ADVERTISEMENT

ಪಂಚವಾರ್ಷಿಕ ಯೋಜನೆ ತಯಾರಿಕೆ: ತಿತಿಮತಿ ಆಯ್ಕೆ

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 7:53 IST
Last Updated 20 ಡಿಸೆಂಬರ್ 2012, 7:53 IST

ಗೋಣಿಕೊಪ್ಪಲು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ 2005 ರ ಅಡಿಯಲ್ಲಿ ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ ಪ್ರಾಯೋಗಿಕ ಆಧಾರದ ಮೇಲೆ ಐದು ವರ್ಷಗಳ ಮುನ್ನೋಟ ಯೋಜನೆ ತಯಾರಿಕೆಗೆ ವಿರಾಜಪೇಟೆ ತಾಲ್ಲೂಕಿನ ತಿತಿಮತಿ ಗ್ರಾಮ ಪಂಚಾಯಿತಿ  ಆಯ್ಕೆಯಾಗಿದೆ.

ಈ ಯೋಜನೆಯಂತೆ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಎಲ್ಲ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಮಾಹಿತಿ ಇದರಲ್ಲಿ ಅಡಗಿರುತ್ತದೆ. ಜನತೆಗೆ ಆರೋಗ್ಯ, ಶಿಕ್ಷಣ, ಜೀವನಾಧಾರ ಮಾರ್ಗ ಮುಖ್ಯ.

ಇವುಗಳ ಆಧಾರದ ಮೇಲೆ ಮಾನವ ಅಭಿವೃದ್ಧಿ ಸೂಚಿ (ಇಂಡೆಕ್ಸ್) ಯೋಜನೆ ತಯಾರಿಸಲಾಗುತ್ತಿದೆ ಎಂದು ಯೋಜನೆ ತಯಾರಿಕೆ ಜವಾಬ್ದಾರಿ ಹೊತ್ತಿರುವ ಅಸ್ತ್ರ ಸಂಸ್ಥೆಯ  ಕಾರ್ಯನಿರ್ವಾಹಕ ನಿರ್ದೇಶಕ ಚಂದನ್ ಹೇಳಿದರು.

ತಿತಿಮತಿ ಗ್ರಾಮ ಪಂಚಾಯಿತಿ ಸಭೆಯಲ್ಲಿ ಈಚಿಗೆ ಮಾಹಿತಿ ನೀಡಿದ ಅವರು ಪ್ರತಿ ಗ್ರಾಮಗಳ ಜನತೆಯ ಮನೆ ಬಾಗಿಲಿಗೆ ಹೋಗಿ ಪರಿಶೀಲಿಸಿ ಅವರ ಅಗತ್ಯಗಳನ್ನು ಆಲಿಸಿ ಮಾಹಿತಿ ಸಂಗ್ರಹಿಸಲಾಗವುದು.

ಇದಕ್ಕಾಗಿ 800 ಪ್ರಶ್ನಾವಳಿಗಳನ್ನು ತಯಾರಿಸಲಾಗಿದೆ. ಎಲ್ಲ ಮಾಹಿತಿಗಳನ್ನು ಪಡೆದುಕೊಂಡ ಬಳಿಕ ಗ್ರಾಮ ಸಭೆ, ಗ್ರಾಮ ಪಂಚಾಯಿತಿ  ಹಾಗೂ  ಇತರ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದೊಂದಿಗೆ  ಚರ್ಚಿಸಿ ಯೋಜನೆಗೆ ಅಂತಿಮ ರೂಪ ನೀಡಲಾಗುವುದು ಎಂದು ಹೇಳಿದರು.

ಈ ಯೋಜನೆಗೆ ರಾಜ್ಯದಲ್ಲಿ 9 ಜಿಲ್ಲೆಗಳು ಆಯ್ಕೆಯಾಗಿವೆ. ದಕ್ಷಿಣ ಕನ್ನಡ, ಉತ್ತರ ಕನ್ನಡ,  ಚಕ್ಕಮಗಳೂರು, ಕೋಲಾರ, ಬೆಂಗಳೂರು ಗ್ರಾಮಾಂತರ, ಧಾರವಾಡ, ದಾವಣಗೆರೆ, ಬಾಗಲಕೋಟೆ ಜಿಲ್ಲೆಗಳಿಂದ ತಲಾ ಒಂದು ಗ್ರಾಮ ಪಂಚಾಯಿತಿ ಸೇರಿವೆ. ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶವಾದ್ದರಿಂದ  2 ಗ್ರಾಮ ಪಂಚಾಯಿತಿಗಳು ಇದಕ್ಕೆ ಒಳಪಟ್ಟಿವೆ.

ತಿತಿಮತಿಯೊಂದಿಗೆ ಸೋಮವಾರಪೇಟೆ ತಾಲ್ಲೂಕಿನ ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿಯನ್ನೂ ಆಯ್ಕೆಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.ಗ್ರಾಮಗಳ ಅಭಿವೃದ್ಧಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಪಂಚವಾರ್ಷಿಕ ಯೋಜನೆ ತಯಾರಿಸುತ್ತಿರುವುದು ಇದೇ ಮೊದಲು.

ಕೊಡಗು ಜಿಲ್ಲೆಯ ಎರಡು ಗ್ರಾಮ ಪಂಚಾಯಿತಿಯಿಗಳ ಯೋಜನೆ ಇಡೀ ರಾಜ್ಯಕ್ಕೆ ಮಾದರಿಯಾಗುವಂತೆ ರೂಪಿಸಲಾಗುವುದು ಎಂದು ತಿಳಿಸಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮದ್ ಆಲಿ, ಉಪಾಧ್ಯಕ್ಷೆ  ವಿ.ಎ.ರಾಶಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಪಂಕಜ, ಅಭಿವೃದ್ಧಿ ಅಧಿಕಾರಿ ಮನಮೋಹನ್, ಯೋಜನಾ ಸಂಚಾಲಕಿ ದೀಪಿಕಾ,  ಕಾರ್ಯನಿರ್ವಾಹಕ ಅಧಿಕಾರಿ ಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT