ADVERTISEMENT

ಕಲಬುರ್ಗಿ: ತರಕಾರಿ ಮತ್ತೆ ದುಬಾರಿ

ಗ್ರಾಮೀಣ ಭಾಗದಿಂದ ಮಾರುಕಟ್ಟೆಗೆ ಬರುವ ತರಕಾರಿ ಪ್ರಮಾಣದಲ್ಲಿ ಇಳಿಕೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 3:41 IST
Last Updated 12 ಜೂನ್ 2021, 3:41 IST
ಕಲಬುರ್ಗಿ ನಗರದ ರೈಲು ನಿಲ್ದಾಣದ ರಸ್ತೆಯಲ್ಲಿ ಶುಕ್ರವಾರ ಗ್ರಾಹಕರು ತರಕಾರಿ ಖರೀದಿಸಿದರುಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್‌.ಜಿ
ಕಲಬುರ್ಗಿ ನಗರದ ರೈಲು ನಿಲ್ದಾಣದ ರಸ್ತೆಯಲ್ಲಿ ಶುಕ್ರವಾರ ಗ್ರಾಹಕರು ತರಕಾರಿ ಖರೀದಿಸಿದರುಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್‌.ಜಿ   

ಕಲಬುರ್ಗಿ: ಒಂದು ವಾರದ ಹಿಂದೆ ತೀವ್ರ ಕುಸಿತಗೊಂಡಿದ್ದ ತರಕಾರಿದರ ಮತ್ತೆ ಏರಿಕೆಯತ್ತ ಮುಖ ಮಾಡಿದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ‘ಅನಧಿಕೃತ ಅನ್‌ಲಾಕ್‌ ಪ್ರಕ್ರಿಯೆ’ ಆರಂಭಗೊಂಡಿದ್ದು, ಸೂಪರ್ ಮಾರ್ಕೆಟ್, ರಾಮಮಂದಿರ ವೃತ್ತ ಸೇರಿದಂತೆ ನಗರದ ವಿವಿಧೆಡೆ ಗ್ರಾಹಕರು ತರಕಾರಿ, ಹಣ್ಣುಗಳ ಖರೀದಿಗೆ ಮುಗಿಬಿದ್ದಿರುವುದು ಶುಕ್ರವಾರ ಕಂಡುಬಂತು.

ಗ್ರಾಮೀಣ ಭಾಗದಿಂದ ಈ ವಾರ ತರಕಾರಿ ಬರುವುದು ಕಡಿಮೆಯಾಗಿದ್ದು, ಬಹುತೇಕ ತರಕಾರಿಗಳ ದರ ₹10ರಿಂದ ₹20 ಹೆಚ್ಚಳಗೊಂಡಿದೆ. ಬದನೆಕಾಯಿ, ಆಲೂಗಡ್ಡೆ, ಈರುಳ್ಳಿ, ಗಜ್ಜರಿ, ನುಗ್ಗೆಕಾಯಿ, ಟೊಮೆಟೊ ಬೆಲೆ ಏರಿಸಿಕೊಂಡಿವೆ.

ಸವತೆಕಾಯಿ, ಹೀರೇಕಾಯಿ, ಹಸಿಮೆಣಸಿನಕಾಯಿ ದರದಲ್ಲಿ ಇಳಿಕೆ ಕಂಡಿದೆ. ಉಳಿದಂತೆ ಡಬ್ಬುಮೆಣಸಿನಕಾಯಿ, ಬೆಂಡೆಕಾಯಿ, ಜವಳೆಕಾಯಿಗಳು ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿವೆ.

ADVERTISEMENT

ಕುಂಬಳಕಾಯಿ ₹15ಕ್ಕೆ ಒಂದು, ಬೆಳ್ಳುಳ್ಳಿ ಕೆ.ಜಿ.ಗೆ ₹120, ಶುಂಠಿ ₹80, ಹುಣಸೆ ₹160ಕ್ಕೆ ಕೆ.ಜಿ. ಮಾರಾಟವಾಗುತ್ತಿದೆ.

ಸೊಪ್ಪುಗಳ ದರ:ಕೊತ್ತಂಬರಿ, ಕರಿಬೇವು, ರಾಜಗಿರಿ, ಪಾಲಕ್ ಸೊಪ್ಪು, ಮೆಂತ್ಯೆ, ಪುದೀನಾ, ಉಳ್ಳಾಗಡ್ಡೆ ಸೊಪ್ಪು ದೊಡ್ಡ ಸಿವುಡಿಗೆ ₹10 ಹಾಗೂ ಸಣ್ಣ ಸಿವುಡಿಗೆ ₹5ರಂತೆ ಮಾರಲಾಗುತ್ತಿದೆ.

ಹೂವುಗಳಿಗಿಲ್ಲ ಬೇಡಿಕೆ:ಲಾಕ್‌ಡೌನ್‌ ಕಾರಣದಿಂದ ಯಾವುದೇ ಕಾರ್ಯಕ್ರಮಗಳು ನಡೆಯದಿರುವ ಪರಿಣಾಮ ಹೂವು ವ್ಯಾಪಾರಕ್ಕೆ ನಷ್ಟ ಉಂಟು ಮಾಡಿದೆ.ವ್ಯಾಪಾರವಿಲ್ಲದೆ ಕೆಲವೇ ಕೆಲವು ಹೂವುಗಳೊಂದಿಗೆ ಹೂವಿನ ವ್ಯಾಪಾರಸ್ಥರು ಬೇಸರದಲ್ಲಿ ನಿಂತಿರುವುದು ನಗರದ ಸೂಪರ್‌ ಮಾರ್ಕೆಟ್‌ ಬಳಿ ಕಂಡುಬಂತು. ದುಂಡುಮಲ್ಲಿಗೆ, ಕನಕಾಂಬರ ಹೂವು ಒಂದು ಮೊಳಕ್ಕೆ ₹20 ಹಾಗೂ ಗುಲಾಬಿ ಹೂವು 50 ಗ್ರಾಂಗೆ ₹20ಕ್ಕೆ ಮಾರಾಟವಾಗುತ್ತಿದೆ.

‘10 ಗಂಟೆಯ ನಂತರ ಮಾರಾಟಕ್ಕೆ ಅವಕಾಶ ಇಲ್ಲವಾದ್ದರಿಂದ ಹೆಚ್ಚು ಹೂವು ಖರೀದಿಸುತ್ತಿಲ್ಲ. ಕೊನೇ ಘಳಿಗೆಯಲ್ಲಿ ಕೇಳಿದಷ್ಟು ದರಕ್ಕೆ ಕೊಡಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದರೆ ಹೂವು ಬಾಡುವುದರಿಂದ ಹೆಚ್ಚಿನ ನಷ್ಟ ಅನುಭವಿಸಬೇಕಾಗುತ್ತದೆ’ ಎಂದು ಹೂವಿನ ವ್ಯಾಪಾರಿ ಅಬ್ದುಲ್ ಹಸದ್ ನೋವು ತೋಡಿಕೊಂಡರು.

ಬೆಳಿಗ್ಗೆ 10 ಗಂಟೆ ನಂತರ ಸೂಪರ್ ಮಾರ್ಕೆಟ್‌ನಲ್ಲಿ ಪೊಲೀಸರು ತರಕಾರಿ ಅಂಗಡಿಗಳನ್ನು ಮುಚ್ಚಿಸಿದರು. ಮಾರ್ಕೆಟ್‌ ಪ್ರವೇಶಿಸುವ ಮುಖ್ಯ ದಾರಿಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿದರು.

ವಾಜಪೇಯಿ ಬಡಾವಣೆಯ ಮಾರುಕಟ್ಟೆಯಲ್ಲಿ ತಗ್ಗಿದ ವ್ಯಾಪಾರ:ನಗರ ಹೊರವಲಯದ ವಾಜಪೇಯಿ ಬಡಾವಣೆಯ ತಾತ್ಕಾಲಿಕ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ತರಕಾರಿ ವ್ಯಾಪಾರದ ಪ್ರಮಾಣ ಇಳಿಕೆ ಕಂಡಿದೆ. ‘ನಗರದ ವಿವಿಧೆಡೆ ತರಕಾರಿ ಮಾರಾಟಕ್ಕೆ ಅವಕಾಶ ನೀಡಿರುವುದು ಹಾಗೂ ಲಾಕ್‌ಡೌನ್‌ ಮುಗಿಯುತ್ತಿರುವ ಕಾರಣ ಗ್ರಾಹಕರು ಇಲ್ಲಿಗೆ ಹೆಚ್ಚಾಗಿ ಬರುತ್ತಿಲ್ಲ. ಬೆಳಿಗ್ಗೆ 10 ಗಂಟೆವರೆಗೆ ಬೆರಳೆಣಿಕೆಯಷ್ಟು ಗ್ರಾಹಕರು ಮಾತ್ರ ಬರುತ್ತಿದ್ದಾರೆ. ತದನಂತರ ಉಳಿದ ತರಕಾರಿಯನ್ನು ಮನೆಗೆ ಒಯ್ಯಬೇಕಾದ ಸ್ಥಿತಿ ಇದೆ. ಸಂಜೆ ಮಾತ್ರ ಸಗಟು ವ್ಯಾಪಾರ ಮೊದಲಿನಂತೆ ನಡೆಯುತ್ತಿದೆ’ ಎಂದು ವ್ಯಾಪಾರಿ ಶೇಖ್‌ ಸಮೀರ್ ತಿಳಿಸಿದರು.

ತರಕಾರಿ ದರ (ಕೆ.ಜಿ.₹ ಗಳಲ್ಲಿ)

ತರಕಾರಿ;ಕಳೆದ ವಾರ;ಈ ವಾರ

ಹೀರೆಕಾಯಿ;80;60

ಹಸಿಮೆಣಸಿನಕಾಯಿ;60;40

ಡಬ್ಬುಮೆಣಸಿನಕಾಯಿ;60;60

ಆಲೂಗಡ್ಡೆ;20;30

ಟೊಮೆಟೊ;15;20

ಗಜ್ಜರಿ;40;60

ಈರುಳ್ಳಿ;20;30

ಬೆಂಡೆಕಾಯಿ;40;40

ಸವತೆಕಾಯಿ;60;40

ಬದನೆಕಾಯಿ;40;60

ಹಣ್ಣುಗಳ ದರ (ಕೆ.ಜಿ.₹ ಗಳಲ್ಲಿ)

ಹಣ್ಣು;ದರ

ಸೇಬು;240

ಮಾವಿನಹಣ್ಣು;50

ಸಪೋಟ;100

ಪಪ್ಪಾಯ;60

ಏಲಕ್ಕಿಬಾಳೆ;100

ಕಿತ್ತಳೆ;160

ದಾಳಿಂಬೆ;160

ಪೇರು;80

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.