
ಕಲಬುರಗಿ: ‘ಬಡವನರಿಯದ ಒಡೆಯನೇಕೆ?, ಪೋಷಿಸದ ಬಂಧುವೇಕೆ?, ವ್ಯಾಧಿ ತಿಳಿಯದ ವೈದ್ಯನೇಕೆ?’ ಇವು ಮಹಾಯೋಗಿ ವೇಮನನ ತ್ರಿಪದಿಯೊಂದರ ಸಾಲುಗಳು. ಹೀಗೆ ಮೂರು ಸಾಲುಗಳಲ್ಲಿ ನೂರು ವಿಚಾರಗಳನ್ನು ಮಹಾಯೋಗಿ ವೇಮನ ಹೇಳುತ್ತಿದ್ದರು’ ಎಂದು ಜೇವರ್ಗಿ ಕಾಲೊನಿಯ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಜ್ಯೋತಿ ಎಂ. ರೆಡ್ಡಿ ತಿಳಿಸಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಸೋಮವಾರ ನಡೆದ ಮಹಾಯೋಗಿ ವೇಮನ 614ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಆತ್ಮಶುದ್ಧಿ ಇಲ್ಲದ ಆಚಾರವೇಕೆ?, ಮಡಿಕೆ ಶುದ್ಧವಿಲ್ಲದ ಅಡುಗೆ ಏಕೆ?, ಚಿತ್ತ ಶುದ್ಧವಿಲ್ಲದ ಪೂಜೆ ಏಕೆ? ವಿಶ್ವದ ಅಭಿರಾಮ... ಕೇಳೋ ವೇಮ’ ಎಂದು ಉಲ್ಲೇಖಿಸಿ ವೇಮನ ಜೀವನ ಕುರಿತು ಮಾತನಾಡಿದ ಅವರು, ‘ಆಂಧ್ರಪ್ರದೇಶದ ರಾಯಲಸೀಮೆಯ ಕಡಪ ಜಿಲ್ಲೆಯ ಮೊಗಚಿಂತಪಲ್ಲಿ ಎಂಬಲ್ಲಿ ಜನಿಸಿದ ವೇಮ ಮೊದಲು ಭೋಗಿಯಾಗಿದ್ದ. ದುಶ್ಚಟಗಳ ದಾಸನಾಗಿದ್ದ ವೇಮ ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮನ ಪ್ರಭಾವಕ್ಕೆ ಒಳಗಾಗಿ ಬಳಿಕ ಯೋಗಿಯಾಗಿ ಬದಲಾದ’ ಎಂದು ಅವರು ವಿವರಿಸಿದರು.
‘ಸುಮಾರು 4 ಸಾವಿರ ತ್ರಿಪದಿಗಳನ್ನು ರಚಿಸಿರುವ ವೇಮ ಆತ್ಮದಲ್ಲೇ ದೇವರಿದ್ದಾನೆ ಎಂಬುದನ್ನು ನಿರೂಪಿಸಿದ್ದಾರೆ. ವೇಮನ ರಾಜಾಶ್ರಯದ ಕವಿಯಲ್ಲ. ಜನಪರ ಕವಿ. ಹೀಗಾಗಿ ಆತನ ತ್ರಿಪದಿಗಳು ಜನಪದದಂತೆ ಮನೆಮಾತಾಗಿವೆ. ಆಂಧ್ರದ ನಾಡಗೀತೆಯಲ್ಲೂ ವೇಮನ ಉಲ್ಲೇಖವಿದೆ. ಬ್ರಿಟಿಷ್ ಅಧಿಕಾರಿ ಸಿ.ಪಿ.ಬ್ರೌನ್ ವೇಮನರ ಬಗ್ಗೆ ಅಧ್ಯಯನ ಮಾಡಿ ಗ್ರಂಥ ಪ್ರಕಟಿಸಿದ್ದಾರೆ. ಸುಮಾರು 68 ವರ್ಷ ಬಾಳಿ ಬದುಕಿದ ವೇಮನರು ತತ್ವಜ್ಞಾನಿ, ಸಾಮಾಜಿಕ ಚಿಂತಕ’ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಳ ಹರವಾಳ, ಜಿಲ್ಲಾ ಆಡಳಿತದ ಅಧಿಕಾರಿ ಶಿವಪ್ರಭು ಹಿರೇಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ಜಗದೀಶ್ವರಿ ಅ. ನಾಸಿ ವೇದಿಕೆಯಲ್ಲಿದ್ದರು.
ಭೋಗಿಯಾಗಿದ್ದ ವೇಮನರಿಗೆ ಅತ್ತಿಗೆಯಿಂದ ಜ್ಞಾನೋದಯವಾಗಿ ವೈರಾಗ್ಯ ತಾಳಿ ಯೋಗಿಯಾದರು. ಮನುಷ್ಯ ಬದಲಾವಣೆಗೆ ಮನಸ್ಸು ಮಾಡಬೇಕುಡಾ.ಎಸ್.ಬಿ.ಕಾಮರೆಡ್ಡಿ ಅಧ್ಯಕ್ಷ ರೆಡ್ಡಿ ಸಮಾಜ
‘ಹೆಸರಿಗಷ್ಟೇ ದೊಡ್ಡ ಸಮಾಜವಾಗಬಾರದು’ ವೇಮನ ಜಯಂತಿ ಆಚರಣೆಯಲ್ಲಿ ಬೆರಳೆಣಿಕೆಯ ಜನರಷ್ಟೇ ಕಂಡು ಬಂದರು. ಸರ್ಕಾರಿ ಅಧಿಕಾರಿಗಳು ಸಮಾಜದ ಕೆಲ ಗಣ್ಯರು ಪತ್ರಕರ್ತರಷ್ಟೇ ಕಾರ್ಯಕ್ರಮದಲ್ಲಿ ಕಂಡು ಬಂದರು. ವಿರಳ ಜನರನ್ನು ನೋಡಿ ಬೇಸರಿಸಿದ ಭಾಷಣಕಾರರು ‘ರೆಡ್ಡಿ ಸಮಾಜ ದೊಡ್ಡ ಸಮಾಜ. ಆದರೆ ಹೆಸರಿಗಷ್ಟೇ ದೊಡ್ಡ ಸಮಾಜವಾಗಬಾರದು. ಮಹಾಪುರುಷರ ಜಯಂತಿ ಕಾರ್ಯಕ್ರಮದಲ್ಲಿ ಸಮಾಜದ ಎಲ್ಲರೂ ಭಾಗಿಯಾಗಬೇಕು’ ಎಂದು ಹೇಳಿದರು.
‘ಯುವಪೀಳಿಗೆ ಇತಿಹಾಸ ಅರಿಯಲಿ’: ‘ವೇಮನ ಲೋಕಕಲ್ಯಾಣಕ್ಕಾಗಿ ಶ್ರಮಿಸಿದ ದಾರ್ಶನಿಕ. ದುಶ್ಚಟಗಳ ದಾಸನಾಗಿದ್ದ ವ್ಯಕ್ತಿ ಬದಲಾಗಿ ಸಮಾಜಕ್ಕೆ ಬೆಳಕಾದ. ಈ ರೀತಿಯ ಹಲವು ಮಹಾಪುರುಷರು ನಮಗೆ ಇತಿಹಾಸದ ಪುಟದಿಂದ ತಿಳಿದುಬರುತ್ತಾರೆ. ಹೀಗಾಗಿ ಯುವಪೀಳಿಗೆ ಇತಿಹಾಸ ಅರಿಯಬೇಕು. ಒಳ್ಳೆಯ ದಾರಿಯಲ್ಲಿ ನಡೆಯಬೇಕು’ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.