ADVERTISEMENT

ಕೊನೆಯ ದಿನ: ಆರು ಉಮೇದುವಾರಿಕೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 7:12 IST
Last Updated 18 ಏಪ್ರಿಲ್ 2013, 7:12 IST

ಮಡಿಕೇರಿ: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಬುಧವಾರ ಇಲ್ಲಿನ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಒಟ್ಟು ಆರು ನಾಮಪತ್ರ ಸಲ್ಲಿಕೆಯಾಗಿವೆ.

ಐದು ಸ್ವತಂತ್ರ ಅಭ್ಯರ್ಥಿಗಳು ಮತ್ತು ಜೆಡಿಯು ಪಕ್ಷದಿಂದ ಒಬ್ಬ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ.  ಸ್ವತಂತ್ರ ಅಭ್ಯರ್ಥಿಗಳಾಗಿ ಎಂ.ಪಿ. ಹರೀಶ್ ಪೂವಯ್ಯ, ಡಿ.ಎಸ್. ಗುರುಪ್ರಸಾದ್, ಕೆ.ಪಿ.ರಶೀದ, ಡಾ.ಬಿ.ಸಿ.ನಂಜಪ್ಪ ಹಾಗೂ ಸಿ.ವಿ ನಾಗೇಶ್ ನಾಮಪತ್ರ ಸಲ್ಲಿಸಿದ್ದಾರೆ.

ಸಿ.ವಿ. ನಾಗೇಶ್, ಸ್ವತಂತ್ರ ಅಭ್ಯರ್ಥಿ (ಜೆಡಿಎಸ್ ಬಂಡಾಯ):  ಜಿಲ್ಲೆಯ ಜೆಡಿಎಸ್ ಮುಖಂಡರು ನನ್ನನ್ನು ಕಡೆ ಗಣಿಸಿದ ಹಿನ್ನೆಲೆಯಲ್ಲಿ ಪಕ್ಷದ ಮೂಲ ಕಾರ್ಯಕರ್ತರ ಬೆಂಬಲ ದಿಂದಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಜೆಡಿಎಸ್ ಬಂಡಾಯ ಅಭ್ಯರ್ಥಿ ಸಿ.ವಿ.ನಾಗೇಶ್ ತಿಳಿಸಿದರು.

ನಗರದ ಕೋಟೆ ಆವರಣದಲ್ಲಿರುವ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಬುಧವಾರ ನಾಮಪತ್ರ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತ ನಾಡಿದರು.

ನಾನು ರಾಜಕೀಯದಲ್ಲಿ ಬೆಳೆ ಯುತ್ತಿರುವುದನ್ನು ಹಿರಿಯ ಮುಖಂಡ ರಾದ ಜೀವಿಜಯ ಸಹಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪಕ್ಷದ ಮೂಲ ಕಾರ್ಯ ಕರ್ತರ ಬೆಂಬಲದಿಂದಾಗಿ ನಾಮಪತ್ರ ಸಲ್ಲಿಸಿದ್ದು, ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪತ್ನಿ ಚೇತನಾ, ಪಕ್ಷದ ಪ್ರಮುಖ ರಾದ ಯೋಗೇಶ್, ಹಿದಾಯತ್, ರಾಜು, ಮಂಜುನಾಥ್ ಮತ್ತಿತರರ ಬೆಂಬಲಿಗರು ಹಾಜರಿದ್ದರು.

ಬಷೀರ್, ಜೆಡಿಯು ಅಭ್ಯರ್ಥಿ: ಜಿಲ್ಲೆಯಲ್ಲಿ ಇದೆ ಮೊದಲ ಬಾರಿಗೆ ಜೆಡಿಯು ಪಕ್ಷದ ವತಿ ಯಿಂದ ಸ್ಪರ್ಧಿಸುತ್ತಿರುವ ನನಗೆ ಅಲ್ಪ ಸಂಖ್ಯಾತರ ಬೆಂಬಲದ ಜೊತೆಗೆ ಪಕ್ಷದ ಕಾರ್ಯಕರ್ತರ ಸಹಕಾರವಿದ್ದು, ಗೆಲ್ಲುವು ವಿಶ್ವಾಸವಿದೆ ಎಂದು ಜೆಡಿಯು ಅಭ್ಯರ್ಥಿ ಬಷೀರ್ ಹೇಳಿದರು.

ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಲ್ಲಿ ಬಂಡಾಯದ ಬಿಸಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮತದಾರರಿಗೆ ಆ ಪಕ್ಷಗಳ ಮೇಲೆ ನಂಬಿಕೆ ಇಲ್ಲವಾಗಿದ್ದು, ನನಗೆ ಹೆಚ್ಚಿನ ಮತ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ನನಗೆ ಬಿಜೆಪಿ ಎದುರಾಳಿ ಪಕ್ಷ ವಾಗಿದ್ದು, ಪಕ್ಷದ ಕಾರ್ಯಕರ್ತರ ಬೆಂಬಲದಿಂದಾಗಿ ಹೆಚ್ಚಿನ ಬಹುಮತ ಗಳಿಂದ ಜಯಗಳಿಸುತ್ತೇನೆ ಎಂದು ಹೇಳಿದರು.

ಪಕ್ಷದ ಜಿಲ್ಲಾಧ್ಯಕ್ಷ ಸುನೀಲ್ ಕುಮಾರ್, ಉಪಾಧ್ಯಕ್ಷ ಥಾಮಸ್ ಮತ್ತಿತರರು ಹಾಜರಿದ್ದರು.

ಡಿ.ಎಸ್.ಗುರುಪ್ರಸಾದ್, ಸ್ವತಂತ್ರ ಅಭ್ಯರ್ಥಿ:
ಜಿಲ್ಲೆಯ ಅಭಿವೃದ್ಧಿ ಮತ್ತು ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸಿದ್ದು, ಎಲ್ಲರೂ ನನ್ನನ್ನು ಬೆಂಬಲಿಸಬೇಕು ಎಂದು ಸ್ವತಂತ್ರ ಅಭ್ಯರ್ಥಿ ಡಿ.ಎಸ್. ಗುರು ಪ್ರಸಾದ್ ಕೋರಿದರು.

ಜನತೆಗೆ ಒಳ್ಳೆಯದನ್ನು ಮಾಡಲು ಮನಸ್ಸಿದೆ. ಈ ಹಿನ್ನೆಲೆಯಲ್ಲಿ ಚುನಾವಣೆಗೆ ನಿಂತಿದ್ದೇನೆ. `ಹಾಕಿ ಮತ್ತು ಬಾಲ್' ಚಿಹ್ನೆಗೆ ಮತ ನೀಡಬೇಕು ಎಂದು ವಿನಂತಿಸಿ ಕೊಂಡರು.

ಹರಿಶ್ ಪೂವಯ್ಯ, ಸ್ವತಂತ್ರ ಅಭ್ಯರ್ಥಿ: ಶಾಸಕರಾಗಿ ಏನೆಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡ ಬಹುದು ಎನ್ನುವುದನ್ನು ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶ ಕ್ಕಾಗಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಸ್ವತಂತ್ರ ಅಭ್ಯರ್ಥಿ ಹರಿಶ್ ಪೂವಯ್ಯ ತಿಳಿಸಿದರು.

ಪ್ರಸ್ತುತ ಸನ್ನಿವೇಶದಲ್ಲಿ ಜನರು ಲಂಚಕೊಟ್ಟು ತಮ್ಮ ಕೆಲಸವನ್ನು ಮಾಡಿಕೊಳ್ಳಬೇಕಾದ ಸ್ಥಿತಿ ಇದೆ. ಇದು ತಪ್ಪಬೇಕು. ಜನರ ತೆರಿಗೆ ಹಣದಿಂದಾಗಿ  ಸರ್ಕಾರ ನಡೆಯುತ್ತಿದ್ದು, ಲಂಚ ಕೊಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಡಾ.ಬಿ.ಸಿ.ನಂಜಪ್ಪ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.