ADVERTISEMENT

ರಂಗಭೂಮಿಯಿಂದ ಬದುಕಿನ ನೈಜ ಚಿತ್ರಣ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 5:50 IST
Last Updated 15 ಫೆಬ್ರುವರಿ 2012, 5:50 IST

ಗೋಣಿಕೊಪ್ಪಲು: ರಂಗಭೂಮಿ ಬದುಕಿನ ನೈಜ ಚಿತ್ರಣ ಕಟ್ಟಿಕೊಟ್ಟರೆ, ದೂರದರ್ಶನ ಮತ್ತು ಕಂಪ್ಯೂಟರ್ ನಕಲಿ ಚಿತ್ರ ಬಿಂಬಿಸುತ್ತವೆ ಎಂದು ರಂಗಭೂಮಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ  ಅಭಿಪ್ರಾಯಪಟ್ಟರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಯಂಗ್ ಕಲಾರಂಗದ ಸಹಯೋಗದಲ್ಲಿ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಸೋಮವಾರ ರಾತ್ರಿ ಆಯೋಜಸಿದ್ದ ಕೊಡವ ನಾಟಕ  ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಹರಿದಾಸ ಅಪ್ಪಚ್ಚಕವಿ ಅವರು ಕೊಡವ ರಂಗಭೂಮಿಗೆ ಹೊಸ ಚೈತನ್ಯ ನೀಡಿದವರು. ನಾಟಕ ರಚಿಸಿ,ನಟಿಸಿ ಕೊಡಗಿನಲ್ಲಿ ರಂಗಭೂಮಿ ಬೆಳೆಸಿದ ಕೀರ್ತಿಗೆ ಪಾತ್ರರಾದವರು ಎಂದು ಹೇಳಿದರು. ಕನ್ನಡದ ಮೇರು  ನಟ ಡಾ.ರಾಜಕುಮಾರ್ ಕೂಡ ರಂಗಭೂಮಿಯಿಂದ ಬಂದವರು. ಕನ್ನಡ ರಂಗಭೂಮಿ ಬೆಳೆಯುವ ಸಂದರ್ಭದಲ್ಲಿ ಕೊಡವ ರಂಗಭೂಮಿಯೂ ಬೆಳಕಿಗೆ  ಬಂದಿತು. ಕೊಡವ ರಂಗಭೂಮಿಗೆ ನೂರು ವರ್ಷದ ಇತಿಹಾಸವಿದೆ. ರಂಗಭೂಮಿಗೆ ಹೆಚ್ಚು ಕಲಿತವರ ಅಗತ್ಯವಿಲ್ಲ. ಬದಲಿಗೆ ಆಸಕ್ತರ ಅಗತ್ಯವಿದೆ ಎಂದರು.

ಕೊಡವ ಸಮಾಜದ ಅಧ್ಯಕ್ಷ ಚಪ್ಪುಡೀರ ಎಂ.ಪೊನ್ನಪ್ಪ ಮಾತನಾಡಿದರು. ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಐಮುಡಿಯಂಡ ರಾಣಿ ಮಾಚಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಡವ ಭಾಷೆಯ ಬೆಳವಣಿಗೆಗೆ ನಾಟಕ ಪ್ರಮುಖ ಪಾತ್ರ ವಹಿಸಿವೆ. ಭಾಷೆ ಮತ್ತು ಸಂಸ್ಕೃತಿ ಬೆಳವಣಿಗೆ ದೃಷ್ಟಿಯಿಂದ ಜಿಲ್ಲೆಯಾದ್ಯಂತ ನಾಟಕ ಕಲೆಗೆ ಹೆಚ್ಚು ಒತ್ತುನೀಡಲಾಗಿದೆ. ಶಾಲಾ ಕಾಲೇಜುಗಳಲ್ಲಿ ಅಪ್ಪಚ್ಚಕವಿ ನಾಟಕಗಳನ್ನು ಕಲಿಸಿಕೊಟ್ಟು ನಾಟಕ ಸಾಹಿತ್ಯದ ಬಗ್ಗೆ ಮಕ್ಕಳಲ್ಲಿ ಒಲುವು ಮೂಡುವಂತೆ ಮಾಡಬೇಕು ಎಂದು ತಿಳಿಸಿದರು.

ಹಿರಿಯ ಸಾಹಿತಿ ಕೇಚಮಾಡ ಸುಬ್ಬಮ್ಮ ಮಾತನಾಡಿದರು. ಯಂಗ್ ಕಲಾರಂಗದ ಅಧ್ಯಕ್ಷ ಮದ್ರೀರ ಪಿ.ಗಣಪತಿ ಹಾಜರಿದ್ದರು. ಪದಾಧಿಕಾರಿ ಚಮ್ಮಟ್ಟಿರ ಪ್ರವೀಣ್ ಸ್ವಾಗತಿಸಿದರು. ಅಕಾಡೆಮಿ ಸದಸ್ಯ ಪಡಿಂಜ್ಞರಂಡ ಪ್ರಭುಕುಮಾರ್ ವಂದಿಸಿದರು. ಹಿರಿಯ ರಂಗಕಲಾವಿದ ಶ್ರೀನಿವಾಸ್ ನಾಯ್ಡು ರಚಿಸಿ ನಿರ್ದೇಶಿಸಿದ `ನಾಡ್ ಮಣ್ಣ್~ (ನನ್ನಮಣ್ಣು) ಕೊಡವ ನಾಟಕ ಪ್ರದರ್ಶಿಸಲಾಯಿತು. ಇದಕ್ಕೂ ಮೊದಲು ವಿದ್ಯಾರ್ಥಿ ಪೃಥ್ವಿರಾಜ್ ಶ್ರೀನಿವಾಸ್  ನಾಯ್ಡು ಅವರಿಂದ ಪವಾಡ ರಹಸ್ಯ ಬಯಲು ಕಾರ್ಯಕ್ರಮ ಉತ್ತಮವಾಗಿ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.