ADVERTISEMENT

ಅಂತರರಾಷ್ಟ್ರೀಯ ಯೋಗ ದಿನ: ಕಲಬುರಗಿಯಲ್ಲಿ ಯೋಗ ಜಾಗೃತಿ ನಡಿಗೆ

ವಿವಿಧ ಇಲಾಖೆಗಳು, ಸಂಘ–ಸಂಸ್ಥೆಗಳ ಸಾಥ್‌; ಜಾಥಾದಲ್ಲಿ ಹೆಜ್ಜೆ ಹಾಕಿದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 14:29 IST
Last Updated 20 ಜೂನ್ 2025, 14:29 IST
ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಯೋಗ ಜಾಥಾಕ್ಕೆ ಕಲಬುರಗಿಯ ಜಗತ್‌ ವೃತ್ತದಲ್ಲಿ ಶುಕ್ರವಾರ ಶಾಸಕ ಅಲ್ಲಮಪ್ರಭು ಪಾಟೀಲ ಚಾಲನೆ ನೀಡಿದರು. ಜಿ.ಪಂ.ಸಿಇಒ ಭಂವರ್‌ಸಿಂಗ್ ಮೀನಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು
ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಯೋಗ ಜಾಥಾಕ್ಕೆ ಕಲಬುರಗಿಯ ಜಗತ್‌ ವೃತ್ತದಲ್ಲಿ ಶುಕ್ರವಾರ ಶಾಸಕ ಅಲ್ಲಮಪ್ರಭು ಪಾಟೀಲ ಚಾಲನೆ ನೀಡಿದರು. ಜಿ.ಪಂ.ಸಿಇಒ ಭಂವರ್‌ಸಿಂಗ್ ಮೀನಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು   

ಕಲಬುರಗಿ: 11ನೇ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆಯುಷ್‌ ಇಲಾಖೆ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಯೋಗ ಜಾಥಾ (ಯೋಗ ನಡಿಗೆ) ನಡೆಸಲಾಯಿತು.

ನಗರದ ಜಗತ್ ವೃತ್ತದಲ್ಲಿ ಯೋಗ ಜಾಥಾಗೆ ಶಾಸಕ ಅಲ್ಲಮಪ್ರಭು ಪಾಟೀಲ ಚಾಲನೆ ನೀಡಿದರು. ಜಗತ್ ವೃತ್ತದಿಂದ ಆರಂಭಗೊಂಡ ಈ ಜಾಥಾವು ಅನ್ನಪೂರ್ಣ ಕ್ರಾಸ್‌, ಲಾಹೋಟಿ ಪೆಟ್ರೋಲ್‌ ಪಂಪ್‌ ಎದುರಿನಿಂದ ಸರ್ದಾರ್‌ ವಲ್ಲಭ್‍ಭಾಯಿ ಪಟೇಲ್ ವೃತ್ತ ಮಾರ್ಗವಾಗಿ ಕಲಬುರಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಕೊನೆಗೊಂಡಿತು.

ಜಾಥಾ ಉದ್ದಕ್ಕೂ ವಿದ್ಯಾರ್ಥಿಗಳು ‘ಯೋಗ ಅಳವಡಿಸಿಕೊಳ್ಳಿ, ಸಂತೋಷದಿಂದಿರಿ’, ‘ರೋಗಮುಕ್ತ ಬದುಕಿನ ಇಚ್ಛೆಯಿದ್ದರೆ, ಯೋಗ ನಿತ್ಯದ ರೂಢಿಯಾಗಿಸಿಕೊಳ್ಳಿ’, ‘ಭೂಮಿಯೊಂದಿಗೆ ಉಸಿರಾಡಿ, ಯೋಗದೊಂದಿಗೆ ಮುನ್ನಡೆಯಿರಿ’, ‘ಯೋಗವು ಮನಸ್ಸು– ದೇಹವನ್ನು ಒಗ್ಗೂಡಿಸುವ ಅಭ್ಯಾಸ’ ಎಂಬ ಭಿತ್ತಿ ಫಲಕಗಳನ್ನು ಪ್ರದರ್ಶಿಸಿದರು.

ADVERTISEMENT

ಕಲಬುರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್‌ಸಿಂಗ್ ಮೀನಾ ಅವರು ಯೋಗದ ಮಹತ್ವವನ್ನು ಹೇಳಿದರು.

ಕಲಬುರಗಿ ಪ್ರಭಾರ ಜಿಲ್ಲಾ ಆಯುಷ್‌ ಅಧಿಕಾರಿ ಡಾ.ಕೆ.ಬಿ. ಬಬಲಾದಿ ಮಾತನಾಡಿ, ‘ಜೂನ್ 21ರಂದು ಶನಿವಾರ ಜರುಗುವ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಎಲ್ಲಾ ಯೋಗ ಸಂಘ–ಸಂಸ್ಥೆಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು’ ಎಂದು ಕೋರಿದರು.

ಈ ಸಂದರ್ಭದಲ್ಲಿ ಜಿಲ್ಲೆಯ ಯೋಗ ಸಂಸ್ಥೆಗಳಾದ ಪತಂಜಲಿ ಯೋಗ ಸಮಿತಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಭೂಮಿ ಯೋಗ ಫೌಂಡೇಷನ್, ಓಂ ಯೋಗ ಕೇಂದ್ರ, ವಿವೇಕ ಜಾಗೃತಿ ಯೋಗ ವಿದ್ಯಾಪೀಠ, ಹರಿ ಓಂ ಯೋಗ ಕೇಂದ್ರ, ಸೃಷ್ಟಿ ಯೋಗ ಕೇಂದ್ರ, ಜೈ ಶ್ರೀರಾಮ ಯೋಗ ತಂಡ ಹಾಗೂ ಮಾನವೀಯ ಕಲ್ಯಾಣ ಟ್ರಸ್ಟ್‌ನ ಮುಖ್ಯಸ್ಥರು, ಶಿಬಿರಾರ್ಥಿಗಳು ಹಾಗೂ ನಗರದ ಆಯುಷ್‌ ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಆರೋಗ್ಯಕರ ಜೀವನಕ್ಕಾಗಿ ಪ್ರತಿಯೊಬ್ಬರೂ ಯೋಗಾಸನ ಮಾಡಬೇಕು. ಇದರಿಂದ ನಾವು ರೋಗಮುಕ್ತರಾಗಿ ಬದುಕಲು ಸಾಧ್ಯವಾಗುತ್ತದೆ
ಅಲ್ಲಮಪ್ರಭು ಪಾಟೀಲ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.