ಕಲಬುರ್ಗಿ: ವೇತನಾನುದಾನ ನೀಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರ ಹಾಗೂ ಜಿಲ್ಲೆಯಲ್ಲಿನ ಅನುದಾನ ರಹಿತ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಬಂದ್ ಮಾಡಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಕಲ್ಯಾಣ ಕರ್ನಾಟಕ ಅನುದಾನ ರಹಿತ ಶಾಲೆಗಳ ಒಕ್ಕೂಟ ಕರೆ ನೀಡಿದ್ದ ಒಂದು ದಿನದ ಬಂದ್‌ಗೆ ನಗರ ಹಾಗೂ ಜಿಲ್ಲೆಯ ಬಹುಪಾಲು ಖಾಸಗಿ ಅನುದಾನ ರಹಿತ ಶಾಲೆಗಳು ಸ್ಪಂದಿಸಿ, ಆಟ-ಪಾಠಗಳನ್ನು ನಿಲ್ಲಿಸಿದವು.
ಆಯಾ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರು ಹಾಗೂ ಶಿಕ್ಷಕರು ಸ್ವತಃ ತಾವೇ ತಮ್ಮ ಶಾಲೆಗಳಿಗೆ ಬೀಗ ಹಾಕಿ ಆವರಣದ ಮುಂದೆ ಧರಣಿ ನಡೆಸಿದರು.
ಶಾಲೆ ಬಂದ್ ಮಾಡುವುದಾಗಿ ಹೋರಾಟಗಾರರು ಮುಂಚೆಯೇ ತಿಳಿಸಿದ್ದರು. ಅಲ್ಲದೇ, ಆಯಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮೊಬೈಲ್ ಮೂಲಕ ಪಾಲಕರಿಗೆ ಸಂದೇಶ ಕಳುಹಿಸಿದ್ದರು. ಹೀಗಾಗಿ, ಸೋಮವಾರ ಮಕ್ಕಳು ಕೂಡ ಶಾಲೆಗಳಿಗೆ ಬರಲಿಲ್ಲ.
ಕಲ್ಯಾಣ ಕರ್ನಾಟಕ ಭಾಗದ ಎಲ್ಲ 1500 ಕನ್ನಡ ಶಾಲೆಗಳು ಹಾಗೂ 2000 ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನೂ ಬಂದ್ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.