ADVERTISEMENT

ಅವ್ಯವಸ್ಥೆಯ ಆಗರವಾದ ವಸತಿ ನಿಲಯ

ಪ್ರಜಾವಾಣಿ ವಿಶೇಷ
Published 10 ಜೂನ್ 2013, 7:02 IST
Last Updated 10 ಜೂನ್ 2013, 7:02 IST
ಅವ್ಯವಸ್ಥೆಯ ಆಗರವಾದ ವಸತಿ ನಿಲಯ
ಅವ್ಯವಸ್ಥೆಯ ಆಗರವಾದ ವಸತಿ ನಿಲಯ   

ಕುಶಾಲನಗರ: ಕುಡಿಯುವ ನೀರಿಗೂ ಹಾಹಾಕಾರ, ಆವರಣದ ತುಂಬ ಬೆಳೆದ ಪಾರ್ಥೇನಿಯಂ, ಕೆಟ್ಟು ನಿಂತಿರುವ ಕೊಳವೆಬಾವಿ, ತುಕ್ಕು ಹಿಡಿದ ಸೋಲಾರ್ ವಾಟರ್ ಹೀಟರ್ ವ್ಯವಸ್ಥೆ...

ಪಟ್ಟಣದ ಹೃದಯ ಭಾಗದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯದ ಇಂದಿನ ಸ್ಥಿತಿ ಇದು.
ಈ ಹಾಸ್ಟೆಲಿನಲ್ಲಿ ಒಟ್ಟು 28 ಕೊಠಡಿಗಳಿವೆ. ಆದರೆ, ಬರೋಬ್ಬರಿ 130 ವಿದ್ಯಾರ್ಥಿಗಳು ಇಲ್ಲಿದ್ದಾರೆ. ಈ ಹಾಸ್ಟೆಲ್ ಇರುವುದು ಕಾಲೇಜು ವಿದ್ಯಾರ್ಥಿಗಳಿಗೋ, ಶಾಲಾ ವಿದ್ಯಾರ್ಥಿಗಳಿಗೋ ಎಂಬುದೇ ಇನ್ನೂ ಗೊಂದಲಮಯವಾಗಿದೆ. ಈಗಲೂ ಒಂದೇ ಕಟ್ಟಡದಲ್ಲಿ ಎರಡು ವಸತಿ ನಿಲಯಗಳು ನಡೆಯುತ್ತಿವೆ.

ಇನ್ನೂ ಸಿಗದ ಮೂಲ ಸೌಲಭ್ಯ
ಬಹಳ ವರ್ಷಗಳಿಂದ ಇಲ್ಲಿ ಶಾಲೆ ವಿದ್ಯಾರ್ಥಿಗಳ ಹಾಸ್ಟೆಲ್ ನಡೆಯುತ್ತಿದೆ. ಈವರೆಗೆ ಕನಿಷ್ಠ ಮೂಲಭೂತ ಸೌಕರ್ಯ ಕಲ್ಪಿಸಲಾಗಿಲ್ಲ. ಇದೇ ಕಟ್ಟಡದಲ್ಲಿ ಪುನಃ 1998ರಿಂದ ಕಾಲೇಜು ವಿದ್ಯಾರ್ಥಿನಿಲಯ ಆರಂಭಿಸಲಾಯಿತು. ಹೀಗಾಗಿ ಇದ್ದ ಸಮಸ್ಯೆಗಳಿಗೆ ಇನ್ನಷ್ಟು ಸಮಸ್ಯೆಗಳು ಸೇರಿಕೊಂಡು ಸಮಸ್ಯೆಗಳ ಆಗರವಾಗಿ ಮಾರ್ಪಟ್ಟಿದೆ.

ಕಾಲೇಜು ಕಲಿಯುವ 50 ವಿದ್ಯಾರ್ಥಿಗಳು ದಾಖಲಾಗಲು ಅವಕಾಶವಿರುವ ಹಾಸ್ಟೆಲ್‌ನಲ್ಲಿ ಇಬ್ಬರು ಅಡುಗೆ ಸಹಾಯಕರು ಮಾತ್ರ ಇದ್ದಾರೆ. ಇನ್ನು ಶಾಲೆಯ ವಿದ್ಯಾರ್ಥಿಗಳ ಹಾಸ್ಟೆಲ್‌ನಲ್ಲಿ 85 ವಿದ್ಯಾರ್ಥಿಗಳಿದ್ದು, ಒಬ್ಬನೇ ಒಬ್ಬ ಅಡುಗೆ ಸಹಾಯಕ ಇದ್ದಾನೆ. ಆತನೂ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ಈ ಕುರಿತು ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ನಿಲಯಪಾಲಕ ಎಚ್.ಎಸ್. ಮಧು ಅವರ ಆರೋಪ.

ವಿದ್ಯಾರ್ಥಿಗಳಿಗೆ ಕಾಯಿಸಿದ ನೀರು ಸೌಲಭ್ಯ ಕಲ್ಪಿಸುವುದಕ್ಕಾಗಿ ಮೂರು ವರ್ಷಗಳ ಹಿಂದೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಸೋಲಾರ್ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಹಣದ ಕೊರತೆ ಎಂಬ ನೆಪವೊಡ್ಡಿ ಗುತ್ತಿಗೆದಾರರು ನೆಲಕ್ಕೆ ಸೋಲಾರ್ ಅಳವಡಿಸಿದ್ದಾರೆ. ಪರಿಣಾಮವಾಗಿ ಅವುಗಳು ಸಂಪೂರ್ಣ ತುಕ್ಕು ಹಿಡಿದು ಆಳಾಗಿವೆ. ಹೀಗಾಗಿ ಸೋಲಾರ್ ವ್ಯವಸ್ಥೆ ಇರುವುದಾದರೂ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ.

ಇತ್ತೀಚೆಗಷ್ಟೇ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಹೊಸದಾಗಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಆದರೆ, ಅದಕ್ಕೆ ವಿದ್ಯುತ್ ಹಾಗೂ ನೀರಿನ ಸೌಲಭ್ಯ ಕಲ್ಪಿಸಲಾಗಿಲ್ಲ. ಹೀಗಾಗಿ ಅದೂ ಕೂಡ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಿಲ್ಲ.

ಬೋರ್‌ವೆಲ್ ಇದೆಯಾದರೂ ಅದು ಕೆಟ್ಟು ನಿಂತು ಯಾವುದೋ ಕಾಲವಾಗಿದೆ. ಹೀಗಾಗಿ ಹಾಸ್ಟೆಲ್‌ಗೆ ಮೂರು ದಿನಗಳಿಗೊಮ್ಮೆ ದೊರೆಯುವ ಕಾವೇರಿ ನೀರೇ ಗತಿ. ಬಟ್ಟೆ ತೊಳೆಯಲು ಮತ್ತಿತರ ಬಳಕೆಗಾಗಿ ಐದು ನಲ್ಲಿಗಳಿವೆ. ಅವುಗಳಲ್ಲಿ ಮೂರು ನಲ್ಲಿಗಳು ಮುರಿದು ಹೋಗಿ ಬಳಕೆಗೆ ಬರುತ್ತಿಲ್ಲ. ಒಟ್ಟಾರೆ ಹಾಸ್ಟೆಲ್ ಸಂಪೂರ್ಣ ಸಮಸ್ಯೆಗಳ ಆಗರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.