ADVERTISEMENT

ಸರ್ವಾಧಿಕಾರಿ ಧೋರಣೆ ವಿರುದ್ಧ ಜನತಂತ್ರ ಸರ್ಕಾರಗಳು ಧ್ವನಿ ಎತ್ತಲಿ: ಕೆ.ನೀಲಾ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 5:00 IST
Last Updated 5 ಜನವರಿ 2026, 5:00 IST
ವೆನೆಜುವೆಲಾ ಮೇಲಿನ ಅಮೆರಿಕದ ದಾಳಿ ಖಂಡಿಸಿ ಕಲಬುರಗಿಯ ಎಸ್‌ವಿಪಿ ವೃತ್ತದಲ್ಲಿ ಸಿಪಿಎಂ ಜಿಲ್ಲಾ ಸಮಿತಿ ಮುಖಂಡರು, ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು            ಪ್ರಜಾವಾಣಿ ಚಿತ್ರ
ವೆನೆಜುವೆಲಾ ಮೇಲಿನ ಅಮೆರಿಕದ ದಾಳಿ ಖಂಡಿಸಿ ಕಲಬುರಗಿಯ ಎಸ್‌ವಿಪಿ ವೃತ್ತದಲ್ಲಿ ಸಿಪಿಎಂ ಜಿಲ್ಲಾ ಸಮಿತಿ ಮುಖಂಡರು, ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು            ಪ್ರಜಾವಾಣಿ ಚಿತ್ರ   

ಕಲಬುರಗಿ: ವೆನೆಜುವೆಲಾದ ಮೇಲೆ ಅಮೆರಿಕ ನಡೆಸಿದ ದಾಳಿಯನ್ನು ಖಂಡಿಸಿ ಭಾರತ ಕಮ್ಯುನಿಸ್ಟ್‌ ಪಕ್ಷದ (ಮಾರ್ಕ್ಸ್‌ವಾದಿ) (ಸಿಪಿಎಂ) ಜಿಲ್ಲಾ ಸಮಿತಿಯು ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಿತು.

ನಗರದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ಸೇರಿದ ಸಿಪಿಎಂ ಮುಖಂಡರು, ಕಾರ್ಯಕರ್ತರು ಅಮೆರಿಕ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ಮಾತನಾಡಿ, ‘ವೆನೆಜುವೆಲಾದ ವಿವಿಧೆಡೆ ಅಮೆರಿಕ ನಡೆಸಿದ ಬಾಂಬ್‌ ದಾಳಿ ಖಂಡನೀಯ. ಇದು ಅಮೆರಿಕದ ನಿರ್ಲಜ್ಜ ಕೃತ್ಯ. ಅಮೆರಿಕ ದಾಳಿಯ ನಿಜವಾದ ಗುರಿಯು ಅಲ್ಲಿನ ತೈಲ ಸಂಪತ್ತೇ ಆಗಿದೆ. ಅಮೆರಿಕ ಕೂಡಲೇ ತನ್ನ ದಾಳಿ ನಿಲ್ಲಿಸಬೇಕು. ಕೆರಿಬಿಯನ್ ಸಾಗರದಲ್ಲಿ ನಿಯೋಜಿಸಿರುವ ಸೇನಾ ಪಡೆಗಳನ್ನು ತಕ್ಷಣವೇ ವಾಪಸ್‌ ಕರೆಸಿಕೊಳ್ಳಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಅಮೆರಿಕದ ವಾಯು ದಾಳಿ ಖಂಡಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಖಂಡನಾ ನಿರ್ಣಯ ಅಂಗೀಕರಿಸಬೇಕು. ವೆನೆಜುವೆಲಾ ಮೇಲಿನ ದಾಳಿ ನಿಲ್ಲಿಸುವಂತೆ ಅಮೆರಿಕ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರಬೇಕು’ ಎಂದು ಒತ್ತಾಯಿಸಿದರು.

ಚಿಂತಕಿ ಮೀನಾಕ್ಷಿ ಬಾಳಿ ಮಾತನಾಡಿ, ‘ಮಾದಕ ವಸ್ತುವಿನ ಕಳ್ಳಸಾಗಣೆಯ ನೆಪವೊಡ್ಡಿ ಅಮೆರಿಕವು ವೆನೆಜುವೆಲಾದ ಮೇಲೆ ವಾಯು ದಾಳಿ ನಡೆಸಿ, ಆ ದೇಶದ ಅಧ್ಯಕ್ಷ ಹಾಗೂ ಅವರ ಪತ್ನಿಯನ್ನು ಕಳ್ಳರಂತೆ ಅಪಹರಿಸಿದೆ. ಸಾಮಾನ್ಯ ದರೋಡೆಕೋರರಕ್ಕಿಂತಲೂ ಇದು ಕೆಟ್ಟ ರಾಜಕಾರಣ. ಇದು ಖಂಡನೀಯ ಕೃತ್ಯ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಮಾದಕ ವಸ್ತುಗಳ ಕಳ್ಳಸಾಗಣೆ ನಿಯಂತ್ರಿಸಲು ಅನೇಕ ಮಾರ್ಗಗಳಿವೆ. ಅದಕ್ಕಾಗಿ ಅಂತರರಾಷ್ಟ್ರೀಯ ನೀತಿಯೂ ಇದೆ. ಆದರೆ, ಈ ಡ್ರಗ್ಸ್‌ ಸಾಗಣೆ ನೆಪ ಹೇಳುತ್ತಿರುವ ಅಮೆರಿಕದ ಸಾಮ್ರಾಜ್ಯವಾದಿಗಳಿಗೆ ವೆನೆಜುವೆಲಾ ತೈಲ ನಿಕ್ಷೇಪಗಳ ಮೇಲೆ ಕಣ್ಣಿದೆ. ಅದನ್ನು ವಶಕ್ಕೆ ಪಡೆಯುವ ಹುನ್ನಾರದ ಭಾಗವಾಗಿ ಈ ಕೃತ್ಯ ಎಸೆಗಿದೆ. ಈ ಹಿಂದೆಯೂ ಅಮೆರಿಕವು ಅನೇಕ ಅರಬ್‌ ರಾಷ್ಟ್ರಗಳ ಮೇಲೆ ಭಯೋತ್ಪಾದನೆ ನೆಪವೊಡ್ಡಿ ದಾಳಿ ನಡೆಸಿ ಅಲ್ಲಿನ ಜನರ ಬದುಕನ್ನು ದುರ್ಬರ ಸ್ಥಿತಿಗೆ ತಂದಿದೆ’ ಎಂದರು.

‘ಅಮೆರಿಕದ ಸಾಮ್ರಾಜ್ಯಶಾಹಿ ನೀತಿಯನ್ನು ಭಾರತ ಸರ್ಕಾರವೂ ಮುಂಚೂಣಿಯಲ್ಲಿ ನಿಂತು ಖಂಡಿಸಬೇಕು. ಆ ಮೂಲಕ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ದೇಶದ ಪ್ರಜಾಪ್ರಭುತ್ವದ ನೈತಿಕತೆಯನ್ನು ಎತ್ತಿಹಿಡಿಯಬೇಕು. ಅಮೆರಿಕವು ವೆನೆಜುವೆಲಾ ಅಧ್ಯಕ್ಷ ಹಾಗೂ ಅವರ ಪತ್ನಿಯನ್ನು ಬಿಡುಗಡೆ ಮಾಡಬೇಕು. ಈ ದುಶ್ಕೃತ್ಯಕ್ಕಾಗಿ ಅಮೆರಿಕ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು’ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಎಂ.ಬಿ.ಸಜ್ಜನ, ಪಾಂಡುರಂಗ ಮಾವಿನಕರ, ಭೀಮಶೆಟ್ಟಿ ಯಂಪಳ್ಳಿ, ಕೆ.ಎಸ್.ಶಾರದಾ, ನಾಗಪ್ಪ, ಯಶವಂತ ಪಾಟೀಲ, ಸುಲೇಮಾನ್‌ ಖಾನ್‌, ಶೇಖಮ್ಮ ಕುರಿ,  ಬಾಬು ಹೂವಿನಹಳ್ಳಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಅಮೆರಿಕದ ವಿರುದ್ಧ ಮೊಳಗಿದ ಘೋಷಣೆ | ‘ಕೆರಿಬಿಯನ್‌ ಸಾಗರದಲ್ಲಿನ ಸೇನೆ ಅಮೆರಿಕ ಹಿಂಪಡೆಯಲಿ’ | ಅಮೆರಿಕ ದಾಳಿ ಭಾರತ ಖಂಡಿಸಲಿ: ಆಗ್ರಹ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.