
ವಾಡಿ: ಈಚೆಗೆ ಪಟ್ಟಣದಲ್ಲಿನ ಶಾಲೆಯ ಮೇಲ್ಚಾವಣಿ ಪದರು ಕಳಚಿ ಬಿದ್ದು ವ್ಯಾಪಕ ಸುದ್ದಿ ಮಾಡಿತ್ತು. ಈಗ ಆ ಸರ್ಕಾರಿ ಶಾಲೆಯ ಜಾಗ ಕಬಳಿಸಿ ಅಲ್ಪಸಂಖ್ಯಾತ ಆಂಗ್ಲ ಮಾಧ್ಯಮ ಶಾಲೆ ಕಟ್ಟುವ ಕಾರ್ಯ ಸದ್ದಿಲ್ಲದೇ ನಡೆಯುತ್ತಿದ್ದು ಸ್ಥಳೀಯ ಶಿಕ್ಷಣಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಪಸಂಖ್ಯಾತ ಇಲಾಖೆಯ ಸಿಬ್ಬಂದಿಗಳು ಈಚೆಗೆ ಶಾಲೆ ಕಟ್ಟಡಕ್ಕಾಗಿ ಭೂಮಿ ಸರ್ವೆ ಮಾಡಿಕೊಂಡು ಹೋಗಿದ್ದು ಕನ್ನಡ ಶಾಲೆಯ ಪೋಷಕರ ಆತಂಕಕ್ಕೆ ಕಾರಣವಾಗಿದೆ.
ಪಟ್ಟಣದ ಹೃದಯ ಭಾಗದಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಜಾಗವನ್ನು ಮೌಲಾನಾ ಆಜಾದ್ ಶಾಲೆಯ ನೂತನ ಕಟ್ಟಡಕ್ಕಾಗಿ ಬಳಸಿಕೊಳ್ಳುವ ಪ್ರಯತ್ನಕ್ಕೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿದೆ. ಶಿಕ್ಷಣ ಇಲಾಖೆ ಪರವಾನಿಗೆ ನೀಡಿದರೆ ಸರ್ಕಾರಿ ಶಾಲೆ ಮುಚ್ಚುವುದು ಖಚಿತವಾಗಿದ್ದು, ಅಲ್ಪಸಂಖ್ಯಾತ ಆಂಗ್ಲ ಮಾಧ್ಯಮ ಶಾಲೆಗೆ ಬೇರೆ ಕಡೆ ಸ್ಥಳ ಒದಗಿಸಬೇಕು ಎನ್ನುವ ಒತ್ತಾಯ ಕೇಳಿಬಂದಿದೆ.
60 ವರ್ಷಗಳ ಹಿಂದೆ ಸ್ಥಾಪಿಸಲಾಗಿರುವ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸ್ತುತ ಕನ್ನಡ ಆಂಗ್ಲ ಮರಾಠಿ ಮತ್ತು ಉರ್ದು ಮಾಧ್ಯಮದ ಶಾಲೆಗಳು ನಡೆಯುತ್ತಿವೆ. ಈ ಶಾಲೆಯ 100*120 ಅಡಿ ಜಾಗದಲ್ಲಿ ಆಂಗ್ಲ ಅಲ್ಪಸಂಖ್ಯಾತ ಮೌಲಾನ ಅಜಾದ್ ಶಾಲೆ ಕಟ್ಟಡ ಕಟ್ಟಲು ಸರ್ವೇ ಕಾರ್ಯ ನಡೆಸಿದ್ದು ಆತಂಕಕ್ಕೆ ಕಾರಣವಾಗಿದೆ. ಇದರಿಂದ ಕನ್ನಡ ಶಾಲೆಯ ಜಾಗ ಕೈತಪ್ಪುವ ಭೀತಿ ಉಂಟಾಗಿದೆ.
ಪಟ್ಟಣದಲ್ಲಿ ಅಲ್ಪಸಂಖ್ಯಾತ ಶಾಲೆಗೆ ಸುಸುಜ್ಜಿತ ಕಟ್ಟಡ ನಿರ್ಮಿಸಬೇಕು ಎನ್ನುವ ಬೇಡಿಕೆಗೆ ಸ್ಪಂದಿಸಿದ್ದ ರಾಜ್ಯ ಸರ್ಕಾರ ₹5 ಕೋಟಿ ಅನುದಾನ ನೀಡಿದೆ. 6 ನೇ ತರಗತಿಯಿಂದ ಪದವಿಪೂರ್ವವರೆಗಿನ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅಂಗ್ಲ ಮಾಧ್ಯಮದಲ್ಲಿ ವಿದ್ಯಾಭ್ಯಾಸ ನೀಡುವ ಶಾಲೆ ಇದಾಗಿದ್ದು ಕಟ್ಟಡಕ್ಕಾಗಿ ಅನುದಾನ ಬಿಡುಗಡೆ ಮಾಡಿದೆ. ಬಲರಾಮ್ ಚೌಕ್‌ನ ಪ್ರೌಢಶಾಲೆಯ ಅಂಗಳದಲ್ಲಿ ಅಲ್ಪಸಂಖ್ಯಾತ ಮೌಲಾನ ಅಜಾದ್ ಶಾಲೆ ಕಟ್ಟಡ ನಿರ್ಮಿಸಲು ಈ ಮೊದಲು ಯೋಜನೆ ರೂಪಿಸಲಾಗಿತ್ತು. ಆದರೆ ಜಾಗ ವಿವಾದದಲ್ಲಿದ್ದ ಕಾರಣ ಮಾದರಿ ಶಾಲೆಯ ಮುಂಭಾಗದಲ್ಲಿ ರಸ್ತೆಗೆ ಹೊಂದಿಕೊಂಡು ಕಟ್ಟಡ ನಿರ್ಮಿಸಲು ಹೊರಟಿರುವುದು ವಿವಾದಕ್ಕೆ ಕಾರಣವಾಗಿದೆ.
‘ಅಲ್ಪಸಂಖ್ಯಾತ ಆಂಗ್ಲ ಮಾಧ್ಯಮ ಶಾಲೆಯನ್ನು ಕನ್ನಡ ಶಾಲೆಯ ಸ್ಥಳದಲ್ಲಿ ನಿರ್ಮಿಸುವ ಬದಲು ನ್ಯೂ ಟೌನ್ ಏರಿಯಾದಲ್ಲಿ ನಿರ್ಮಿಸಬೇಕು ಎನ್ನುತ್ತಾರೆ’ ಸ್ಥಳೀಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ವೆಂಕಟೇಶ ದೇವದುರ್ಗ.
‘ನ್ಯೂ ಟೌನ್ ಏರಿಯಾದಲ್ಲಿ ಪುರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆಯ 82 ಎಕರೆ ಜಮೀನು ಇದೆ. ಹೀಗಾಗಿ ಅಲ್ಲಿ ನಿರ್ಮಿಸುವ ಬದಲು ಕನ್ನಡ ಮಾಧ್ಯಮ ಶಾಲೆಯ ಆವರಣದಲ್ಲಿ ನಿರ್ಮಿಸಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ’ ಎನ್ನುತ್ತಾರೆ ವಿದ್ಯಾರ್ಥಿಗಳ ಪೋಷಕರು.
ಕನ್ನಡ ಮಾಧ್ಯಮ ಶಾಲೆ ಆವರಣದಲ್ಲಿ ಅಲ್ಪಸಂಖ್ಯಾತ ಆಂಗ್ಲ ಮಾಧ್ಯಮ ಶಾಲೆ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಿದ್ದು ಪ್ರಸ್ತಾವನೆ ಡಿಡಿಪಿಐ ಕಚೇರಿಗೆ ರವಾನಿಸಲಾಗಿದೆ. ಆದರೆ ಯಾವುದೇ ಅನುಮತಿ ನೀಡಿರುವುದಿಲ್ಲಶಶಿಧರ ಬಿರಾದಾರ ಬಿಇಒ ಚಿತ್ತಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.