ಸಿದ್ದಾಪುರ: ಸಿದ್ದಾಪುರ ಭಾಗದಲ್ಲಿ ಅದ್ಧೂರಿಯ ಕ್ರಿಸ್‌ಮಸ್ ಆಚರಣೆಗೆ ತಯಾರಿ ನಡೆದಿದ್ದು, ವಿವಿಧ ಚರ್ಚ್‌ಗಳಲ್ಲಿ ವಿಶೇಷ ಪೂಜೆ, ಮಂಟಪಗಳನ್ನು ನಿರ್ಮಿಸಲಾಗಿದೆ.
167 ವರ್ಷಗಳ ಇತಿಹಾಸ ಹೊಂದಿರುವ ಆನಂದಪುರದ ಕಾಂತಿ ಚರ್ಚ್ ಸಂಭ್ರಮದ ಕ್ರಿಸ್‌ಮಸ್ ಆಚರಣೆಗೆ ಸಿದ್ಧವಾಗಿದೆ. ‘ಮಂಗಳೂರು ಸಮಾಚಾರ ಪತ್ರಿಕೆ’ಯನ್ನು ಹೊರತಂದ ಬಳಿಕ ಹರ್ಮನ್ ಮೋಂಗ್ಲಿಂಗ್ ಅವರು 1857ರಲ್ಲಿ ಈ ಚರ್ಚ್ ಅನ್ನು ಇಲ್ಲಿ ಸ್ಥಾಪಿಸಿದರು. ಬಳಿಕ, ರೆವರೆಂಡ್ ಕಿಟ್ಟೆಲ್ ಅವರು ಕೂಡ ಸುಮಾರು 3 ವರ್ಷ ಇಲ್ಲೇ ಇದ್ದು, ಕನ್ನಡದ ಕೆಲಸ ಮಾಡಿದರು.
ಪುರಾತನವಾದ ಚರ್ಚ್ ಈಗ ನವೀಕರಣಗೊಂಡಿದ್ದು, ಪ್ರತಿ ಕ್ರಿಸ್‌ಮಸ್‌ನಲ್ಲೂ ವಿಶೇಷ ಆಚರಣೆಗಳು, ಪೂಜೆಗಳು ನಡೆಯುತ್ತಿವೆ. ಕ್ರಿಸ್‌ಮಸ್ ದಿನದಂದು ಚರ್ಚ್‌ನಲ್ಲಿ ವಿಶೇಷ ಆರಾಧನೆ ನಡೆಯಲಿದ್ದು, ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ವಿವಿಧ ಕ್ರೀಡಾಕೂಟಗಳನ್ನು ಏರ್ಪಡಿಸಿ, ಬಹುಮಾನ ವಿತರಿಸಲಾಗುತ್ತಿದೆ.
ಸಿದ್ದಾಪುರದ ಸಂತ ಜೋಸೆಫರ ಚರ್ಚ್‌ನಲ್ಲೂ ಕ್ರಿಸ್ಮಸ್ ಸಂಭ್ರಮ ಮನೆ ಮಾಡಿದ್ದು, ಚರ್ಚ್‌ನಲ್ಲಿ ನಿರ್ಮಿಸಲಾದ ಗೋದಲಿ ನೋಡುಗರನ್ನು ಆಕರ್ಷಿಸುತ್ತಿದೆ. ಚರ್ಚ್‌ನ ಸುತ್ತಲೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ಮುಂಭಾಗದಲ್ಲಿ ಕ್ರಿಸ್‌ಮಸ್ ಗೋದಲಿ ನಿರ್ಮಿಸಲಾಗಿದೆ. ಏಸುಕ್ರಿಸ್ತರು ಜನಿಸಿದ ಪಟ್ಟಣ, ಮನೆ, ಗ್ರಾಮಗಳ ಮಾದರಿಗಳನ್ನು ನಿರ್ಮಿಸಿದ್ದು, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಚರ್ಚ್‌ನ ಧರ್ಮಗುರುಗಳಾದ ಫಾದರ್ ಮೈಕಲ್ ಮರಿ ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆಯಲಿದೆ.
ಸಿದ್ದಾಪುರದ ಸಂತ ಮೇರಿಸ್ ಚರ್ಚ್‌ನಲ್ಲೂ ಕ್ರಿಸ್ಮಸ್ ಸಂಭ್ರಮ ಆಚರಿಸಲಾಗುತ್ತಿದ್ದು, ವಿದ್ಯುತ್ ಅಲಂಕೃತಗೊಂಡ ಚರ್ಚ್ ಗಮನ ಸೆಳೆಯುತ್ತಿದೆ. ಫಾದರ್ ಜೋಜಿ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಚರ್ಚ್‌ನಲ್ಲಿ ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.