ನಾಪೋಕ್ಲು: ಸಮೀಪದ ನೆಲಜಿ ಗ್ರಾಮದಲ್ಲಿ ಕಾಡಾನೆ ಹಾವಳಿಯಿಂದ ಗ್ರಾಮಸ್ಥರು ಸಮಸ್ಯೆ ಎದುರಿಸುತ್ತಿದ್ದಾರೆ. ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲಜಿ ಆನೆಟ್ಟಿ ಪೇರೂರು ಹಾಗೂ ಕುಂಜಿಲ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆ ಹಿಂಡು ಬೀಡು ಬಿಟ್ಟಿದ್ದು ಅಪಾರ ಪ್ರಮಾಣದ ಬೆಳೆ ಹಾಗೂ ತೋಟ ಹಾನಿಯಾಗಿದೆ.
ಇತ್ತೀಚೆಗೆ ಕಾಫಿ ಬೆಳೆಗಾರ ಅಪ್ಪು ಮಣಿಯಂಡ ರಘು ಸುಬ್ಬಯ್ಯನವರ ಎರಡು ಏಕರೆಗೂ ಅಧಿಕ ಬಾಳೆ - ಅಡಿಕೆ ತೋಟ ಕಾಡಾನೆ ದಾಳಿಗೆ ತುತ್ತಾಗಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಆನೆ ಓಡಿಸುವ ಕೆಲಸ ಕೈಗೊಳ್ಳದೇ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬುದು ನೊಂದ ಗ್ರಾಮಸ್ಥರ ಅಳಲು. ಕಳೆದ ಕೆಲವು ದಿನಗಳಿಂದ 5ರಿಂದ 6 ಕಾಡಾನೆಗಳ ಹಿಂಡು ಈ ವ್ಯಾಪ್ತಿಯಲ್ಲಿ ಸಂಚರಿಸುತ್ತಿದೆ.
ಕಾಫಿ ತೋಟ ಸೇರಿದಂತೆ ಬಾಳೆ ತೆಂಗು ಅಡಿಕೆ ತೋಟಗಳನ್ನು ದಿನನಿತ್ಯ ಧ್ವಂಸ ಮಾಡುತ್ತಿವೆ. ಇದರಿಂದ ಲಕ್ಷಾಂತರ ರೂಪಾಯಿಗಳ ತೋಟದ ಫಸಲು ನಾಶವಾಗಿದೆ. ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕಾಡಾನೆಗಳಿಂದ ದೊಡ್ಡ ಪ್ರಮಾಣದಲ್ಲಿ ನಷ್ಟ ಸಂಭವಿಸುತ್ತಿದ್ದರೂ ಕಾಟಾಚಾರಕ್ಕೆಂಬಂತೆ ನಾಪೋಕ್ಲು ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕಾಡಾನೆ ಓಡಿಸುವ ಕಾರ್ಯಕ್ಕೆ ಅರಣ್ಯ ಇಲಾಖಾಧಿಕಾರಿಗಳು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಇಗ್ಗತ್ತಪ್ಪ ಬೆಟ್ಟದ ತಳಭಾಗದಲ್ಲಿರುವ ನೆಲಜಿ ಗ್ರಾಮಸ್ಥರು ಮುಖ್ಯ ರಸ್ತೆಗೆ ಕಾಲ್ನಡಿಗೆಯಲ್ಲಿ ಸಂಚರಿಸುವ ಅನಿವಾರ್ಯತೆ ಇದೆ. ಕಾಡಾನೆ ಭಯದಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು ತೋಟಗಳಲ್ಲಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರು ಭಯಭೀತರಾಗಿದ್ದಾರೆ. ಗ್ರಾಮದ ಸಮಸ್ಯೆಗಳಿಗೆ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂಬುದು ಗ್ರಾಮಸ್ಥರ ಆರೋಪ.
ಕೊಡಗು ಜಿಲ್ಲೆಯಲ್ಲಿ ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ಅರಣ್ಯ ಪ್ರದೇಶದಲ್ಲಿ ಕುಡಿಯುವ ನೀರಿನ ಹಾಗೂ ಆಹಾರ ಕೊರತೆಯಿಂದಾಗಿ ಕಾಡಾನೆಗಳು ನಾಡಿಗೆ ನುಗ್ಗಿ ದಾಂಧಲೆ ಮಾಡುವುದು ಸಾಮಾನ್ಯವಾಗಿದ್ದರೂ ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ಬಿದಿರು ಹೂ ಬಿಟ್ಟ ಕಾರಣ ಈ ಬಾರಿ ಮಳೆಗಾಲದಲ್ಲೂ ಅರಣ್ಯದಲ್ಲಿ ಆಹಾರ ಸಿಗದೆ ಕಾಡಾನೆಗಳು ನಾಡಿಗೆ ನುಗ್ಗಿ ರೈತರು ಬೆಳೆದ ಬೆಳೆ ನಾಶಪಡಿಸುವುದರೊಂದಿಗೆ ಮಾನವ ಹಾಗೂ ಸಾಕು ಪ್ರಾಣಿಗಳ ಸಾವಿಗೂ ಕಾರಣವಾಗುತ್ತಿವೆ.
ಜಿಲ್ಲೆಯಲ್ಲಿ ಉದ್ಭವಿಸುತ್ತಿರುವ ಕಾಡಾನೆ ಹಾಗೂ ಮಾನವರ ನಡುವಿನ ಸಂಘರ್ಷವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಅರಣ್ಯ ವನ್ಯಜೀವಿ ರಕ್ಷಣೆ ಹೆಸರಿನಲ್ಲಿ ಅರಣ್ಯಗಳನ್ನು ವನ್ಯಧಾಮಗಳೆಂದೂ ಸರ್ಕಾರ ಘೋಷಿಸಿದೆ. ಅದರೆ ತಲೆತಲಾಂತರದಿಂದ ಇದೇ ಅರಣ್ಯ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಜನರ ಬದುಕಿಗೆ ಸೂಕ್ತ ಭದ್ರತೆ ಕಲ್ಪಿಸುವಲ್ಲಿ ಮಾತ್ರ ವಿಫಲವಾಗಿವೆ.
ಮಂಗಳವಾರ ನೆಲಜಿ ಗ್ರಾಮದ ನಾಪನೆರವಂಡ ಕುಟುಂಬಸ್ಥರಿಗೆ ಸೇರಿದ ಎತ್ತುಬಾಣೆ ಎಂಬಲ್ಲಿ ಆನೆಗಳ ಹಿಂಡು ಬೀಡು ಬಿಟ್ಟಿರುವುದನ್ನು ಗ್ರಾಮಸ್ಥರು ಕಂಡಿದ್ದಾರೆ. ಇಲ್ಲಿಯ ನಿವಾಸಿ ಮಾಳೆಯಂಡ ಚರ್ಮಣ ಅಣಬೆ ಕೀಳಲೆಂದು ಕಾಡಿನೊಳಗೆ ತೆರಳಿದ ಸಂದರ್ಭ ಆನೆಗಳು ಗೋಚರಿಸಿವೆ. ಆನೆಗಳನ್ನು ಕಾಡಿಗಟ್ಟುವ ಕೆಲಸ ತುರ್ತಾಗಿ ಆಗಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.