ADVERTISEMENT

ಕಾಫಿ ಕೃಷಿಗೆ ರೂ 962 ಕೋಟಿ ಸಾಲ!

ನಬಾರ್ಡ್ ಸಾಮರ್ಥ್ಯ ಆಧಾರಿತ ಸಾಲ ಯೋಜನೆ ಪ್ರಕಟ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 10:41 IST
Last Updated 13 ಡಿಸೆಂಬರ್ 2012, 10:41 IST

ಮಡಿಕೇರಿ: ಮುಂದಿನ 2013-14ನೇ ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ಕಾಫಿ ಬೆಳೆಗಾಗಿ 962 ಕೋಟಿ ರೂಪಾಯಿವರೆಗೆ ಸಾಲ ನೀಡಬಹುದೆಂದು ನಬಾರ್ಡ್ ತನ್ನ ಸಾಮರ್ಥ್ಯ ಆಧಾರಿತ ಸಾಲ ಯೋಜನೆಯಲ್ಲಿ ಗುರುತಿಸಿದೆ.

ನಬಾರ್ಡ್‌ನ ಈ ಸಾಲ ಯೋಜನಾ ಪತ್ರವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಶಿವಪ್ಪ ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಬಿ. ಅಂಜನಪ್ಪ ಬುಧವಾರ ನಗರದ ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ಬಿಡುಗಡೆಗೊಳಿಸಿದರು.
ಸರ್ಕಾರದ ವಿವಿಧ ಇಲಾಖೆಗಳು, ಕಾಫಿ ಬೋರ್ಡ್, ಸಾಂಬಾರ ಮಂಡಳಿ ಸೇರಿದಂತೆ ಕೃಷಿಗೆ ಸಂಬಂಧಿಸಿದಂತೆ ಎಲ್ಲ ಅಧಿಕಾರಿಗಳನ್ನು ಸಂಪರ್ಕಿಸಿ ನಬಾರ್ಡ್ ಈ ಯೋಜನಾ ಪತ್ರವನ್ನು ರೂಪಿಸಿದೆ.

ಕೊಡಗು ಜಿಲ್ಲೆಗಾಗಿ ಒಟ್ಟು ರೂ 2378 ಕೋಟಿ ಸಾಲ ಯೋಜನೆ ತಯಾರಿಸಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 32 ರಷ್ಟು ಹೆಚ್ಚಳ ಇದಾಗಿದೆ.

ಇದರಲ್ಲಿ ಕೃಷಿ ವಲಯಕ್ಕೆ ರೂ 2089 ಕೋಟಿ ಮೀಸಲಿರಿಸಲಾಗಿದೆ (ಕಳೆದ ವರ್ಷ ರೂ 1553.30 ಕೋಟಿ ಇಡಲಾಗಿತ್ತು). ಇದರಲ್ಲಿ ಜಿಲ್ಲೆಯ ಪ್ರಮುಖ ಬೆಳೆಯಾದ ಕಾಫಿಗೆ ರೂ 962 ಕೋಟಿ (ಶೇ 46) ಮೀಸಲು ಇಡಲಾಗಿದೆ (ಕಳೆದ ವರ್ಷ 929.50 ಕೋಟಿ ಸಾಲ ನಿಗದಿ ಮಾಡ ಲಾಗಿತ್ತು).

ಜಿಲ್ಲೆಯ ಒಟ್ಟು ಕೃಷಿ ಭೂಮಿಯ ಶೇ 64ರಷ್ಟು ಕಾಫಿ (1,04,890 ಹೆಕ್ಟೇರ್ ಪ್ರದೇಶ) ವಿಸ್ತರಿಸಿದೆ. ಸಾಂಬಾರ (ಶೇ 12), ಆಹಾರ ಧಾನ್ಯಗಳು (ಶೇ 16) ಹಾಗೂ ಹಣ್ಣು- ತರಕಾರಿ (ಶೇ 8) ಬೆಳೆಯಲಾಗುತ್ತಿದೆ.

ಕಾಫಿಯ ನಂತರದ ಸ್ಥಾನ ಬತ್ತ ಬೆಳೆಗೆ ರೂ 80 ಕೋಟಿ, ಕರಿಮೆಣಸಿಗೆ ರೂ 31.35 ಕೋಟಿ, ಅಡಿಕೆಗೆ ರೂ 21 ಕೋಟಿ, ತೆಂಗು ರೂ 13.12 ಕೋಟಿ, ಏಲಕ್ಕಿ ರೂ 16.53 ಕೋಟಿ, ಕಿತ್ತಳೆ ಬೆಳೆಗೆ ರೂ 20.92 ಕೋಟಿ, ಬಾಳೆಗೆ ರೂ 12.37 ಕೋಟಿ, ಮೆಕ್ಕೆಜೋಳಕ್ಕೆ ರೂ 6.21 ಕೋಟಿ, ರಾಗಿಗೆ ರೂ 45 ಲಕ್ಷ, ಬೇಳೆಕಾಳುಗಳಿಗೆ ರೂ 1.08 ಕೋಟಿ, ಶುಂಠಿಗೆ ರೂ 27.20 ಕೋಟಿ, ತಂಬಾಕುಗೆ ರೂ 27.72 ಕೋಟಿ ಹಾಗೂ ತರಕಾರಿಗೆ ರೂ 7.40 ಕೋಟಿ ಸಾಲ ಮೀಸಲು ಇಡಲು ಯೋಜಿಸಲಾಗಿದೆ.

ಇದರ ಜೊತೆ ಕಟಾವು ನಂತರದ ಕೆಲಸಕಾರ್ಯಗಳಿಗೆ ರೂ 122.78 ಕೋಟಿ ಹಾಗೂ ಕೃಷಿ ಉಪಕರಣಗಳಿಗೆ ರೂ 245.57 ಕೋಟಿ ಸಾಲ ನೀಡುವ ಸಾಮರ್ಥ್ಯವನ್ನು ಗುರುತಿಸಲಾಗಿದೆ. ಇದರೊಂದಿಗೆ ಕೃಷಿ ಸಾಲಕ್ಕಾಗಿ ರೂ 1596.22 ಕೋಟಿ ಗುರುತಿಸಲಾಗಿದೆ.

ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದಂತೆ ಅವಧಿ ಸಾಲ ನೀಡಲು ರೂ 492.89 ಕೋಟಿ ಗುರುತಿಸಲಾಗಿದೆ. ಇವೆರಡೂ ಸೇರಿದರೆ ಒಟ್ಟು ರೂ 2089.11 ಕೋಟಿ ಕೃಷಿ ಸಾಲದ ಸಾಮರ್ಥ್ಯವನ್ನು ನಬಾರ್ಡ್ ಗುರುತಿಸಿದೆ.

ಕೃಷಿ ಅಭಿವೃದ್ಧಿಗೆ ರೂ 2089 ಕೋಟಿ (ಶೇ.88) ಮೀಸಲಿಡುವ ಮೂಲಕ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಕೈಗಾರಿಕೆಗೆ 26 ಕೋಟಿ, ನೀರಾವರಿಗೆ 169 ಕೋಟಿ, ವ್ಯಾಪಾರ ವಹಿವಾಟಿಗೆ 263 ಕೋಟಿ ನಿಗದಿಪಡಿಸಲಾಗಿದೆ. 
ಕೃಷಿ ಸಾಲ ಹಾಗೂ ಇತರೆ ವಲಯವೂ ಸೇರಿದಂತೆ ಒಟ್ಟು ಕೊಡಗು ಜಿಲ್ಲೆಗೆ ರೂ 2377.93 ಕೋಟಿ ಸಾಮರ್ಥ್ಯ ಆಧಾರಿತ ಸಾಲ ಯೋಜನೆಯನ್ನು ನಬಾರ್ಡ್ ರೂಪಿಸಿದೆ.

ಮಾರ್ಚ್‌ನಲ್ಲಿ ಸಾಲ ಯೋಜನೆ ಪ್ರಕಟ: ನಬಾರ್ಡ್ ಸಂಸ್ಥೆಯು ಪ್ರತಿ ವರ್ಷ ಸಾಮರ್ಥ್ಯ ಆಧಾರಿತವಾಗಿ ಯಾವ ಜಿಲ್ಲೆಗೆ  ಎಷ್ಟು ಸಾಲ ನೀಡಬಹುದು ಎನ್ನುವ ಅಂದಾಜು ಪಟ್ಟಿ ಯನ್ನು ರೂಪಿಸುತ್ತದೆ. ಈ ಪಟ್ಟಿಯ ಆಧಾರದ ಮೇಲೆ ಲೀಡ್ ಬ್ಯಾಂಕ್ ಮಾರ್ಚ್ ತಿಂಗಳಿನಲ್ಲಿ ಜಿಲ್ಲೆಯ ಸಾಲ ಯೋಜನೆಯನ್ನು ಪ್ರಕಟಿಸುತ್ತದೆ. ಇಲ್ಲಿ ನಿಗದಿಪಡಿಸಿದಂತೆ ಎಲ್ಲ ವಲಯಗಳಿಗೆ ಸಾಲ ನೀಡಲು ಬ್ಯಾಂಕುಗಳು ಕ್ರಮವಹಿಸುತ್ತವೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಅರುಣಾಚಲ ಶರ್ಮಾ ಅವರು `ಪ್ರಜಾವಾಣಿ'ಗೆ ತಿಳಿಸಿದರು.

ನಬಾರ್ಡ್ ರೂಪಿಸಿರುವ ಸಾಲ ಯೋಜನೆಯು ಜಿಲ್ಲೆಯ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳುವ ಮುನ್ನೋಟ ವಾಗಿದ್ದು, ಜಿಲ್ಲೆಯಲ್ಲಿ ಅತ್ಯಗತ್ಯವಾಗಿ ಬೇಕಿರುವ ಕೃಷಿ, ಪಶುಪಾಲನೆ, ಕೈಗಾರಿಕೆ, ಮೀನುಗಾರಿಕೆ ಮತ್ತಿತರ ಕೃಷಿ ಆಧಾರಿತ ಅಂಶಗಳನ್ನು ಒಳಗೊಂಡ ಅಭಿವೃದ್ಧಿ ಕಾರ್ಯ ಗಳನ್ನು ಮಾಡಲು ಮಹತ್ತರವಾದ ಸಾಲ ಯೋಜನೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಬಿ. ಆಂಜನಪ್ಪ ಹೇಳಿದರು.

ರಿಸರ್ವ್ ಬ್ಯಾಂಕಿನ ಮಹಾಪ್ರಬಂಧಕರಾದ ಜಿ.ಎಚ್. ರಾವ್ ಅವರು ಮಾತನಾಡಿ ಸಾಲ ಯೋಜನೆಗೆ ನಿಗಧಿಪಡಿಸಿ ರುವ ಗುರಿಯನ್ನು ಬ್ಯಾಂಕ್‌ಗಳ ವ್ಯವಸ್ಥಾಪಕರು ಸಾಧಿಸುವಂತೆ ಸಲಹೆ ಮಾಡಿದರು.

ನಬಾರ್ಡ್ ಸಹಾಯಕ ಪ್ರಬಂಧಕರಾದ ಶಿವರಾಮ ಕೃಷ್ಣನ್ ಅವರು ಕಳೆದ ವರ್ಷ ಪ್ರಗತಿ ಮತ್ತು ಈ ವರ್ಷದ ಸೆಪ್ಟೆಂಬರ್ ಅಂತ್ಯದ ವರೆಗಿನ ಸಾಧನೆ ಬಗ್ಗೆ ನಾನಾ ಬ್ಯಾಂಕ್‌ಗಳ ವ್ಯವಸ್ಥಾಪಕರಿಂದ ಮಾಹಿತಿ ಪಡೆದರು.
ಕಾರ್ಪೋರೇಷನ್ ಬ್ಯಾಂಕ್ ವಲಯ ಸಹಾಯಕ ಮಹಾಪ್ರಬಂಧಕರಾದ ನಾಗರಾಜ ಉಡುಪ ಅವರು ಸಾಲ ಯೋಜನೆಗಳ ಗುರಿಯ ಪ್ರಗತಿ ಸಾಧಿಸುವ ಬಗ್ಗೆ ನಾನಾ ಸಲಹೆಗಳನ್ನು ನೀಡಿದರು.

`ಆರು ತಿಂಗಳ ಪ್ರಗತಿ'
ಮಡಿಕೇರಿ: ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಜಿ.ಅರುಣಾಚಲ ಶರ್ಮ ಅವರು ಪ್ರಸಕ್ತ 2012ರ ಏಪ್ರಿಲ್‌ನಿಂದ 2012ರ ಸೆಪ್ಟೆಂಬರ್ ಅಂತ್ಯದೊಳಗಿನ ಸಾಲ ಯೋಜನೆಯ ಪ್ರಗತಿ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಕೃಷಿ ವಲಯದ ರೂ 989.80 ಕೋಟಿ ಗುರಿಯಲ್ಲಿ ರೂ 441.54 ಕೋಟಿ ಸಾಲ ವಿತರಣೆ ಮಾಡಲಾಗಿದ್ದು, ಶೇ. 45ರಷ್ಟು ಸಾಧನೆ.

ಅಲ್ಪಾವಧಿ ಸಾಲದಲ್ಲಿ ರೂ 323.46 ಕೋಟಿ ಗುರಿಯಲ್ಲಿ ರೂ 123.26 ಕೋಟಿ ಸಾಲ ವಿತರಣೆ ಮಾಡಲಾಗಿದ್ದು, ಶೇ.38ರಷ್ಟು ಸಾಧನೆಯಾಗಿದೆ.

ಇತರೆ ಚಟುವಟಿಕೆಗಳಿಗೆ ರೂ 61.51 ಕೋಟಿ ಗುರಿಯಲ್ಲಿ ರೂ 21.59 ಕೋಟಿ, ಸಾಲ ವಿತರಿಸಿ ಶೇ. 35ರಷ್ಟು ಸಾಧನೆ ಮಾಡಲಾಗಿದೆ. ಒಟ್ಟಾರೆ ಕೃಷಿ ಆಧಾರಿತ ವಲಯಕ್ಕೆ 137477 ಲಕ್ಷ ರೂ.ಗುರಿಯಲ್ಲಿ 58639 ಲಕ್ಷ ರೂ. ಸಾಲ ವಿತರಣೆ ಮಾಡಲಾಗಿದ್ದು, ಶೇ.43ರಷ್ಟು ಪ್ರಗತಿ ಸಾಧಿಸಲಾಗಿದೆ.

ಇತರ ಆದ್ಯತಾ ವಲಯದಲ್ಲಿ ರೂ 1637.10 ಕೋಟಿ ಗುರಿಯಲ್ಲಿ ರೂ 712.96 ಕೋಟಿ ಸಾಲ ವಿತರಣೆ ಮಾಡಲಾಗಿದ್ದು, ಶೇ.44ರಷ್ಟು ಸಾಧನೆ. ಆದ್ಯತಾ ರಹಿತ ವಲಯದಲ್ಲಿ ರೂ 1812.28 ಕೋಟಿ ಗುರಿಯಲ್ಲಿ ರೂ 858.20 ಕೋಟಿ ಸಾಲ ವಿತರಣೆ ಮಾಡಲಾಗಿದ್ದು, ಶೇ.47ರಷ್ಟು ಸಾಧನೆಯಾಗಿದೆ.

ತಾಲ್ಲೂಕುವಾರು ಮಾಹಿತಿ
ಮಡಿಕೇರಿ ತಾಲ್ಲೂಕಿನಲ್ಲಿ ಕೃಷಿ, ಕೈಗಾರಿಕೆ ಹಾಗೂ ಇತರ ಆದ್ಯತಾ ವಲಯ ಸೇರಿದಂತೆ ರೂ 638.64 ಕೋಟಿ ಗುರಿಯಲ್ಲಿ ರೂ 345.46 ಕೋಟಿ ಸಾಲ ವಿತರಣೆ ಮಾಡಿ ಶೇ. 54ರಷ್ಟು ಪ್ರಗತಿ ಸಾಧಿಸಲಾಗಿದೆ.

ವಿರಾಜಪೇಟೆ ತಾಲ್ಲೂಕಿನಲ್ಲಿ ರೂ 709.12 ಕೋಟಿ ಗುರಿಯಲ್ಲಿ ಶೇ. 38ರಷ್ಟು ಸಾಧನೆ ಮಾಡ ಲಾಗಿದೆ.  ಹಾಗೆಯೇ ಸೋಮವಾರಪೇಟೆ ತಾಲ್ಲೂಕಿನಲ್ಲಿ ರೂ 464.52 ಕೋಟಿ ಗುರಿಯಲ್ಲಿ 242.41 ಕೋಟಿ ಸಾಲ ವಿತರಿಸಿ ಶೇ. 52ರಷ್ಟು ಸಾಧನೆ ಮಾಡಲಾಗಿದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.