ADVERTISEMENT

ವಾಡಿ | ಭಕ್ತಿ ಸಮರ್ಪಿಸಿದ ಭಕ್ತರಿಗೆ ಸಿದ್ದಿಪ್ರಾಪ್ತಿ: ಬಸವರಾಜ ಮತ್ತಿಮೂಡು

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 4:11 IST
Last Updated 20 ಜನವರಿ 2026, 4:11 IST
ನಾಲವಾರದ ಕೋರಿಸಿದ್ದೇಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಾಸಕ ಬಸವರಾಜ ಮತ್ತಿಮೂಡ ಉದ್ಘಾಟಿಸಿದರು
ನಾಲವಾರದ ಕೋರಿಸಿದ್ದೇಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಾಸಕ ಬಸವರಾಜ ಮತ್ತಿಮೂಡ ಉದ್ಘಾಟಿಸಿದರು   

ವಾಡಿ: ‘ನಾಲವಾರ ಕೋರಿಸಿದ್ದೇಶ್ವರ ಸಂಸ್ಥಾನ ಮಠಕ್ಕೆ ಭಕ್ತರೇ ಅಸ್ತಿ. ತನುಮನದ ಭಕ್ತಿ ಸಮರ್ಪಿಸಿದ ಭಕ್ತರಿಗೆ ಸಿದ್ದಿಪ್ರಾಪ್ತಿ ಸಿಗಲಿದೆ ಎನ್ನುವುದಕ್ಕೆ ನಾನೇ ಸಾಕ್ಷಿ. ತೋಟೇಂದ್ರ ಶ್ರೀಗಳ ಆಶೀರ್ವಾದದಿಂದ ನಾನು ಎರಡು ಬಾರಿ ಶಾಸಕನಾಗಿದ್ದೇನೆ’ ಎಂದು ಶಾಸಕ ಬಸವರಾಜ ಮತ್ತಿಮೂಡು ಹೇಳಿದರು.

ನಾಲವಾರದ ಕೋರಿಸಿದ್ದೇಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ, ಮಾಸಿಕ ಶಿವಾನುಭವ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ, ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಶಾಸಕನಾಗಿ ಕೆಲಸ ಮಾಡಲು ಶ್ರೀಗಳ ಮತ್ತು ನನ್ನ ಭಾಗದ ಜನರ ಆಶೀರ್ವಾದ ಕಾರಣ’ ಎಂದರು.

ಸಾನ್ನಿಧ್ಯ ವಹಿಸಿದ್ದ ಸಿದ್ದ ತೋಟೆಂದ್ರ ಶಿವಾಚಾರ್ಯ ಮಾತನಾಡಿ, ‘ಮಠದ ಆವರಣದಲ್ಲಿ 11 ದಿನ ನಡೆದ ಕಡಕೋಳ ಮಡಿವಾಳೇಶ್ವರ ಪ್ರವಚನ, ಭಕ್ತರ ಮನಸ್ಸು ಪರಿವರ್ತನೆ ಮಾಡಿದೆ. ಶರಣರ ಚಿಂತನೆ, ಜೀವನ, ಎದುರಿಸಿದ ಸಮಸ್ಯೆ ಮತ್ತು ಸವಾಲುಗಳು ನಮಗೆ ಆದರ್ಶವಾಗಬೇಕು’ ಎಂದರು.

ADVERTISEMENT

‘ಶರಣ ಮಡಿವಾಳಪ್ಪನವರು ಅನುಭವಿಸಿದ ಕಷ್ಟ ನೋವು ಅವರ ವಚನಗಳಾಗಿ, ಹಾಡುಗಳಾಗಿ ಹೊರ ಬಂದಿವೆ. ಇಂದಿಗೂ ಪ್ರತಿ ಪ್ರವಚನಕಾರರಿಗೆ ಕಡಕೋಳ ಮಡಿವಾಳೇಶ್ವರರ ವಚನಗಳು ಅಗ್ರಗಣ್ಯ. ಶ್ರೀಮಠದಲ್ಲಿ ನಡೆಯುವ ಭಕ್ತರ ಹರಕೆಯ ತನಾರತಿ ಮಹೋತ್ಸವಕ್ಕೆ ಸೇರುವ ಭಕ್ತರಿಂದ ಇಂದಿಗೂ ಜೀವಂತ ಪವಾಡವಾಗಿದೆ’ ಎಂದರು.

ತನಾರತಿಯಲ್ಲಿ ತಲೆ ಎತ್ತಿ ನಿಲ್ಲುವ ಬತ್ತಿ, ತಾನು ಸುಟ್ಟು ಬೆಳಕನ್ನು ನೀಡುವದಕ್ಕೆ ದ್ಯೋತಕವಾಗಿದೆ. ನಮ್ಮ ಬದುಕು ದೀಪದಲ್ಲಿರುವ ಬತ್ತಿಯಾಗಬೇಕು’ ಎಂದು ಹೇಳಿದರು.

ಹನ್ನೊಂದು ದಿನ ಜರುಗಿದ ಕಡಕೋಳ ಮಡಿವಾಳೇಶ್ವರರ ಪ್ರವಚನವನ್ನು ಸಿದ್ದ ಬಸವ ಕಬೀರ ಸ್ವಾಮಿಗಳು ಮಂಗಳಗೊಳಿಸಿದರು. ತೋಟೆಂದ್ರ ಬೆಂಗಳೂರ, ಮಹೇಶ ಸ್ವಾಮಿ ಚಿಂಚೋಳಿ, ನಾಗೇಶ ಪಾಟೀಲ ಧರ್ಮಾಪೂರ, ಮಹಾದೇವ ಗಂವಾರ ಇದ್ದರು.

ಶರಣಕುಮಾರ ಜಾಲಹಳ್ಳಿ, ಕಾಶೀನಾಥ ಮಳಗ, ಸಿದ್ದ ಔರಾದಿ ಪ್ರಾರ್ಥಿಸಿದರು, ಸಿದ್ದರಾಜ ಕರೆಡ್ಡಿ ಸ್ವಾಗತಿಸಿದರು, ಪ್ರತೀಕ್ಷಾ ಗಾರಂಪಳ್ಳಿ, ನಿಶಾ ಪಡಶೆಟ್ಟಿ ಅವರಿಂದ ಭರತ ನಾಟ್ಯ ಪ್ರದರ್ಶನ. ಕೋರಿಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಸಾಯಬಣ್ಣಾ ಗೋಗಿ, ಕಲ್ಲಯ್ಯಸ್ವಾಮಿ ಪಡದಳ್ಳಿ, ಬಸವರಾಜ ಅಳಂದ, ಈರಣ್ಣ ಕುಲಕುಂದಿ, ಚಂದ್ರಶೇಖರ ಗೋಗಿ ಅವರಿಂದ ಸಂಗೀತ ಸೇವೆ. ಶಿವಲಿಂಗ ಭೀಮನಳ್ಳಿ ಪರಿವಾರದಿಂದ ಸಿದ್ದತೋಟೇಂದ್ರರಿಗೆ ನಾಣ್ಯಗಳ ತುಲಾಭಾರ ಸೇವೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.