ADVERTISEMENT

ನಗರದಲ್ಲೊಂದು ಸುಸಜ್ಜಿತ ಪಾಲಿಹೌಸ್‌

​ಪ್ರಜಾವಾಣಿ ವಾರ್ತೆ
Published 3 ಜುಲೈ 2017, 9:39 IST
Last Updated 3 ಜುಲೈ 2017, 9:39 IST
ಮಡಿಕೇರಿ ನಗರದಲ್ಲಿ ನಿರ್ಮಾಣಗೊಂಡಿರುವ ಪಾಲಿಹೌಸ್‌
ಮಡಿಕೇರಿ ನಗರದಲ್ಲಿ ನಿರ್ಮಾಣಗೊಂಡಿರುವ ಪಾಲಿಹೌಸ್‌   

ಮಡಿಕೇರಿ: ವಿದೇಶಿ ತಳಿಯ ತರಕಾರಿ, ವಿವಿಧ ಜಾತಿ ಹೂವುಗಳ ಸಂಶೋಧನೆ ಉದ್ದೇಶದಿಂದ ಮಂಜಿನ ನಗರಿ ಮಡಿಕೇರಿಯಲ್ಲಿ ಪಾಲಿಹೌಸ್‌ ನಿರ್ಮಿಸಲಾಗಿದೆ.
ಕೃಷಿ ಹಾಗೂ ತೋಟಗಾರಿಕೆ ಸಂಶೋಧನಾ ಕೇಂದ್ರವು ಸಂಶೋಧ ನೆಗೆ ಮುಂದಾಗಿದ್ದು, 1 ಹೈಟೆಕ್ ಪಾಲಿ ಹೌಸ್‌, 5 ಸಾಧಾರಣ ಪಾಲಿಹೌಸ್‌, 3 ಶೆಡ್‌ನೆಟ್ ಮನೆಗಳನ್ನು ₹ 10 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ರಾಜಾಸೀಟ್‌ ರಸ್ತೆಯ ಮೂಲಕ ಗಾಳಿಬೀಡು ಕಡೆಗೆ ಹೋಗುವ ಮಾರ್ಗದಲ್ಲಿ ಈ ಹೈಟೆಕ್ ಪಾಲಿಹೌಸ್‌ ನೋಡುಗರ ಗಮನ ಸೆಳೆಯುತ್ತಿದೆ. ಖಾಸಗಿ ಬಸ್‌ ನಿಲ್ದಾಣಕ್ಕೆ ಕೇಂದ್ರ ಸ್ವಲ್ಪಜಾಗವನ್ನು ಬಿಟ್ಟುಕೊಡಲಾಗಿದ್ದು, ಇರುವ ಪ್ರದೇಶದಲ್ಲೇ ಪಾಲಿಹೌಸ್‌ ನಿರ್ಮಾಣಗೊಂಡಿದೆ.  

ವಿದೇಶಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಹೊಂದಿರುವ ಪೋಷಕಾಂಶಯುಕ್ತ ತರಕಾರಿಗಳನ್ನು ಕೊಡಗು ಜಿಲ್ಲೆಯಲ್ಲಿ ಬೆಳೆಯಲು ಸಾಧ್ಯವೇ ಎಂಬುದರ ಬಗ್ಗೆ ಇಲ್ಲಿ ಸಂಶೋಧನೆ ನಡೆಸಲಾಗುತ್ತಿದೆ. 

ADVERTISEMENT

ಶಿವಮೊಗ್ಗದ ಕೃಷಿ ಮತ್ತು ತೋಟ ಗಾರಿಕೆ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಈ ಕೇಂದ್ರವು ವಿಭಿನ್ನ ಸಂಶೋಧನೆ ಕೈಗೊಂಡಿದೆ. ಜತೆಗೆ, ಬೆಳೆಗಾರರಿಗೆ ವೈಜ್ಞಾನಿಕ ಸಲಹೆ, ಸೂಚನೆ ಹಾಗೂ ತರಬೇತಿ ನೀಡಿ ಅರ್ಥಿಕ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ಏನೇನು ಇದೆ: ಪಾಲಿಹೌಸ್‌ನ ಒಳಭಾಗದಲ್ಲಿ ಪ್ಲಾಸ್ಟಿಕ್ ಹೊದಿಕೆಯಿಂದ ನಿರ್ಮಿಸಲಾಗಿರುವ ಸಂಗ್ರಹವಾಗುವ ಬಿಸಿಗಾಳಿಯನ್ನು ಹೊರಹಾಕಲು ವಿದ್ಯುತ್‌ ಪ್ಯಾನ್‌ ಅಳವಡಿಸಲಾಗಿದೆ. ಉಷ್ಣಾಂಶ ಹಿಡಿದಿಡಲು ತಾಂತ್ರಿಕ ವ್ಯವಸ್ಥೆ ಮಾಡಲಾಗಿದೆ. ಗಿಡಗಳಿಗೆ ಗಾಳಿ, ಬೆಳಕು ಬರುವಂತೆ ಸಾಧನ ಅಳವಡಿಸಲಾಗಿದೆ.

ಸರ್ಕಾರದಿಂದ ಸಹಾಯಧನ: ಕೊಡಗು ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಉತ್ತಮ ಅವಕಾಶವಿದೆ. ಹೀಗಾಗಿ. ರೈತರು ಪಾಲಿಹೌಸ್‌ ಕೃಷಿ ಪದ್ಧತಿ ಅನುಸರಿಸಬಹುದು. ಕೇಂದ್ರ ಸರ್ಕಾರದಿಂದ ಶೇ 50 ಸಬ್ಸಿಡಿ ಸಿಗಲಿದೆ. ಆಂಥೋರಿಯಂನಿಂದ ವಾರ್ಷಿಕ ₹ 2 ಲಕ್ಷದವರೆಗೂ ಸಂಪಾದನೆ ಮಾಡಬಹುದು’ ಎಂದು ಸಂಶೋಧನಾ ಕೇಂದ್ರದ ಸಹ ಪ್ರಾಧ್ಯಾಪಕಿ ಡಾ.ಹೀನಾ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.