
ಯಡ್ರಾಮಿ: ತಾಲ್ಲೂಕಿನ ಕಡಕೋಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 19 ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪರದಾಡುವಂತಾಗಿದೆ.
ಈ ಶಾಲೆಯಲ್ಲಿ 9ನೇ ತರಗತಿ ಹಾಗೂ 10ನೇ ತರಗತಿಯಲ್ಲಿ 67 ಬಾಲಕರು ಹಾಗೂ 39 ಬಾಲಕಿಯರು ಸೇರಿ ಒಟ್ಟು 106 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲಾ ಕಟ್ಟಡಕ್ಕೆ ಮೂಲಸೌಲಭ್ಯವಾದ ವಿದ್ಯುತ್ ಸಂಪರ್ಕ ಇಲ್ಲದೆ ಇರುವುದರಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಅನೇಕ ಸಮಸ್ಯೆಗಳು ಎದುರಿಸುವಂತಾಗಿದೆ.
ಈ ಶಾಲೆ ಸುಮಾರು 2007ರಿಂದ ಇಂದಿನವರೆಗೆ ಸುಮಾರು 19 ವರ್ಷಗಳ ಕಾಲ ವಿದ್ಯುತ್ ಸಂಪರ್ಕವಿಲ್ಲದೆ ಕಾರ್ಯನಿರ್ವಹಿಸುತ್ತಿರುವುದು ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ತಲೆ ತಗ್ಗಿಸುವಂತಾಗಿದೆ. ಇಲ್ಲಿ ಕೇವಲ ಮೂವರು ಕಾಯಂ ಶಿಕ್ಷಕರು ಇದ್ದು, ಇನ್ನೂ ಮೂವರು ಅತಿಥಿ ಶಿಕ್ಷಕರಿಂದ ಶಾಲೆ ನಡೆಯುತ್ತಿದೆ.
ಶುದ್ಧ ಕುಡಿಯುವ ನೀರಿನ ಘಟಕದ ಬದಲು ಬೋರ್‌ವೆಲ್ ಇದ್ದು, ಶೌಚಾಲಯಕ್ಕೆ ಸಂಪರ್ಕವಿಲ್ಲದಂತಾಗಿದೆ. ಬಿಲ್‌ಗಾಗಿ ಶೌಚಾಲಯವನ್ನು ತಾತ್ಕಾಲಿಕ ನಿರ್ಮಾಣ ಮಾಡಲಾಗಿದ್ದು, ವಿದ್ಯಾರ್ಥಿಗಳಿಗೆ ಬಳಕೆಯಾಗುತಿಲ್ಲ. ಅದದನ್ನು ರಿಪೇರಿ ಸಹ ಮಾಡಿಸುತ್ತಿಲ್ಲ ಎನ್ನುತ್ತಾರೆ ವಿದ್ಯಾರ್ಥಿಗಳು.
ಕಾಂಪೌಂಡ್‌ಗೆ ಗೇಟ್ ವ್ಯವಸ್ಥೆ ಆಗಬೇಕು. ಶಾಲೆಗೆ ಸುಣ್ಣ–ಬಣ್ಣ ಕಾಣದೆ ಮಾಸಿ ಹೋಗಿದ್ದು, ಬಣ್ಣಗಳಿಗಾಗಿ ಶಾಲೆ ಎದುರು ನೋಡುತ್ತಿದೆ. ಶಾಲೆಗೆ ಆವರಣವಿದ್ದರೂ ಅಭಿವೃದ್ಧಿಯಿಂದ ವಂಚಿತಗೊಂಡಿದೆ. ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ(ಬಿಇಒ) ಮತ್ತು ವಿದ್ಯುತ್ ಉಪವಿಭಾಗ ಯಡ್ರಾಮಿ (ಕೆಇಬಿ)ಗೆ ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಶಾಸಕ ಡಾ.ಅಜಯಸಿಂಗ್ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಮಳೆಗಾಲ ಸಮಯದಲ್ಲಿ ಮೋಡ ಮುಸುಕಿದ ದಿನಗಳಲ್ಲಿ ತರಗತಿ ನಡೆಸಲು ಶಿಕ್ಷಕರಿಗೂ ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಇನ್ನಾದರು ಸಂಬಂಧಿಸಿದ ಅಧಿಕಾರಿಗಳು ಇತ್ತಗಮನಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
19 ವರ್ಷದಿಂದ ಶಾಲೆಗೆ ವಿದ್ಯುತ್ ಇಲ್ಲ ಎಂಬುದು ಸತ್ಯ ಸಂಗತಿಯಾಗಿದೆ. ವಿದ್ಯುತ್ ಕಲ್ಪಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆಭೀಮರಾಯ ಘತ್ತರಗಿ ಕಡಕೋಳ ಶಾಲೆ ಮುಖ್ಯ ಶಿಕ್ಷಕ
ಶಾಲೆಯಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಜತೆಗೆ ಇತರೆ ಸೌಕರ್ಯ ಸಹ ಇಲ್ಲದೆ ಉತ್ತಮ ಫಲಿತಾಂಶ ಬರಲು ಹೇಗೆ ಸಾಧ್ಯ?ಮಡಿವಾಳಪ್ಪಗೌಡ ಪೊಲೀಸ್ ಪಾಟೀಲ ಗ್ರಾಮಸ್ಥ
- ಈಗಾಗಲೇ ಕಾರ್ಯಯೋಜನೆ ರೂಪಿಸಿ ಶಾಸಕರಿಗೆ ಬರೆದು ಕೊಟ್ಟಿದ್ದೇವೆ. ಮರಗಾನೂರ ಹರವಾಳ ಹಂಚಿನಾಳ ಎಸ್.ವೈ ಸೇರಿ ಮೂರು ಶಾಲೆಗಳು ಜನವಸತಿ ಬಿಟ್ಟು ದೂರವಿರುವುದರಿಂದ ವಿದ್ಯುತ್ ಕಂಬ ಹಾಕಲು ಆಗಿಲ್ಲ. ಈ ವಿಚಾರ ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ ಅವರ ಗಮನಕ್ಕೆ ತರಲಾಗಿದ್ದು ವಾರದಲ್ಲಿ ವಿದ್ಯುತ್ ಕಲ್ಪಿಸುತ್ತೇವೆವೀರಣ್ಣ ಬೊಮ್ಮನಹಳ್ಳಿ ಬಿಇಒ ಜೇವರ್ಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.