ADVERTISEMENT

‘ಭಾರತಕ್ಕೆ ನಾವು ಚಿರಋಣಿ’

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2017, 9:19 IST
Last Updated 20 ಡಿಸೆಂಬರ್ 2017, 9:19 IST
ಕುಶಾಲನಗರ ಸಮೀಪದ ಬೈಲುಕುಪ್ಪೆ ಟಿಬೆಟಿಯನ್ ನಿರಾಶ್ರಿತರ ಶಿಬಿರಕ್ಕೆ ಮಂಗಳವಾರ ಆಗಮಿಸಿದ ಬೌದ್ಧಧರ್ಮ ಗುರು ದಲೈಲಾಮ ಅವರಿಗೆ ಸ್ವಾಗತ ಕೋರಲಾಯಿತು
ಕುಶಾಲನಗರ ಸಮೀಪದ ಬೈಲುಕುಪ್ಪೆ ಟಿಬೆಟಿಯನ್ ನಿರಾಶ್ರಿತರ ಶಿಬಿರಕ್ಕೆ ಮಂಗಳವಾರ ಆಗಮಿಸಿದ ಬೌದ್ಧಧರ್ಮ ಗುರು ದಲೈಲಾಮ ಅವರಿಗೆ ಸ್ವಾಗತ ಕೋರಲಾಯಿತು   

ಕುಶಾಲನಗರ: ‘ನಿರಾಶ್ರಿತ ಟಿಬೆಟಿಯನ್ನರಿಗೆ ಆಶ್ರಯ ನೀಡಿರುವ ಭಾರತಕ್ಕೆ ನಾವು ಚಿರಋಣಿಯಾಗಿದ್ದೇವೆ’ ಎಂದು ಬೌದ್ಧಧರ್ಮ ಗುರು ದಲೈಲಾಮ ಹೇಳಿದರು. ಸಮೀಪದ ಬೈಲುಕುಪ್ಪೆ ಟಿಬೆಟಿಯನ್ನರ ನಿರಾಶ್ರಿತರ ಶಿಬಿರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘58 ವರ್ಷಗಳ ಹಿಂದೆ ಟಿಬೆಟ್ ತೊರೆದು ಭಾರತಕ್ಕೆ ಆಗಮಿಸಿದ ಸಾವಿರಾರು ನಿರಾಶ್ರಿತ ನಾಗರಿಕರಿಗೆ ಆಶ್ರಯ ನೀಡಿದ ಭಾರತ ಸರ್ಕಾರಕ್ಕೆ ನಾವು ಅಭಾರಿಯಾಗಿದ್ದೇವೆ. ಭಾರತದಲ್ಲಿ ಎಲ್ಲ ರೀತಿಯ ಸಹಕಾರ ಸಿಕ್ಕಿದೆ. ಟಿಬೆಟಿಯನ್ನರಿಗೆ ಜಾಗ ನೀಡಿ ಎಲ್ಲ ಸೌಲಭ್ಯಗಳನ್ನೂ ಒದಗಿಸುವ ಮೂಲಕ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟು ಮಾನವೀಯತೆ ತೋರಿದೆ’ ಎಂದು ತಿಳಿಸಿದರು.

ಅದ್ಧೂರಿ ಸ್ವಾಗತ: ಅದಕ್ಕೂ ಮೊದಲು ದಲೈಲಾಮ ಅವರಿಗೆ ಸಾಂಪ್ರದಾಯಿಕ ರೀತಿಯಲ್ಲಿ ಸ್ವಾಗತ ಕೋರಲಾಯಿತು. ಬೌದ್ಧ ಸನ್ಯಾಸಿಗಳು, ಶಾಲಾ ಮಕ್ಕಳು, ವಿದೇಶಿ ಪ್ರವಾಸಿಗರು, ಬೌದ್ಧ ಅನುಯಾಯಿಗಳು ವೇಷಭೂಷಣ ತೊಟ್ಟು ಸಾಲಾಗಿ ನಿಂತು ಬರಮಾಡಿಕೊಂಡರು.

ADVERTISEMENT

ಸೆರಾಲಚಿ ಮೊನಾಸ್ಟರಿಯ ಬೌದ್ಧಮಂದಿರಕ್ಕೆ ಲಾಮ ಬರುತ್ತಿದ್ದಂತೆ ಬೌದ್ಧಬಿಕ್ಕುಗಳು ಟಿಬೆಟಿಯನ್ ಸಾಂಪ್ರದಾಯಿಕ ವಾದ್ಯ ಮೊಳಗಿಸಿದರು. ಮಂದಿರ ಪ್ರವೇಶಿಸಿದ ದಲೈಲಾಮ, ಹಿರಿಯ ಟಿಟೆಟಿಯನ್ ನಾಗರಿಕರ ಬಳಿಗೆ ತೆರಳಿ ಗೌರವ ಸ್ವೀಕರಿಸಿದರು. ಬಳಿ ಬೌದ್ಧಬಿಕ್ಕುಗಳೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಹಳೆಯ ಟಿಬೆಟಿಯನ್ ವಸಾಹತು ಅಧಿಕಾರಿ ಜಿಲೆಕ್ ಜಂಗ್ನಿ, ಹೊಸ ಟಿಬೆಟಿಯನ್ ವಸಾಹತು ಅಧಿಕಾರಿ ಲಾಕ್ಪಾ ಟೆಸ್ರಿಂಗ್ ಹಾಜರಿದ್ದರು.

ಬಂದೋಬಸ್ತ್: ದಲೈಲಾಮ ಆಗಮನದ ಹಿನ್ನೆಲೆಯಲ್ಲಿ ಬೈಲುಕುಪ್ಪೆ ನಿರಾಶ್ರಿತರ ಶಿಬಿರಕ್ಕೆ ಬಿಗಿ ಪೊಲೀಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಚೇತ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಸನ್ಮಾನ: ಕುಶಾಲನಗರ ರೋಟರಿ ಸಂಸ್ಥೆ ಪದಾಧಿಕಾರಿಗಳು ದಲೈಲಾಮ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಸದಸ್ಯರಾದ ಎ.ಎ. ಚಂಗಪ್ಪ, ವಕೀಲ ಜವರೇಗೌಡ, ಎಚ್.ವಿ. ಶಿವಪ್ಪ, ಜೆ.ಪಿ. ಅರಸ್, ನವೀನ್, ರಾಜಗಜೇಂದ್ರ ಸ್ವಾಮೀಜಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.