ADVERTISEMENT

ಸರ್ಕಾರಕ್ಕೆ 130.16 ಕೋಟಿ ಹೊಸ ಪ್ರಸ್ತಾವ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 9:50 IST
Last Updated 20 ಜನವರಿ 2011, 9:50 IST

ವಿಶೇಷ ವರದಿ
ಮಡಿಕೇರಿ:
ಕೊಡಗು ಜಿಲ್ಲೆಯಲ್ಲಿ ಆನೆ- ಮಾನವ ಸಂಘರ್ಷವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಶಾಶ್ವತ ಪರಿಹಾರೋಪಾಯ ಮಾರ್ಗಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಅರಣ್ಯ ಇಲಾಖೆ  130.16 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಕೋರಿ ರಾಜ್ಯ ಸರ್ಕಾರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಿದೆ.

ಅರಣ್ಯ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಚ್. ವಿಜಯಶಂಕರ್ ನಿರ್ದೇಶನದ ಮೇರೆಗೆ ಕೊಡಗು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಗಳು ಈ ಪ್ರಸ್ತಾವನೆಯನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದಾರೆ.

ಜಿಲ್ಲೆಯಲ್ಲಿ ಆನೆ ಹಾವಳಿಯಿರುವ ಪ್ರದೇಶಗಳಲ್ಲಿ ಆನೆ ಕಂದಕ ನಿರ್ಮಾಣ ಹಾಗೂ ನಿರ್ವಹಣೆ, ಸೋಲಾರ್ ಬೇಲಿ ಮತ್ತು ತಡೆಗೋಡೆ ನಿರ್ಮಾಣಕ್ಕಾಗಿ 1936.48 ಲಕ್ಷ ರೂಪಾಯಿ ಒದಗಿಸುವಂತೆ ಪ್ರಸ್ತಾವನೆಯಲ್ಲಿ ಕೋರಲಾಗಿದೆ. ಅಲ್ಲದೆ, ಅರಣ್ಯದಲ್ಲಿ ಕಾಡಾನೆಗಳಿಗೆ ಕುಡಿಯುವ ನೀರು ಒದಗಿಸುವುದಕ್ಕಾಗಿ ಕೆರೆಗಳ ನಿರ್ಮಾಣ ಹಾಗೂ ಹಾಲಿ ಕೆರೆಗಳಲ್ಲಿ ಹೂಳೆತ್ತುವುದಕ್ಕಾಗಿ 153.32 ಲಕ್ಷ ರೂಪಾಯಿ ನೆರವು ನೀಡುವಂತೆ ಕೋರಲಾಗಿದೆ.

ಇದಲ್ಲದೆ, ಅಕೇಶಿಯಾ, ತೇಗದಂತಹ ಮರಗಳನ್ನು ಹಂತ-ಹಂತವಾಗಿ ತೆಗೆದು ಕಾಡಾನೆಗಳಿಗೆ ಮೇವು ಒದಗಿಸುವಂತಹ ಮರ ಗಿಡಗಳನ್ನು ಬೆಳೆಸುವುದಕ್ಕಾಗಿ 10899.00 ಲಕ್ಷ ರೂಪಾಯಿಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಟ್ಟಾರೆ 130.16 ಕೋಟಿ ರೂಪಾಯಿ ನೆರವು ನೀಡುವಂತೆ ಕೋರಿ ಜ. 5ರಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

350 ಕೋಟಿ ಪ್ರಸ್ತಾವನೆ ನೆನೆಗುದಿಗೆ: ಈ ಮಧ್ಯೆ, ಬಿಜೆಪಿ ಸರ್ಕಾರ ಹೊಸದಾಗಿ ಅಸ್ತಿತ್ವಕ್ಕೆ ಬಂದ ಆರಂಭದಲ್ಲಿ ಜಿಲ್ಲೆಯ ಇಬ್ಬರು ಶಾಸಕರ ನೇತೃತ್ವದಲ್ಲಿ ನಗರದ ಅರಣ್ಯ ಭವನದಲ್ಲಿ ನಡೆದ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಈಗಾಗಲೇ 350 ಕೋಟಿ ರೂಪಾಯಿಗಳ ಪ್ರಸ್ತಾವನೆಯನ್ನು ಅರಣ್ಯ ಇಲಾಖೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದರೆ, ಇದುವರೆಗೆ ಒಂದೇ ಒಂದು ಬಿಡಿಗಾಸು ಬಿಡುಗಡೆಯಾಗಿಲ್ಲ.

ಈ ನಡುವೆ, ಡಿಸೆಂಬರ್ 3ರಂದು ಅರಣ್ಯ ಸಚಿವ ಸಿ.ಎಚ್. ವಿಜಯಶಂಕರ್ ಅಧ್ಯಕ್ಷತೆಯಲ್ಲಿ ನಡೆದ ಜಿ.ಪಂ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಆನೆ- ಮಾನವ ಸಂಘರ್ಷ ಕುರಿತು ಸುದೀರ್ಘ ಚರ್ಚೆ ನಡೆದು ಸಮಗ್ರ ಯೋಜನೆಯನ್ನು ರೂಪಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಲಾಗಿತ್ತು. ಅರಣ್ಯ ಸಚಿವರ ಸೂಚನೆ ಮೇರೆಗೆ ಇದೀಗ ಹೊಸ ಪ್ರಸ್ತಾವನೆಯನ್ನು ಅರಣ್ಯ ಇಲಾಖೆ ಸರ್ಕಾರಕ್ಕೆ ಸಲ್ಲಿಸಿದೆ.

ಅರಣ್ಯ ಸಚಿವರೇ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವುದರಿಂದ ಒಂದಷ್ಟು ಹಣ ಬಿಡುಗಡೆಯಾಗುವ ನಿರೀಕ್ಷೆಯಿದೆ. ಅಲ್ಲದೆ, ಎಷ್ಟು ಹಣ ಬೇಕಾದರೂ ಹಣ ಒದಗಿಸುವ ಜವಾಬ್ದಾರಿ ನನ್ನದು ಎಂದು ಸಚಿವರು ಕೂಡ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭರವಸೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಎರಡು ಪುಂಡಾನೆಗಳ ಸೆರೆಗೆ ಅನುಮತಿ

ಜಿಲ್ಲೆಯಲ್ಲಿ ಪುಂಡಾಟ ಪ್ರದರ್ಶಿಸುತ್ತಿದ್ದ ನಾಲ್ಕು ಪುಂಡಾನೆಗಳ ಪೈಕಿ ಎರಡು ಪುಂಡಾನೆಗಳ ಸೆರೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಪುಂಡಾನೆಗಳ ಉಪಟಳ ಹೆಚ್ಚಿರುವ ಪಾಲಿಬೆಟ್ಟ, ಅಮ್ಮತ್ತಿ, ಸಿದ್ದಾಪುರ ಪ್ರದೇಶದಲ್ಲಿ ಸೆರೆಗೆ ಅನುಮತಿ ಸಿಕ್ಕಿರುವ ಎರಡು ಪುಂಡಾನೆಗಳನ್ನು ಗುರುತಿಸಲು ಅರಣ್ಯ ಇಲಾಖೆ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್.ಆನಂದ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಕಳೆದ ಒಂದೂವರೆ- ಎರಡು ವರ್ಷಗಳಲ್ಲಿ ಈ ಪುಂಡಾನೆಗಳು ದುಬಾರೆಯ ಮೂರು ಇಲಾಖೆಯ ಆನೆಗಳನ್ನು ಕೂಡ ಕೊಂದು ಹಾಕಿವೆ. ಅಂತಹ ಪುಂಡಾನೆಗಳನ್ನು ಗುರುತಿಸಲು ಮಾವುತರಿಗೂ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಕಳೆದ ಕೆಲವು ತಿಂಗಳಿಂದ ಜಿಲ್ಲೆಯಲ್ಲಿ ಪುಂಡಾನೆಗಳ ಹಾವಳಿ ತಗ್ಗಿದೆ. ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ, ಕಾಜೂರು, ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಮತ್ತಿತರ ವ್ಯಾಪ್ತಿಯಲ್ಲಿ ಆನೆಗಳು ಪ್ರತ್ಯಕ್ಷವಾಗಿ ಬೆಳೆ ನಾಶ ಮಾಡುತ್ತಿದರೂ ಮಾನವ ಪ್ರಾಣ ಹಾನಿ ಸಂಭವಿಸಿಲ್ಲ. ಸದ್ಯಕ್ಕೆ ಹಾಸನ ಜಿಲ್ಲೆಗೆ ಆನೆಗಳು ಲಗ್ಗೆಯಿಟ್ಟಂತಿವೆ. ಅಲ್ಲಿನ ಪುಂಡಾನೆಗಳನ್ನು ಸೆರೆಹಿಡಿದ ನಂತರ ಕೊಡಗಿನಲ್ಲಿಯೂ ಎರಡು ಪುಂಡಾನೆಗಳನ್ನು ಸೆರೆಹಿಡಿಯವುದಕ್ಕೆ ಕಾರ್ಯಾಚರಣೆ ಪ್ರಾರಂಭಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.