ADVERTISEMENT

ಸತತ ಮಳೆ: ಮೆಣಸಿನಕಾಯಿ ಬೆಳೆಗೆ ಹಾನಿ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2012, 8:00 IST
Last Updated 27 ಏಪ್ರಿಲ್ 2012, 8:00 IST

ಶನಿವಾರಸಂತೆ: ಪಟ್ಟಣದಲ್ಲಿ ನಾಲ್ಕೈದು ದಿನಗಳಿಂದ ಸಂಜೆ ವೇಳೆ ಬಿಡದೇ ಮಳೆಯಾಗುತ್ತಿದೆ.
ಗುಡುಗು ಮಿಂಚು ಸಮೇತ ಧಾರಕಾರ ಮಳೆ ಸುರಿಯುತ್ತಿರುವುದು ಮಳೆಗಾಗಿ ಹಂಬಲಿಸುತ್ತಿದ್ದ ಕೆಲ ರೈತರಿಗೆ ಖುಷಿ ನೀಡಿದೆ.

ಬುಧವಾರ ಸಂಜೆ ಒಂದು ಇಂಚಿಗೂ ಅಧಿಕ ಮಳೆಯಾಗಿದೆ. ಗುರುವಾರವೂ ಸಂಜೆ 3.30ಕ್ಕೆ ಆರಂಭವಾದ ಮಳೆ ಒಂದು ಗಂಟೆ ಕಾಲ ರಭಸವಾಗಿ ಸುರಿಯಿತು.ಪ್ರತಿದಿನ ಬೆಳಿಗ್ಗಿನಿಂದ ಸಂಜೆಯವರೆಗೆ ಬಿಸಿಲಿನ ವಾತಾವರಣ. ನಂತರ ಮೋಡ ಕವಿದು ಮಳೆ ಸುರಿಯಲಾರಂಭಿಸುತ್ತದೆ. ಗುಡುಗು-ಸಿಡಿಲಿನ ಆರ್ಭಟವೂ ಜೋರಾಗಿದೆ.

ಸುರಿಯುತ್ತಿರುವ ಮಳೆ ಶನಿವಾರಸಂತೆ ಸುತ್ತಮುತ್ತಲಿನ ಕೆಲ ಗ್ರಾಮಗಳ ಬೆಳೆಗಾರರಿಗೆ ಖುಷಿ ನೀಡಿದರೆ ಮತ್ತೆ ಕೆಲವೆಡೆ ಬಿದ್ದ ಆಲಿಕಲ್ಲು ಮಳೆ ಬೆಳೆಗಳಿಗೆ ಹಾನಿಯುಂಟು ಮಾಡುತ್ತಿದೆ.  ಮೆಣಸಿನಕಾಯಿ ಬೆಳೆಗೆ ನೀರು ಅಧಿಕವಾಗಿ ಕೊಳೆರೋಗ ತಗುಲುವ ಭಯ ಆವರಿಸಿದೆ. ಈ ವರ್ಷ ಮೆಣಸಿನಕಾಯಿ ಬೆಳೆದವರ ಸಂಖ್ಯೆ ಕಡಿಮೆ. ಜೊತೆಗೆ ಬಿಡದೇ ಸುರಿದ ಮಳೆ ಹಾನಿಯುಂಟು ಮಾಡಿದೆ. ಪ್ರತಿವರ್ಷ ಗುಡುಗಳಲೆ ಜಾತ್ರಾ ಮೈದಾನದಲ್ಲಿ 3-4 ತಿಂಗಳು ನಡೆಯುತ್ತಿದ್ದ ಮೆಣಸಿನಕಾಯಿ ಸಂತೆಗೆ ಈ ವರ್ಷ ಧಕ್ಕೆಯಾಗುವ ಸಾಧ್ಯತೆಯಿದೆ.
ಶನಿವಾರಸಂತೆ ಪಟ್ಟಣದ ಸಂತೆಮಾರುಕಟ್ಟೆಯಲ್ಲಿ ಶುಕ್ರವಾರ ಮತ್ತು ಶನಿವಾರ ಬೆಳಿಗ್ಗೆ ಕೇವಲ ಒಂದು ಲೋಡಿನಷ್ಟು ಮಾತ್ರ ಜಿ4 ಮತ್ತು ಗುಂಟೂರು ಮೆಣಸಿನಕಾಯಿ ವ್ಯಾಪಾರ ನಡೆಯುತ್ತಿದೆ. ಕಾಫಿ ಬೆಳೆಗಾರರು ಸಮಯಕ್ಕೆ ಸರಿಯಾಗಿ ಮಳೆ ಬಾರದೇ ಹೋಗಿದ್ದರಿಂದ ಕಾಫಿ ಹೂ ಅರಳಿಲ್ಲ ಎಂದು   ಉತ್ತಮ ಫಸಲಿನ ಆಸೆಯನ್ನೆ ತೊರೆದಿದ್ದಾರೆ. ಕಾಫಿ ಬೆಳೆ ನೆಲಕಚ್ಚಿತು ಎಂಬ ನಿರಾಶೆಯ ಭಾವ ವ್ಯಕ್ತಪಡಿಸುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.