ADVERTISEMENT

ಯಾರಿಗೆ ಒಲಿಯಲಿದೆ ಆಡಳಿತ ಚುಕ್ಕಾಣಿ?

ಮಡಿಕೇರಿ ನಗರಸಭೆ ಚುನಾವಣೆ; ಮತ ಎಣಿಕೆ ಇಂದು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 7:41 IST
Last Updated 24 ಡಿಸೆಂಬರ್ 2013, 7:41 IST

ಮಡಿಕೇರಿ: ನಗರಸಭೆಯ 23 ವಾರ್ಡ್‌ಗಳಿಗೆ ಸ್ಪರ್ಧಿಸಿರುವ 97 ಅಭ್ಯರ್ಥಿಗಳ ಹಣೆಬರಹವು ಮಂಗಳವಾರ ಪ್ರಕಟಗೊಳ್ಳಲಿದೆ. ಬಹುದಿನಗಳಿಂದ ಕಾತರ ಮೂಡಿಸಿದ್ದ ನಗರಸಭೆ ಆಡಳಿತ ಚುಕ್ಕಾಣಿಯು ಯಾರ ಪಾಲಾಗಲಿದೆ ಎನ್ನುವ ಉತ್ತರ ಕೂಡ ದೊರೆಯಲಿದೆ.

ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಶೇ 50ರಷ್ಟು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾತಿ ದೊರತ ನಂತರ ಇದೇ ಮೊದಲ ಬಾರಿಗೆ ಮಡಿಕೇರಿ ನಗರಸಭೆಗೆ ನಡೆದ ಚುನಾವಣೆಯಲ್ಲಿ ಪುರುಷರ ಸಂಖ್ಯೆಯಷ್ಟೇ ಮಹಿಳಾ ಅಭ್ಯರ್ಥಿಗಳು ಕೂಡ ಕಣದಲ್ಲಿದ್ದರು.

ಮತ ಎಣಿಕೆ ಕಾರ್ಯವು ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಆರಂಭಗೊಳ್ಳಲಿದೆ. ಜಿಲ್ಲಾಡಳಿತವು ಮತ ಎಣಿಕೆಗೆ ಸಕಲ ಸಿದ್ಧತೆ ಕೈಗೊಂಡಿದೆ.

ಬೆಳಿಗ್ಗೆ 7 ಗಂಟೆಗೆ ಎಲ್ಲಾ ಮತ ಎಣಿಕೆ ಸಿಬ್ಬಂದಿ ಮತ ಎಣಿಕೆ ಕೇಂದ್ರಕ್ಕೆ ತಲುಪಲಿದ್ದು, ಅಭ್ಯರ್ಥಿಗಳು ಹಾಗೂ ಮತ ಎಣಿಕೆ ಏಜೆಂಟರು ಎಣಿಕೆ ಕೇಂದ್ರಕ್ಕೆ ಆಗಮಿಸಲಿದ್ದಾರೆ. ಬೆಳಗ್ಗೆ 7.45ಕ್ಕೆ ಹಾಜರಿದ್ದವರ ಸಮ್ಮುಖದಲ್ಲಿ ಮತಯಂತ್ರಗಳನ್ನು ಇರಿಸಲಾಗಿರುವ ಸ್ಟ್ರಾಂಗ್‌ ರೂಮ್ ಬೀಗ ತೆಗೆದು ಎಣಿಕೆ ಟೇಬಲ್‌ಗಳಿಗೆ ರವಾನಿಸಲಾಗುತ್ತದೆ. ಬೆಳಗ್ಗೆ 8 ಗಂಟೆಗೆ ಸರಿಯಾಗಿ ಮತ ಎಣಿಕೆ ಆರಂಭವಾಗಲಿದೆ. ಮೊಬೈಲ್ ಪೋನ್‌ ಅನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಮತ ಎಣಿಕೆ ಸಿದ್ಧತೆ ಬಗ್ಗೆ ಉಪವಿಭಾಗಾಧಿಕಾರಿ ಅಭಿರಾಮ್ ಜಿ. ಶಂಕರ್ ಪರಿಶೀಲಿಸಿದರು. ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ವಿ. ರಾಜು, ಚುನಾವಣಾ ಶಿರಸ್ತೆದಾರ್ ಪ್ರವೀಣ್ ಕುಮಾರ್, ಅನಿಲ್ ಕುಮಾರ್, ವಿಜಯಕುಮಾರ್, ತಿರುಮಲೇಶ್, ಶ್ರೀಧರ್ ಮತ್ತಿತರರು ಮತ ಎಣಿಕೆ ಕೊಠಡಿಗಳ ಸಿದ್ಧತೆ ಬಗ್ಗೆ ಪರಿಶೀಲನೆ ಮಾಡಿದರು.

ನಗರದಲ್ಲಿ ನಿಷೇಧಾಜ್ಞೆ ಜಾರಿ
ಮಡಿಕೇರಿ ನಗರಸಭಾ ಚುನಾವಣೆಯ ಮತಗಳ ಎಣಿಕೆಯು ಮಂಗಳವಾರ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮಡಿಕೇರಿ ನಗರದಾದ್ಯಂತ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಆದೇಶವನ್ನು ಉಪವಿಭಾಗಾಧಿಕಾರಿ ಅಭಿರಾಮ್ ಜಿ. ಶಂಕರ್‌ ಹೊಡಿಸಿದ್ದಾರೆ.

ಬೆಳಿಗ್ಗೆ 7.00 ಗಂಟೆಯಿಂದ ರಾತ್ರಿ 10.00 ಗಂಟೆಯವರೆಗೆ ದಂಡ ಪ್ರಕ್ರಿಯಾ ಸಂಹಿತೆ 1973ರ ಸೆಕ್ಷನ್ 144ರನ್ವಯ ಪ್ರದತ್ತವಾದ ಅಧಿಕಾರದಂತೆ ಈ ಆದೇಶ ಹೊರಡಿಸಿದ್ದಾರೆ.  ನಗರದಲ್ಲಿ 5ಕ್ಕಿಂತ ಹೆಚ್ಚಿನ ಜನರು ಒಟ್ಟಿಗೆ ಸೇರಿ ಸಭೆ- ಸಮಾರಂಭ, ವಿಜಯೋತ್ಸವ ಮೆರವಣಿಗೆ, ಜಾಥಾ, ರೋಡ್ ಶೋ ನಡೆಸುವುದು, ಬಂದೂಕು ಕತ್ತಿ, ದೊಣ್ಣೆ, ಲಾಠಿ ಹಾಗೂ ಇತರೆ ಅಪಾಯಕಾರಿ ಆಯುಧಗಳನ್ನು ಸಾರ್ವಜನಿಕವಾಗಿ ಹಿಡಿದುಕೊಂಡು ಸಂಚರಿಸುವುದು, ಪ್ರಚೋದನಾಕಾರಿ ಭಾಷಣ ಮಾಡುವುದು, ಪಟಾಕಿ ಸಿಡಿಸುವುದು ಹಾಗೂ ಇತರೆ ಕಾರ್ಯಕ್ರಮಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ (ವಿವಾಹ ಮತ್ತು ಶವಸಂಸ್ಕಾರಗಳನ್ನು ಹೊರತುಪಡಿಸಿ).
ವಾಹನ ಪ್ರವೇಶವಿಲ್ಲ

ಬೆಳಗ್ಗೆ 7 ಗಂಟೆಯಿಂದ ಆರಂಭವಾಗುವ ಮತ ಎಣಿಕೆ ಕಾರ್ಯವು ಪೂರ್ಣಗೊಳ್ಳುವವರೆಗೆ ಕೋಟೆ ಆವರಣದೊಳಗೆ ಸರ್ಕಾರಿ ವಾಹನಗಳನ್ನು ಹೊರತುಪಡಿಸಿ ಉಳಿದ  ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ.

ನಾಲ್ಕು ಚಕ್ರದ ಖಾಸಗಿ ವಾಹನಗಳಿಗೆ ಕೆ.ಇ.ಬಿ. ಮುಂಭಾಗದ ರಸ್ತೆಯ ಹಳೇ ಪೊಲೀಸ್ ಪೆರೇಡ್ ಮೈದಾನದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ದ್ವಿಚಕ್ರ ವಾಹನಗಳನ್ನು ನಗರದ ಪೊಲೀಸ್ ಠಾಣೆ ಎದುರು ನಿಲುಗಡೆ ಮಾಡಬಹುದಾಗಿದೆ.  ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ವಿ.ರಾಜು ಅವರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT