ADVERTISEMENT

100 ಕೋಟಿ ಜನರಿಗೆ ಲಸಿಕೆ; ಶೇ 100ರಷ್ಟು ಗುರಿ ಸಾಧಿಸೋಣ: ಡಿಸಿ ವಿ.ವಿ.ಜ್ಯೋತ್ಸ್ನಾ

ಬಲೂನ್‌ ಹಾರಿಸಿ ಸಂಭ್ರಮಿಸಿದ ಜಿಲ್ಲಾಡಳಿತ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 7:10 IST
Last Updated 23 ಅಕ್ಟೋಬರ್ 2021, 7:10 IST
100 ಕೋಟಿ ಲಸಿಕೆ ಗುರಿ ಸಾಧಿಸಿದ ಕಾರಣ ಕಲಬುರಗಿಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಹಾಗೂ ಅಧಿಕಾರಿಗಳು ಬಲೂನ್‌ ಹಾರಿಸಿದರು
100 ಕೋಟಿ ಲಸಿಕೆ ಗುರಿ ಸಾಧಿಸಿದ ಕಾರಣ ಕಲಬುರಗಿಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಹಾಗೂ ಅಧಿಕಾರಿಗಳು ಬಲೂನ್‌ ಹಾರಿಸಿದರು   

ಕಲಬುರಗಿ: ದೇಶದಾದ್ಯಂತ 100 ಕೋಟಿ ಕೋವಿಡ್ ಲಸಿಕೆ ನೀಡಿ ಸಾಧನೆ ಮಾಡಿದ ಸಂಭ್ರಮಾಚರಣೆ ಭಾಗವಾಗಿ ಇಲ್ಲಿನ ಮಿನಿವಿಧಾನಸೌಧದ ಆವರಣದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಬಲೂನ್ ಹಾರಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜ್ಯೋತ್ಸ್ನಾ ಮಾತನಾಡಿ, ‘ದೇಶದಲ್ಲಿ 100 ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡಿರುವುದು ಸಂತಸದ ಸಂಗತಿ. ಜಿಲ್ಲೆಯಲ್ಲಿ ಈಗಾಗಲೇ 18.04 ಲಕ್ಷ ಜನರಿಗೆ ಲಸಿಕೆ ನೀಡಿದ್ದು, ಮೊದಲ ಡೋಸ್ ಲಸಿಕೆ 12 ಲಕ್ಷ ಜನರಿಗೆ ಹಾಗೂ 5.7 ಲಕ್ಷ ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ’ ಎಂದು ವಿವರಿಸಿದರು.

‘ಜಿಲ್ಲೆ ಕೂಡ ಈಗಾಗಲೇ ಶೇ 70ರಷ್ಟು ಗುರಿ ಸಾಧಿಸಿದೆ. ಜಿಲ್ಲೆಯ ಎಲ್ಲರೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಶೇ 100ರಷ್ಟು ಗುರಿ ತಲುಪಬೇಕು. ಕೋವಿಡ್ ಸಮಯದಲ್ಲಿ ಅರೋಗ್ಯ ಇಲಾಖೆ ಹಾಗೂ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸಾಕಷ್ಟು ಶ್ರಮವಹಿಸಿದ್ದಾರೆ’ ಎಂದು ಅವರು
ಶ್ಲಾಘಿಸಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ದಿಲೀಷ್‌ ಶಶಿ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ, ಆರ್‌ಸಿಎಚ್ ಅಧಿಕಾರಿ ಪ್ರಭುಲಿಂಗ ಮಾನಕರ್ ಸೇರಿ ಅರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

ಬಲೂನ್ ಹಾರಿಸಿದ ರೇವೂರ: ಕೋವಿಡ್ ಲಸಿಕೆ ನೀಡುವಲ್ಲಿ ತೋರಿದ ಸಾಧನೆ ಕಾರಣ ಶುಕ್ರವಾರ ಜಿಮ್ಸ್ ಕಾಲೇಜು ಆವರಣದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರು ಬಲೂನ್ ಹಾರಿಸಿದರು. ‘ಈ ಸಾಧನೆಗೆ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಸಾಕಷ್ಟು ಶ್ರಮಿಸಿದ್ದಾರೆ. ಅವರ ಕೊಡುಗೆ ಅಪಾರ’ ಎಂದು ಶಾಸಕ ಹೇಳಿದರು.

ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ, ಜಿಮ್ಸ್ ಕಾಲೇಜಿನ ಅಧೀಕ್ಷಕ ಡಾ.ಶಫಿಯುದ್ದಿನ್ ಸೇರಿದಂತೆ ವೈದ್ಯರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.