ: ಊರಿಗೆ ಹೋಗಲು ಬಸ್ ಹತ್ತುವ ಭರದಲ್ಲಿ 2 ವರ್ಷದ ಮಗುವನ್ನು ಬಸ್ ನಿಲ್ದಾಣದಲ್ಲಿಯೇ ಬಿಟ್ಟು ಹೋದ ಘಟನೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಬುಧವಾರ ಸಂಜೆ ನಡೆದಿದಿದೆ.
ಮೀನಕೇರಾ ಗ್ರಾಮದ ಸಂಗಮ್ಮ ಪುತ್ರಿ ಮಮತಾ, ಮೊಮ್ಮಗಳು ಕವನ ಮತ್ತು ಮಕ್ಕಳೊಂದಿಗೆ ಕೈಚೀಲಗಳನ್ನು ತೆಗೆದುಕೊಂಡು ಎಲ್ಲರೂ ಬಸ್ ಹತ್ತಿದ್ದಾರೆ. ಸುಲೇಪೇಟಗೆ ಹೋದ ಮೇಲೆ 2 ವರ್ಷದ ಮಗು ಕವನ ಎಲ್ಲಿ? ಎಂದು ಕೇಳಿದ್ದಾರೆ.
ನಿಮ್ಮಲ್ಲಿಯೇ ಇರಬೇಕೆಂದು ಮರು ಪ್ರಶ್ನೆ ಬಂದಾಗ ಅಯ್ಯೋ ಕವನ ಚಿಂಚೋಳಿ ಬಸ್ ನಿಲ್ದಾಣದಲ್ಲಿಯೇ ಉಳಿಯಿತೆ ಎಂದು ಅಜ್ಜಿ ಸಂಗಮ್ಮ ಸುಲೇಪೇಟದಲ್ಲಿ ಬಸ್ಸಿನಿಂದ ಇಳಿದು ಮತ್ತೊಂದು ಬಸ್ ಹತ್ತಿ ಚಿಂಚೋಳಿಗೆ ಧಾವಿಸಿದ್ದಾರೆ.
ಅಷ್ಟರಲ್ಲಿಯೇ ಮಗು ಅಳುತ್ತ ಇರುವುದು ಗಮನಿಸಿದ ಬಸ್ ನಿಲ್ದಾಣದಲ್ಲಿರುವ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಗುವನ್ನು ಠಾಣೆಗೆ ಕರೆದೊಯ್ದ ಪೊಲೀಸರು ಮಹಿಳಾ ಕಾನ್‌ಸ್ಟೆಬಲ್ ಅನ್ನಪೂರ್ಣ ಹಿರೇಮಠ ಅವರಿಗೆ ನೀಡಿ ಸಂತೈಸಿದ್ದಾರೆ. ಆಗ ಮಾಹಿತಿ ತಿಳಿದು ಅಜ್ಜಿ ಠಾಣೆಗೆ ದೌಡಾಯಿಸಿದಾಗ ಸಬ್ ಇನ್‌ಸ್ಪೆಕ್ಟರ್ ಮಡಿವಾಳಪ್ಪ ಬಾಗೋಡಿ ಅವರು ಅಜ್ಜಿಯ ವಿವರಣೆ ಪಡೆದು ಮಗುವಿನ ತಂದೆ–ತಾಯಿಯನ್ನು ಖಾತ್ರಿ ಪಡಿಸಿಕೊಂಡು ಅವಳಿಗೆ ಒಪ್ಪಿಸುವ ಮೂಲಕ ಪ್ರಕರಣಕ್ಕೆ ಸುಖಾಂತ್ಯ ನೀಡಿದರು.
ಪೊಲೀಸ್ ಸಿಬ್ಬಂದಿ ಮಹಾಂತೇಶ ನಾಯಕ, ಮಹಾಂತೇಶ ಸಜ್ಜನ ಹಾಗೂ ಪ್ರವಾಸಿ ಮಿತ್ರ ಸಿದ್ದಲಿಂಗ ಜಾನಕಿ ಮೊದಲಾದವರು ಇದ್ದರು.
ಮೀನಕೇರಾ ಗ್ರಾಮದ ಸಂಗಮ್ಮ ಅಜ್ಜಿ, ಮಗಳು ಮಮತಾ ಅವರೊಂದಿಗೆ ಬೆಡಕಪಳ್ಳಿಯಲ್ಲಿರುವ ಇನ್ನೋರ್ವ ಮಗಳ ಮನೆಗೆ ತೆರಳುವಾಗ ಅವಾಂತರ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.