ADVERTISEMENT

ಬಸ್ ಚಾಲಕರಿಗೆ ದುಃಸ್ವಪ್ನವಾದ ಅವೈಜ್ಞಾನಿಕ ಮ್ಯಾನ್ ಹೋಲ್: ಸಂಚಾರಕ್ಕೆ ಸಂಚಕಾರ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 8:29 IST
Last Updated 7 ಜನವರಿ 2026, 8:29 IST
ಜೇವರ್ಗಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾದ ಮ್ಯಾನ್‌ಹೋಲ್
ಜೇವರ್ಗಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾದ ಮ್ಯಾನ್‌ಹೋಲ್   

ಜೇವರ್ಗಿ: ಪಟ್ಟಣದ ಬಸ್ ನಿಲ್ದಾಣದಲ್ಲಿ ಅವೈಜ್ಞಾನಿಕವಾಗಿ ಮ್ಯಾನ್​ಹೋಲ್​ ನಿರ್ಮಿಸಲಾಗಿದ್ದು, ಈ ಮ್ಯಾನ್​ಹೋಲ್‌ದಿಂದ ಪ್ರತಿನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.

ಬಸ್ ನಿಲ್ದಾಣದ ಕಲಬುರಗಿ ನಗರದ ಕಡೆ ತೆರಳುವ ಮುಖ್ಯ ರಸ್ತೆಯ ಮಧ್ಯದಲ್ಲಿ ಮ್ಯಾನ್‌ಹೋಲ್ ನಿತ್ಯ ಸಂಚರಿಸುವ ಬಸ್‌ಗಳಿಗೆ ಹಾಗೂ ಪ್ರಯಾಣಿಕರಿಗೆ ಸಾಕಷ್ಟು ಸಮಸ್ಯೆ ತಂದೊಡ್ಡಿದೆ. ಮ್ಯಾನ್​ಹೋಲ್‌ ರಸ್ತೆ ಮಟ್ಟಕ್ಕಿಂತಲೂ ಎತ್ತರದಲ್ಲಿರುವುದರಿಂದ ಅಪಘಾತಗಳು ಸಂಭವವಿಸುವ ಸಾಧ್ಯತೆ ಹೆಚ್ಚಾಗಿದೆ.

ಕಲಬುರಗಿ, ವಿಜಯಪುರ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಿಂದ ನಿತ್ಯ ನೂರಾರು ಬಸ್‌ಗಳು ಜೇವರ್ಗಿ ಬಸ್ ನಿಲ್ದಾಣಕ್ಕೆ ಬಂದು ಹೋಗುವುದರಿಂದ ಸಾವಿರಾರು ಜನ ಪ್ರಯಾಣಿಕರು ಈ ನಿಲ್ದಾಣದಲ್ಲಿ ಇಳಿದು ತಮ್ಮ ತಮ್ಮ‌ಊರುಗಳಿಗೆ ತೆರಳುತ್ತಾರೆ. ಕೋಟ್ಯಂತರ ರೂಪಾಯಿ ಅನುದಾನದಲ್ಲಿ ಭವ್ಯವಾದ ನಿಲ್ದಾಣ ನಿರ್ಮಿಸಲಾಗಿದೆ. ಆದರೆ ಮೂಲಸೌಕರ್ಯ ಸಮಸ್ಯೆಯಿಂದ ಪ್ರಯಾಣಿಕರು ಪರದಾಡುತ್ತಿದ್ದಾರೆ.

ADVERTISEMENT

ಗಲೀಜು ವಾತಾವರಣ, ಚೇರ್‌ಗಳ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಈ ನಿಲ್ದಾಣಕ್ಕೆ ಕಾಡುತ್ತಿದೆ. ಬಸ್ ನಿಲ್ದಾಣದ ಒಳ ಮತ್ತು ಹೊರ ಹೋಗುವ ಮುಖ್ಯ ದ್ವಾರದ ಬಳಿ ದೊಡ್ಡ ಪ್ರಮಾಣದ ತಗ್ಗು ಬಿದ್ದು ಬಸ್‌ಗಳಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಹಲವಾರು ಬಾರಿ ಪ್ರಯಾಣಿಕರು ಸಂಬಂಧಿಸಿದ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರೂ ಕ್ಯಾರೆ ಎನ್ನುತ್ತಿಲ್ಲ. ಕಲಬುರಗಿ ಕಡೆ ತೆರಳುವ ಬಸ್‌ಗಳು ಪ್ಲಾಟ್‌ಫಾರಂನಲ್ಲಿ‌ ನಿಲ್ಲದೇ ಅವೈಜ್ಞಾನಿಕವಾಗಿ ನಿರ್ಮಿಸಿದ ಮ್ಯಾನ್ ಹೋಲ್ ಬಳಿ ಬಸ್ ನಿಲ್ಲಿಸಲಾಗುತ್ತಿದೆ. ಇದರಿಂದ ಬಸ್‌ಗಳಿಗೆ ಹಾಗೂ ಬಸ್ ಹತ್ತುವ ಸಮಯದಲ್ಲಿ ಪ್ರಯಾಣಿಕರಿಗೆ ಇದರಿಂದ ತೊಂದರೆಯಾಗುತ್ತಿದೆ.

ಹಲವಾರು ಬಾರಿ ಈ ಮ್ಯಾನ್​ಹೋಲ್‌ಗೆ ಬಸ್‌ಗಳು ಡಿಕ್ಕಿ ಹೊಡೆದು ಜಖಂಗೊಂಡ ಘಟನೆ ಸಾಕಷ್ಟು ಬಾರಿ ಸಂಭವಿಸಿದೆ. ಆದರೂ ಸಾರಿಗೆ ನಿಗಮದ ಅಧಿಕಾರಿಗಳು ಎಚ್ಚೆತ್ತುಕೊಳ್ಳದೇ ಇರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಬಸ್ ನಿಲ್ದಾಣದಲ್ಲಿ ಮೂಲಸೌಕರ್ಯ ಕಲ್ಪಿಸುವುದರ ಜತೆಗೆ ಅವೈಜ್ಞಾನಿಕ ಮ್ಯಾನ್ ತೆರವುಗೊಳಿಸಲು ಕ್ರಮ ಕೈಗೊಳ್ಳಲು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ರಸ್ತೆ ಮಧ್ಯದಲ್ಲಿ ಅವೈಜ್ಞಾನಿಕ ಮ್ಯಾನ್​ಹೋಲ್‌ ನಿರ್ಮಾಣದ ಸಮಸ್ಯೆಯನ್ನು ಸರಿಪಡಿಸಬೇಕಾದ ಕೆಕೆಆರ್‌ಟಿಸಿ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಕೂಡಲೇ ಮ್ಯಾನ್​ಹೋಲ್‌ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು
ಭೀಮಾಶಂಕರ ಬಿಲ್ಲಾಡ ಅಧ್ಯಕ್ಷ ಜಯ ಕರ್ನಾಟಕ ಸಂಘಟನೆ ಜೇವರ್ಗಿ
ಜೇವರ್ಗಿ ಬಸ್ ಘಟಕಕ್ಕೆ ಇತ್ತೀಚೆಗೆ ವರ್ಗವಾಗಿ ಬಂದಿದ್ದು ಅವೈಜ್ಞಾನಿಕ ಮ್ಯಾನ್​ಹೋಲ್‌ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು
ಕೃಷ್ಣ ಪವಾರ ವ್ಯವಸ್ಥಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.