ಮಡಿಕೇರಿ: ಕೊಡಗು ಜಿಲ್ಲೆಯ ಕಾಫಿ ಕೃಷಿಯನ್ನು ನಿರ್ಬಂಧಿಸುವಂತೆ ಶಿಫಾರಸು ಮಾಡಿರುವ ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನಗೊಳಿಸದಂತೆ ತಡೆಗಟ್ಟಲು ರಾಜ್ಯದ ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಜಿಲ್ಲೆಯ ಮತದಾರರು ಏಪ್ರಿಲ್ 17ರಂದು ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಬಿಜೆಪಿ ಮುಖಂಡ ಅಡ್ಡಂಡ ಕಾರ್ಯಪ್ಪ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿಯನ್ನು ಕೇರಳದಲ್ಲಿ ಅನುಷ್ಠಾನಗೊಳಿಸದಂತೆ ಅಲ್ಲಿನ ಕಾಂಗ್ರೆಸ್ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಿ, ಯಶಸ್ವಿಯೂ ಆಗಿದೆ. ಆದರೆ, ನಮ್ಮ ರಾಜ್ಯದ ಕಾಂಗ್ರೆಸ್ ಸರ್ಕಾರ, ಸಂಸದ ವಿಶ್ವನಾಥ್ ಹಾಗೂ ರಾಜ್ಯದವರೇ ಆದ ಕೇಂದ್ರ ಪರಿಸರ ಖಾತೆ ಸಚಿವ ವೀರಪ್ಪ ಮೊಯಿಲಿ ಇದರಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದರು.
ಕರ್ನಾಟಕ ಸೇರಿದಂತೆ ಆರು ರಾಜ್ಯಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟ ಪ್ರದೇಶ ಸಂರಕ್ಷಿಸಲು ಕಸ್ತೂರಿ ರಂಗನ್ ಸಮಿತಿಯು ಕೆಲವೊಂದು ಶಿಫಾರಸು ಮಾಡಿತ್ತು. ಸೂಕ್ಷ್ಮ ಪರಿಸರ ವಲಯದಲ್ಲಿ ರಾಸಾಯನಿಕ ಬಳಸಬಾರದು, ಏಕಪದ್ಧತಿ ಕೃಷಿ ಮಾಡಬಾರದು ಎಂದು ಶಿಫಾರಸು ಮಾಡಿತ್ತು. ಇದರಿಂದಾಗಿ ಜಿಲ್ಲೆಯ ಕಾಫಿ, ಏಲಕ್ಕಿ, ಕರಿಮೆಣಸು ಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಇದನ್ನು ತಡೆಯಬೇಕೆಂದು ಜಿಲ್ಲೆಯ ಜನತೆ ಸಂಸದ ವಿಶ್ವನಾಥ್, ಪರಿಸರ ಸಚಿವ ಮೊಯಿಲಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಡಿಕೊಂಡ ಮನವಿ ವ್ಯರ್ಥವಾಗಿದೆ ಎಂದು ಹೇಳಿದರು.
ಕೇರಳದ ಮುಖ್ಯಮಂತ್ರಿ ಓಮನ್ ಚಾಂಡಿ ಅವರು ತಮ್ಮ ರಾಜ್ಯದಲ್ಲಿ ವರದಿಯನ್ನು ಜಾರಿಗೊಳಿಸಬಾರದೆಂದು ಕೇಂದ್ರದ ಮೇಲೆ ಒತ್ತಡ ಹೇರಿದ್ದರ ಪರಿಣಾಮ, ಕೇರಳವನ್ನು ಕೈಬಿಡಲಾಗಿದೆ. ಚುನಾವಣೆಯ ಹಿನ್ನೆಲೆಯಲ್ಲಿಯೇ ಮತ ಬ್ಯಾಂಕ್ ರಾಜಕಾರಣ ಮಾಡಲು ಕೇಂದ್ರ ಸರ್ಕಾರ ಕೇರಳಕ್ಕೆ ವಿನಾಯಿತಿ ನೀಡಿದೆ ಎಂದು ಆರೋಪಿಸಿದರು.
ಹಿಂದೊಮ್ಮೆ ಕಸ್ತೂರಿ ರಂಗನ್ ವರದಿ ಜಾರಿಯನ್ನು ವಿರೋಧಿಸಿ ಕೊಡಗು ಜಿಲ್ಲಾ ಬಂದ್‌ಗೆ ಕರೆ ನೀಡಲಾಗಿತ್ತು. ಆ ಸಂದರ್ಭದಲ್ಲಿ ಸಂಸದ ಎಚ್. ವಿಶ್ವನಾಥ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಅದರಂತೆ ಬಂದ್ ಕರೆಯನ್ನು ವಾಪಸ್ ಪಡೆಯಲಾಗಿತ್ತು. ಈಗ ಸರ್ಕಾರ ತಾನು ಹೇಳಿದಂತೆ ನಡೆದುಕೊಳ್ಳದಿರುವುದರಿಂದ ಬಂದ್ ಕರೆಯನ್ನು ಪುನರ್ ಪರಿಶೀಲಿಸಬೇಕಾಗಿದೆ ಎಂದು ಹೇಳಿದರು.
ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯುಕ್ತರ ಅನುಮತಿ ಪಡೆದುಕೊಂಡು ಜಿಲ್ಲಾ ಬಂದ್‌ಗೆ ಕರೆ ನೀಡಲಾಗುವುದು ಎಂದು ಅವರು ತಿಳಿಸಿದರು. ಬಿಜೆಪಿ ಜಿಲ್ಲಾ ವಕ್ತಾರ ಸುಬ್ರಮಣಿ ಉಪಾಧ್ಯಾಯ, ಪ್ರಧಾನ ಕಾರ್ಯದರ್ಶಿ ರವಿ ಬಸಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.