ADVERTISEMENT

ಕಲಬುರ್ಗಿ: ಲಾಕ್‌ಡೌನ್‌ ಮಧ್ಯೆಯೂ ವಾಹನಗಳ ಭರಾಟೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 3:59 IST
Last Updated 30 ಏಪ್ರಿಲ್ 2021, 3:59 IST
ನಿಷೇಧಾಜ್ಞೆಯ ಮಧ್ಯೆಯೂ ರಸ್ತೆಗಿಳಿದ ಆಟೊ ಚಾಲಕರಿಗೆ ಕಲಬುರ್ಗಿಯ ಜಗತ್ ವೃತ್ತದಲ್ಲಿ ಇನ್‌ಸ್ಪೆಕ್ಟರ್ ವಾಹೀದ್ ಕೊತ್ವಾಲ್ ಬಸ್ಕಿ ಹೊಡೆಯುವ ಶಿಕ್ಷೆ ವಿಧಿಸಿದರು
ನಿಷೇಧಾಜ್ಞೆಯ ಮಧ್ಯೆಯೂ ರಸ್ತೆಗಿಳಿದ ಆಟೊ ಚಾಲಕರಿಗೆ ಕಲಬುರ್ಗಿಯ ಜಗತ್ ವೃತ್ತದಲ್ಲಿ ಇನ್‌ಸ್ಪೆಕ್ಟರ್ ವಾಹೀದ್ ಕೊತ್ವಾಲ್ ಬಸ್ಕಿ ಹೊಡೆಯುವ ಶಿಕ್ಷೆ ವಿಧಿಸಿದರು   

ಕಲಬುರ್ಗಿ: ರಾಜ್ಯ ಸರ್ಕಾರ 14 ದಿನಗಳ ಲಾಕ್‌ಡೌನ್ ಘೋಷಿಸಿ ಗುರುವಾರಕ್ಕೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಸಾರ್ವಜನಿಕರು ಜಿಲ್ಲಾಡಳಿತ ನೀಡಿದ ಸಮಯದ ಬಳಿಕವೂ ರಸ್ತೆಗಳಲ್ಲಿ ಸಂಚರಿಸಿದರು.

ಪ್ರಮುಖ ವೃತ್ತಗಳಲ್ಲಿ ಪೊಲೀಸರು ಅನಗತ್ಯವಾಗಿ ಸಂಚರಿಸುತ್ತಿದ್ದವರನ್ನು ಹಿಡಿದು ಕೆಲ ವಾಹನಗಳನ್ನು ಜಪ್ತಿ ಮಾಡಿದರು. ಕೆಲವರಿಗೆ ಬಸ್ಕಿ ಹೊಡೆಸಿ ಕಳುಹಿಸಿದರು.

ಆದರೆ, ಪೊಲೀಸರು ಕಾಣಿಸಿಕೊಳ್ಳದ ಬಡಾವಣೆ ಹಾಗೂ ಒಳಗಿನ ರಸ್ತೆಗಳಲ್ಲಿ ಜನ ಸಂಚಾರ ಎಂದಿನಂತಿತ್ತು. ಬೆಳಿಗ್ಗೆ 6ರಿಂದ 10ರವರೆಗೆ
ವಹಿವಾಟು ಪೂರ್ಣಗೊಳಿಸಬೇಕು ಎಂದು ಸೂಚಿಸಿದ್ದರೂಆ ಬಳಿಕವೂ ಕುಸನೂರ ರಸ್ತೆಯ ಕೆಲವೆಡೆ ಅಂಗಡಿಗಳು ವಹಿವಾಟು ನಡೆಸಿರುವುದು ಕಂಡು ಬಂತು.

ADVERTISEMENT

ಕೇಂದ್ರ ಬಸ್ ನಿಲ್ದಾಣ, ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ಜಗತ್ ವೃತ್ತ, ಸೂಪರ್‌ ಮಾರ್ಕೆಟ್‌ನಲ್ಲಿ ಪೊಲೀಸರು ಕಾರು, ಬೈಕ್‌ ಸವಾರರನ್ನು ತಡೆದು ದಾಖಲೆಗಳನ್ನು ಪರಿಶೀಲಿಸಿದರು. ಸಕಾರಣವಿಲ್ಲದೇ ಬಂದ ಬೈಕ್ ಸವಾರರನ್ನು ಸಾಲಾಗಿ ನಿಲ್ಲಿಸಿ ಬಸ್ಕಿ ಹೊಡೆಸಿದರು. ನಂತರ ಎಚ್ಚರಿಕೆ ಕೊಟ್ಟು ಕಳುಹಿಸಿದರು.

42 ವಾಹನ ಜಪ್ತಿ: ನಿಷೇಧಾಜ್ಞೆಯ ನಿಯಮ ಉಲ್ಲಂಘಿಸಿ ರಸ್ತೆಗಳಿದ 36 ಸ್ಕೂಟರ್, ಬೈಕ್ ಹಾಗೂ 6 ಕಾರುಗಳು ಸೇರಿದಂತೆ ಒಟ್ಟು 42 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಡಿಸಿಪಿ ಡಿ. ಕಿಶೋರಬಾಬು ತಿಳಿಸಿದರು.

ಆಸ್ಪತ್ರೆಗಳ ಎದುರು ದಟ್ಟಣಿ:ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದುದರಿಂದ ನಗರದ ಜಿಮ್ಸ್, ಜಿಲ್ಲಾಸ್ಪತ್ರೆ, ಕೋವಿಡ್ ವಾರ್ಡ್‌ಗಳನ್ನು ಹೊಂದಿರುವ ಟ್ರಾಮಾ ಸೆಂಟರ್, ಇಎಸ್‌ಐಸಿ ಹಾಗೂ ಖಾಸಗಿ ಆಸ್ಪತ್ರೆಗಳ ಎದುರು ರೋಗಿಗಳ ಸಂಬಂಧಿಕರ ದಟ್ಟಣಿ ಕಂಡು ಬಂತು. ಬಹುತೇಕ ಹೋಟೆಲ್‌ಗಳಲ್ಲಿನ ಪಾರ್ಸೆಲ್‌ಗಳನ್ನೇ ಜನರು ನೆಚ್ಚಿಕೊಂಡಿದ್ದರು.

ಸಂತೆಯಲ್ಲಿ ದಟ್ಟಣಿ: ಬೆಳಿಗ್ಗೆ 6ರಿಂದ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಜಿಲ್ಲಾಡಳಿತ ಅವಕಾಶ ನೀಡಿದ್ದರಿಂದ ಸೂಪರ್‌ ಮಾರ್ಕೆಟ್‌ನ ಕಿರಾಣಾ ಬಜಾರ್, ಕಪಡಾ ಬಜಾರ್‌ ಹಾಗೂ ಮಾಲ್‌ಗಳಲ್ಲಿರುವ ದಿನಸಿ ಅಂಗಡಿಗಳಲ್ಲಿ ಹೆಚ್ಚಿನ ಜನದಟ್ಟಣಿ ಕಂಡು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.