ADVERTISEMENT

ಮತ್ಸ್ಯಾಭಿವೃದ್ಧಿ ಮಾರುಕಟ್ಟೆ ನಿರ್ಮಾಣಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2012, 10:40 IST
Last Updated 28 ಜನವರಿ 2012, 10:40 IST
ಮತ್ಸ್ಯಾಭಿವೃದ್ಧಿ ಮಾರುಕಟ್ಟೆ ನಿರ್ಮಾಣಕ್ಕೆ ಸಿದ್ಧತೆ
ಮತ್ಸ್ಯಾಭಿವೃದ್ಧಿ ಮಾರುಕಟ್ಟೆ ನಿರ್ಮಾಣಕ್ಕೆ ಸಿದ್ಧತೆ   

ವಿರಾಜಪೇಟೆ: ಇಲ್ಲಿಯ ಪಟ್ಟಣ ಪಂಚಾಯಿತಿಗೆ ಸೇರಿದ ಈಗಿನ ಹಸಿ ಮೀನು ಮಾರುಕಟ್ಟೆ ಸ್ಥಳದಲ್ಲಿಯೇ ರಾಷ್ಟ್ರೀಯ ಮತ್ಸ್ಯಾಭಿವೃದ್ಧಿ ಮಂಡಳಿಯಿಂದ ರೂ. 2 ಕೋಟಿ ವೆಚ್ಚದಲ್ಲಿ ಆಧುನಿಕ ಮತ್ಸ್ಯ ಮಾರುಕಟ್ಟೆ ನಿರ್ಮಾಣಕ್ಕೆ ಪೂರ್ವ ಸಿದ್ಧತೆ ನಡೆದಿದೆ.

ರಾಷ್ಟ್ರೀಯ ಮತ್ಸ್ಯಾಭಿವೃದ್ಧಿ ಮಂಡಳಿ ಈಗಾಗಲೇ ಪಟ್ಟಣ ಪಂಚಾಯಿತಿಯ ಹಳೆಯ ಮಾರುಕಟ್ಟೆ ಜಾಗವನ್ನು ಪರಿಶೀಲಿಸಿದೆ. ಮಾರುಕಟ್ಟೆಯ ಒತ್ತುವರಿಯಾಗಿರುವ ಖಾಲಿ ಜಾಗವನ್ನು ಸೇರಿಸಿ ಹೊಸ ಮಾರುಕಟ್ಟೆ ನಿರ್ಮಾಣ ನಡೆಯಲಿದೆ.

ವಿರಾಜಪೇಟೆಗೆ ಈಚೆಗೆ ಭೇಟಿ ನೀಡಿದ ಮಂಡಳಿಯ ಅಧಿಕಾರಿಗಳು ಪಂಚಾಯಿತಿ ಅಧ್ಯಕ್ಷ ವಿ.ಕೆ.ಸತೀಶ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಬಿ.ಕಟ್ಟಿಪೂಣಚ್ಚ, ಮುಖ್ಯಾಧಿಕಾರಿ ಎಚ್.ಆರ್.ರಮೇಶ್ ಹಾಗೂ ಸಹಾಯಕ ಎಂಜಿನಿಯರ್ ಎಂ.ಸಿ.ಪುಟ್ಟುಸ್ವಾಮಿ ಅವರೊಂದಿಗೆ ಮಾರುಕಟ್ಟೆ ನಿರ್ಮಾಣದ ಸಂಬಂಧದಲ್ಲಿ  ಮಾತುಕತೆ ನಡೆಸಿದರು.

ಮೀನು ಮಾರುಕಟ್ಟೆ ನಿರ್ಮಾಣವಾಗುವ ಜಾಗವನ್ನು ಸರ್ವೆ ಮಾಡಲಾಗಿದೆ. ಈಗಿರುವ ಖಾಲಿ ಜಾಗ ಮಾರುಕಟ್ಟೆ ಕಟ್ಟಡಕ್ಕೆ ಸೇರಿದರೆ ಎಲ್ಲ ಸೌಲಭ್ಯಗಳಿಂದ ಕೂಡಿದ ಬೃಹತ್ ಮೀನು ಮಾರುಕಟ್ಟೆ ಭವನ ನಿರ್ಮಿಸಬಹುದು. ಮಂಡಳಿಯ ಅಧಿಕಾರಿಗಳ ಪ್ರಕಾರ ಮಾರುಕಟ್ಟೆ ಶುಚಿತ್ವದೊಂದಿಗೆ ತಾಜಾ ಹೊಳೆ ಮೀನು, ಸಮುದ್ರದ ಮೀನು ಒಣಗಿದ ಮೀನು ಗ್ರಾಹಕರಿಗೆ ಒಂದೇ ಸೂರಿನಡಿಯಲ್ಲಿ ದೊರೆಯಲಿದೆ. ಗ್ರಾಹಕರಿಗೆ ಉತ್ತಮ ಹಾಗೂ ತಾಜಾ ಮೀನುಗಳನ್ನು ಪೂರೈಸುವುದೇ ಮಂಡಳಿಯ ಉದ್ದೇಶವಾಗಿದೆ.

ವಿರಾಜಪೇಟೆ ಪಟ್ಟಣ ಪಂಚಾಯಿತಿಗೆ ಸೇರಿದ ಹಸಿ ಮೀನು ಮಾರುಕಟ್ಟೆ ಕಿಷ್ಕಿಂದ ಜಾಗದಲ್ಲಿದೆ. ಜೊತೆಗೆ ಇದಕ್ಕೆ ಯಾವುದೇ ಸೌಲಭ್ಯಗಳಿಲ್ಲ. ಆಧುನಿಕ ಮತ್ಸ್ಯ ಮಾರುಕಟ್ಟೆ ನಿರ್ಮಾಣಕ್ಕೆ ಪಟ್ಟಣ ಪಂಚಾಯಿತಿ ಆಸಕ್ತಿ ತೋರಿದೆ. ಇದೊಂದು ತಾಲ್ಲೂಕು ಮಟ್ಟದ ಕೇಂದ್ರಕ್ಕೆ ದೊರೆತ ಸೌಲಭ್ಯವಾಗಿದೆ ಎಂದು ಅಧ್ಯಕ್ಷರಾದ ವಿ.ಕೆ.ಸತೀಶ್ ಕುಮಾರ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಮತ್ಸ್ಯ ಅಭಿವೃದ್ಧಿ ಮಂಡಳಿ, ಮತ್ಸ್ಯ ಮಾರುಕಟ್ಟೆಯ ನಕಾಶೆಯನ್ನು ಪಟ್ಟಣ ಪಂಚಾಯಿತಿಗೆ ಹಸ್ತಾಂತರಿಸಿದೆ. ನಕಾಶೆ ಪ್ರಕಾರ ಮಾರುಕಟ್ಟೆ ಕಟ್ಟಡ ನಿರ್ಮಾಣವಾಗಲಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.