ADVERTISEMENT

‘ಮಹಿಳೆಯರ ಭಾವನೆಗೆ ಬೆಲೆ ಕೊಡಿ’

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2021, 3:07 IST
Last Updated 16 ಮಾರ್ಚ್ 2021, 3:07 IST
ಕಲಬುರ್ಗಿ ತಾಲ್ಲೂಕಿನ ಜೋಗೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಶಿವಶರಣ ಪರಪ್ಪಗೋಳ ಮಾತನಾಡಿದರು
ಕಲಬುರ್ಗಿ ತಾಲ್ಲೂಕಿನ ಜೋಗೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಶಿವಶರಣ ಪರಪ್ಪಗೋಳ ಮಾತನಾಡಿದರು   

ಜೋಗೂರ (ಕಲಬುರ್ಗಿ): ‘ಮಹಿಳೆಯರ ಸ್ವಾತಂತ್ರ್ಯ ಹಾಗೂ ಭಾವನೆಗಳಿಗೆ ಬೆಲೆ ನೀಡಿದರೆ ಅವರಲ್ಲಿಯೂ ಸ್ವಾವಲಂಬನೆ ಬೆಳೆಯುತ್ತದೆ’ ಎಂದುಕರ್ನಾಟಕ ರಾಜ್ಯ ಮಾನವ ಹಕ್ಕುಗಳು ಹಾಗೂ ಪರಿಸರ ಸಂರಕ್ಷಣಾ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಶಿವಶರಣ ಪರಪ್ಪಗೋಳ ಹೇಳಿದರು.

ತಾಲ್ಲೂಕಿನ ಜೋಗೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ರಾಜ್ಯ ಮಾನವ ಹಕ್ಕುಗಳು ಹಾಗೂ ಪರಿಸರ ಸಂರಕ್ಷಣಾ ಸಮಿತಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಮಹಿಳೆ ತಾಯಿಯಾಗಿ, ಅಕ್ಕ– ತಂಗಿಯಾಗಿ, ಮಡದಿಯಾಗಿ ತನ್ನ ಎಲ್ಲ ಕರ್ತವ್ಯಗಳನ್ನು ಚಾಚೂತಪ್ಪದೇ ನಿಭಾಯಿಸುತ್ತಾಳೆ. ಕುಟುಂಬದ ಜವಾಬ್ದಾರಿ ಹೊತ್ತು ಸಮರ್ಥವಾಗಿ ನಿರ್ವಹಿಸುತ್ತಾಳೆ. ಆದರೆ, ಅವರನ್ನು ಅಡುಗೆ ಮನೆಗೆ ಮಾತ್ರ ಸೀಮಿತಗೊಳಿಸದೇ ಅವರಲ್ಲಿನ ಕೌಶಲ, ಯೋಚನಾ ಸಾಮರ್ಥ್ಯಕ್ಕೆ ಬೆಲೆ ಕೊಡಬೇಕು. ಮಹಿಳೆಯರನ್ನು ನೋಡುವ ಭಾವನೆ ಬದಲಾದಾಗ ಮಾತ್ರ ಇದು ಸಾಧ್ಯವಾಗುತ್ತದೆ’ ಎಂದೂ ಹೇಳಿದರು.

ADVERTISEMENT

ಇದಕ್ಕೂ ಮುನ್ನ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಶೈಲಜಾ ಎಸ್. ಪಾಟೀಲ, ‘ಮಹಿಳೆ ತನ್ನೆಲ್ಲ ಕಷ್ಟ ಸಹಿಸಿಕೊಂಡು ಕುಟುಂಬದ ಒಳಿತಿಗಾಗಿ ಶ್ರಮಿಸುತ್ತಾಳೆ. ಕಲ್ಪನಾ ಚಾವ್ಲಾ, ಗಂಗೂಬಾಯಿ ಹಾನಗಲ್, ಸಾಲುಮರದ ತಿಮ್ಮಕ್ಕ, ಕಿರಣ್‌ ಬೇಡಿ, ಸುಧಾ ಮೂರ್ತಿ, ಪಿ‌.ವಿ.ಸಿಂಧು, ಹೆಲೆನ್ ಕೆಲ್ಲರ್, ಮೇಡಂ ಕ್ಯೂರಿ, ಮೇರಿ ಕೋಮ್ ಅವರಂಥ ಅನೇಕ ಮಹಿಳೆಯರು ಏಳು– ಬಿಳುಗಳನ್ನು ಮೆಟ್ಟಿ ನಿಂತು ಸಾಧನೆ ಮಾಡಿದ್ದಾರೆ. ಅವರ ಯಶೋಗಾಥೆ ಇಂದಿನ ಮಹಿಳೆಯರಿಗೆ ಸ್ಫೂರ್ತಿಯಾಗಲಿ’ ಎಂದರು.

ಶಿಕ್ಷಕ ಹುಲಿಕಂಠರಾಯ ಅಳಗುಂಡಗಿ ಮಾತನಾಡಿದರು. ಮುಖಂಡರಾದಸಂಗಣ್ಣ ಭಾಸಗಿ, ಗಂಗೋತ್ರಿ ಸಜ್ಜನ, ವೆಂಕಟೇಶ ಹುಲಕರ್ಣಿ, ಓಂಕಾರ, ವೆಂಕಟೇಶ ಹುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.