
ಕಲಬುರಗಿಯ ಚಂದ್ರಕಾಂತ ಪಾಟೀಲ್ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಬುಧವಾರ ಡಾ. ಬಿ.ಜಿ ಪಾಟೀಲ್ ಕ್ರೀಡಾಂಗಣವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ವೆಂಕಟೇಶ ಪ್ರಸಾದ ಹಾಗೂ ಕ್ರಿಕೆಟ್ ಆಟಗಾರ್ತಿ ಶ್ರೇಯಾಂಕಾ ಪಾಟೀಲ ಲೋಕಾರ್ಪಣೆ ಮಾಡಿದರು.
‘ಪ್ರತಿದಿನ ಎರಡು ತಾಸಾದರೂ ಕ್ರೀಡೆಗೆ ಮೀಸಲಾಗಿರಿಸಿ’ | ‘ವಿದ್ಯಾರ್ಥಿಗಳು ಒತ್ತಡವನ್ನು ನಿಭಾಯಿಸುವ ಕಲೆ ಕಲಿಯಬೇಕು’ | ‘ಅವಕಾಶಗಳು ಹೇರಳವಾಗಿದ್ದು ಉಪಯೋಗಿಸಿಕೊಳ್ಳಿ’
ಕಲಬುರಗಿ: ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಎರಡರಲ್ಲೂ ಸಮತೋಲನ ಕಾಯ್ದುಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹೇಳಿದರು.
ನಗರದ ಚಂದ್ರಕಾಂತ ಪಾಟೀಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ನಡೆದ ‘ಡಾ. ಬಿ.ಜಿ. ಪಾಟೀಲ ಕ್ರೀಡಾಂಗಣ’ ಉದ್ಘಾಟನೆ ಹಾಗೂ ಶಾಲೆಯ 37ನೇ ವಾರ್ಷಿಕ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
‘10 ವರ್ಷಗಳಿಂದ ಈ ಶಾಲೆ ಶೇ 100ರಷ್ಟು ಫಲಿತಾಂಶ ದಾಖಲಿಸುತ್ತಿದೆ ಎಂದು ಕೇಳಿದ್ದೇನೆ. ಕ್ರೀಡಾಂಗಣ ಸೇರಿದಂತೆ ಇಲ್ಲಿಯ ಉತ್ತಮ ಸೌಲಭ್ಯಗಳ ಸದುಪಯೋಗ ಪಡೆದು ಶಾಲೆ, ಶಿಕ್ಷಕರು ಹಾಗೂ ಪೋಷಕರಿಗೆ ಹೆಸರು ತರಬೇಕು’ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಕೂಡ ಆಗಿರುವ ಪ್ರಸಾದ್ ಹೇಳಿದರು.
‘ದಿನನಿತ್ಯದ ಪಠ್ಯ ಅಭ್ಯಾಸದೊಂದಿಗೆ ಕನಿಷ್ಠ 2 ತಾಸಾದರೂ ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಮೊಬೈಲ್, ಟಿವಿಯಿಂದ ಸಾಧ್ಯವಾದಷ್ಟು ದೂರವಿರಿ. ನಮಗೆ ಸಿಕ್ಕಿದ್ದಕ್ಕಿಂತ ಹೆಚ್ಚಿನ ಸೌಲಭ್ಯಗಳು ನಿಮಗಿವೆ. ನಾನು ಕಲಿಯುತ್ತಿದ್ದ ಶಾಲೆಯಲ್ಲಿ ಕ್ರಿಕೆಟ್ ಆಟಕ್ಕೆ ಆಸ್ಪದವಿರಲಿಲ್ಲ. ಹಾಕಿ ಮಾತ್ರ ಆಡಬೇಕಿತ್ತು. ಆದರೆ ಕ್ರಿಕೆಟ್‌ನೆಡೆಗಿನ ತುಡಿತ ನನ್ನನ್ನು ಈ ಮಟ್ಟಕ್ಕೆ ತಂದಿತು. ನಿಮಗೆ ಅವಕಾಶಗಳು ಹೇರಳವಾಗಿದ್ದು ನೀವು ಅದೃಷ್ಟವಂತರು’ ಎಂದು ಹೇಳಿದರು.
‘ಹಲವು ಕ್ರಿಕೆಟಿಗರಂತೆ ನಾನೂ ಕೊನೆಯ ಬೆಂಚಿನ ವಿದ್ಯಾರ್ಥಿ. ವಿದ್ಯಾರ್ಥಿಗಳು ಒತ್ತಡವನ್ನು ನಿಭಾಯಿಸುವ ಕಲೆ ಕಲಿಯಬೇಕು. ಯಾವುದೇ ವಿಷಯದ ಕುರಿತು ಬದ್ಧತೆ, ತ್ಯಾಗ, ಸೆಳೆತ ಇದ್ದರೆ ಉತ್ತಮ ಫಲಿತಾಂಶ ತಾನಾಗೇ ಒಲಿದು ಬರುತ್ತದೆ. ಗುರಿ ಇಟ್ಟುಕೊಂಡು ಮುನ್ನುಗ್ಗಬೇಕು’ ಎಂದು ಹೇಳಿದರು.
‘ಟಿವಿ ಇರಲಿಲ್ಲ’:
ಕಪಿಲ್ ದೇವ್ ನೇತೃತ್ವದ ಭಾರತ ತಂಡ 1983ರಲ್ಲಿ ವಿಶ್ವಕಪ್ ಗೆದ್ದಾಗ ನಮ್ಮ ಮನೆಯಲ್ಲಿ ಟಿವಿ ಇರಲಿಲ್ಲ. ತಂಡ ಟ್ರೋಫಿ ಎತ್ತಿಹಿಡಿದ ವಿಷಯ ತಿಳಿದು ಬೀದಿಗಳಲ್ಲಿ ಕುಣಿದು ಕುಪ್ಪಳಿಸಿದ್ದೆವು ಎಂದು ವೆಂಕಟೇಶ್ ಪ್ರಸಾದ್ ಸ್ಮರಿಸಿದರು.
ಎಸ್.ಬಿ. ಪಾಟೀಲ ಗ್ರೂಪ್ ಇನ್‌ಸ್ಟಿಟ್ಯೂಷನ್ಸ್‌ನ ಅಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ ಮಾತನಾಡಿ, ‘ನಮ್ಮ ಸಂಸ್ಥೆಯ ಶಾಲೆಗಳನ್ನು ಉತ್ತಮವಾಗಿ ಅಭಿವೃದ್ಧಿ ಮಾಡಿದ್ದು, ಅಮಿತ್ ಪಾಟೀಲ ಶಾಲೆಯಲ್ಲಿ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸುವ ಕೆಲಸ ಪ್ರಗತಿಯಲ್ಲಿದೆ’ ಎಂದರು.
ಭಾರತ ಕ್ರಿಕೆಟ್ ತಂಡದ ಆಟಗಾರ್ತಿ ಶ್ರೇಯಾಂಕಾ ಪಾಟೀಲ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಚಂದು ಪಾಟೀಲ ಮಾತನಾಡಿದರು. ಕಾರ್ಯಕಾರಿ ನಿರ್ದೇಶಕ ಕೈಲಾಶ್ ಬಿ. ಪಾಟೀಲ, ಶಾಲೆಯ ಪ್ರಿನ್ಸಿಪಾಲ್ ರವಿಕುಮಾರ್ ಮತ್ತಿತರರು ಹಾಜರಿದ್ದರು.
ಆಕರ್ಷಕ ಪಥಸಂಚಲನ:
ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ರಾಷ್ಟ್ರ ಮತ್ತು ಶಾಲಾ ಧ್ವಜಾರೋಹಣ ಮಾಡಲಾಯಿತು. ಗಣ್ಯರು ಕ್ರೀಡಾಜ್ಯೋತಿ ಹೊತ್ತಿಸಿದರು. ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಈ ಕಾರ್ಯಕ್ರಮಕ್ಕೆ ಬಂದಿದ್ದು ನನಗೆ ಹೆಮ್ಮೆಯ ವಿಷಯ. ನೀವು ನನ್ನ ಬಾಲ್ಯದ ದಿನಗಳು ಹಾಗೂ ನನ್ನ ತಾತಾ ಅಜ್ಜಿಯ ನೆನಪಿಸಿಕೊಳ್ಳುವಂತೆ ಮಾಡಿದಿರಿಶ್ರೇಯಾಂಕಾ ಪಾಟೀಲ ಕ್ರಿಕೆಟ್ ಆಟಗಾರ್ತಿ
ರಾಯಚೂರು ವಲಯದಲ್ಲಿ ಕ್ರಿಕೆಟ್ ಬೆಳೆಸುವ ಕಾರ್ಯ ಮಾಡುತ್ತೇವೆ. ಈ ಭಾಗದ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಲಾಗುವುದುವೆಂಕಟೇಶ್ ಪ್ರಸಾದ್ ಕೆಎಸ್‌ಸಿಎ ಅಧ್ಯಕ್ಷ
ಕಲಬುರಗಿ ವಲಯಕ್ಕೆ ಸಿಗದ ಪ್ರತಿಕ್ರಿಯೆ; ಬೇಸರ
ರಾಯಚೂರು ಕ್ರಿಕೆಟ್ ವಲಯವನ್ನು ವಿಭಜಿಸಿ ಕಲಬುರಗಿ ಪ್ರತ್ಯೇಕ ಕೆಎಸ್‌ಸಿಎ ವಲಯ ರಚಿಸಬೇಕೆಂಬ ಈ ಭಾಗದವರ ಕೂಗಿಗೆ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಸೂಕ್ತವಾಗಿ ಸ್ಪಂದಿಸಲಿಲ್ಲ ಎಂದು ಕ್ರಿಕೆಟ್ ಪ್ರೇಮಿಗಳು ಬೇಸರ ವ್ಯಕ್ತಪಡಿಸಿದರು. ‘ನಾವು ಇಂದು ಬೆಳಿಗ್ಗೆಯೇ ಈ ಕುರಿತು ಪ್ರಸಾದ್ ಅವರಿಗೆ ಮನವಿಪತ್ರ ಕೊಟ್ಟಿದ್ದೇವೆ. ಬರೀ ನೋಡೋಣ ಎಂದು ಹೇಳಿದರು. ಹೆಚ್ಚಿಗೆ ಮಾತನಾಡಲು ಅಪಾಯಿಂಟ್‌ಮೆಂಟ್ ಕೊಡಲಿಲ್ಲ. ರಾಜ್ಯದಲ್ಲಿ 400ಕ್ಕಿಂತ ಹೆಚ್ಚಿನ ಕೆಎಸ್‌ಸಿಎ ಆಜೀವ ಸದಸ್ಯರು ಇದ್ದು ಬೆಂಗಳೂರು ಭಾಗದಲ್ಲಿ ಕೇರಳ ತಮಿಳುನಾಡಿನವರೂ ಬಂದು ಸದಸ್ಯರಾಗಿದ್ದಾರೆ. ಕಲಬುರಗಿಯಲ್ಲಿ ಒಬ್ಬರೂ ಕೆಎಸ್‌ಸಿಎ ಆಜೀವ ಸದಸ್ಯರು ಇಲ್ಲ ಎಂದು ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಾರೆ. ನಮ್ಮ ಭಾಗ ಸಂಪೂರ್ಣ ಅನ್ಯಾಯಕ್ಕೆ ಒಳಗಾಗಿದೆ’ ಎಂದು ಕಲಬುರಗಿ ಜಿಲ್ಲಾ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಜೈಭೀಮ ದರ್ಗಿ ಅಲವತ್ತುಕೊಂಡರು. ‘ಪ್ರತ್ಯೇಕ ರಾಜ್ಯದ ಬೇಡಿಕೆಯಂತೆ ನಾವೂ ಪ್ರತ್ಯೇಕ ಕ್ರಿಕೆಟ್ ಸಂಸ್ಥೆಗೆ ಬೇಡಿಕೆ ಇಡಬೇಕಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.