ADVERTISEMENT

17ರಂದು ಪ್ರಥಮ ಹಂತದ ಪಲ್ಸ್ ಪೋಲಿಯೊ

ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆಯನ್ನು ಕಡ್ಡಾಯವಾಗಿ ಹಾಕಬೇಕು: ಚಾರುಲತಾ

​ಪ್ರಜಾವಾಣಿ ವಾರ್ತೆ
Published 14 ಜನವರಿ 2016, 10:13 IST
Last Updated 14 ಜನವರಿ 2016, 10:13 IST
17ರಂದು ಪ್ರಥಮ ಹಂತದ ಪಲ್ಸ್ ಪೋಲಿಯೊ
17ರಂದು ಪ್ರಥಮ ಹಂತದ ಪಲ್ಸ್ ಪೋಲಿಯೊ   

ಮಡಿಕೇರಿ: ಜ. 17ರಂದು ಪ್ರಥಮ ಹಂತದ ಪಲ್ಸ್ ಪೋಲಿಯೊ ನಡೆಯಲಿದ್ದು, ಜಿಲ್ಲೆಯಲ್ಲಿ ಶೇಕಡಾವಾರು ಯಶಸ್ಸಿಗೆ ಎಲ್ಲಾ ಇಲಾಖೆ ಅಧಿಕಾರಿಗಳು, ಸಂಘ ಸಂಸ್ಥೆಗಳು ಕೈಜೋಡಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚಾರುಲತಾ ಸೋಮಲ್ ಕೋರಿದರು.         
   
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮ ಸಿದ್ಧತೆ ಬಗ್ಗೆ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು.      

ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೊ ಹನಿಯನ್ನು ಕಡ್ಡಾಯವಾಗಿ ಹಾಕಬೇಕು. ಕೊಡಗು ಜಿಲ್ಲೆಯಿಂದ ಹೊರ ಹೋಗುವ ಹಾಗೂ ಬರುವ ವಲಸೆ ಮಕ್ಕಳಿಗೆ ಪೋಲಿಯೊ ಹನಿ ಹಾಕಬೇಕು. ಜಿಲ್ಲೆಯ ಜನ ದಟ್ಟಣೆ ಇರುವ ಪ್ರದೇಶಗಳಲ್ಲಿ ತಂಡ ರಚಿಸಿ ಹನಿ ಹಾಕುವಂತೆ ಸಲಹೆ ಮಾಡಿದರು. 

ಜಿಲ್ಲೆಯಲ್ಲಿ ಅಲ್ಲಲ್ಲಿ ಮನೆಗಳು ಇರುವುದರಿಂದ ಮತ್ತು ಕುಗ್ರಾಮಗಳಿಗೆ ಪಲ್ಸ್ ಪೋಲಿಯೊ ಪೂರೈಕೆ ಮಾಡಲು ಅಗತ್ಯ ವಾಹನಗಳನ್ನು ಒದಗಿಸಬೇಕು. ಜೊತೆಗೆ ಲಸಿಕೆ ಹಾಳಾಗದಂತೆ ಮುಂಜಾಗ್ರತೆ ವಹಿಸುವ ನಿಟ್ಟಿನಲ್ಲಿ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿ ಗಳಿಗೆ ಸೂಚನೆ ನೀಡಿದರು.

ಜಿಲ್ಲೆಯ ವಿವಿಧ ಹಾಡಿಗಳು, ಲೈನ್‌ಮನೆಗಳು ಹಾಗೂ ಜನದಟ್ಟಣೆ ಪ್ರದೇಶಗಳಿಗೆ ತೆರಳಿ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆ ಹಾಕಬೇಕು ಎಂದು ಮೀರ್ ಅನೀಸ್ ಅಹಮ್ಮದ್ ಸಲಹೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರ್‌ಸಿಎಚ್ ಅಧಿಕಾರಿ ಡಾ. ಪಾರ್ವತಿ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 5,63,302 ಜನಸಂಖ್ಯೆ ಇದ್ದು, ಇವರಲ್ಲಿ 53,525 ಮಂದಿ ನಗರ/ಪಟ್ಟಣ ಪ್ರದೇಶದಲ್ಲಿ ಮತ್ತು 5,09,777 ಗ್ರಾಮೀಣ ಪ್ರದೇಶದಲ್ಲಿ ಜನಸಂಖ್ಯೆ ಇದ್ದಾರೆ. ಇವರಲ್ಲಿ 5 ವರ್ಷದೊಳಗಿನ 52,486 ಮಕ್ಕಳು ಜಿಲ್ಲೆಯಲ್ಲಿದ್ದಾರೆ ಎಂದರು.

ಜಿಲ್ಲೆಯಲ್ಲಿ  5,520 ನಗರ ಮತ್ತು 46,966 ಗ್ರಾಮೀಣ ಪ್ರದೇಶದ ಮಕ್ಕಳಿದ್ದಾರೆ. ಹಾಗೆಯೇ 17,309 ವಲಸಿಗ ಜನಸಂಖ್ಯೆ ಇದ್ದು, ಇವರಲ್ಲಿ 4,909 ಐದು ವರ್ಷದೊಳಗಿನ ಮಕ್ಕಳು ಇದ್ದಾರೆ, ಒಟ್ಟಾರೆ ಜಿಲ್ಲೆಯಲ್ಲಿ 1,33,651 ಕುಟುಂಬಗಳಿವೆ ಎಂದು ಅವರು ಮಾಹಿತಿ ನೀಡಿದರು.  

ಪ್ರಥಮ ಹಂತದ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಜಿಲ್ಲೆಯಾದ್ಯಂತ ಒಟ್ಟು 462 ಬೂತ್‌ಗಳನ್ನು ತೆರೆಯಲಾಗಿದೆ. ಅಲ್ಲದೆ 20 ಟ್ರಾನ್ಸಿಸ್ಟ್ ತಂಡಗಳು, 6 ಸಂಚಾರಿ ಲಸಿಕಾ ತಂಡಗಳು, 1902 ಮಂದಿ ಲಸಿಕೆ ಹಾಕುವವರು, 90 ಮಂದಿ ಮೇಲ್ವಿಚಾರಕರು, 924 ಮನೆ ಮನೆಗೆ ಭೇಟಿ ನೀಡುವ ತಂಡವನ್ನು ರಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಭಾಗಮಂಡಲ, ಚೇರಂಬಾಣೆ, ಸಂಪಾಜೆ, ಮಡಿಕೇರಿ ನಗರದ ಖಾಸಗಿ ಬಸ್ ನಿಲ್ದಾಣ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತ, ರಾಜಾಸೀಟು, ಸೋಮವಾರಪೇಟೆ ತಾಲ್ಲೂಕಿನ ಖಾಸಗಿ ಬಸ್ ನಿಲ್ದಾಣ, ಕುಶಾಲನಗರದ ಖಾಸಗಿ ಬಸ್ ನಿಲ್ದಾಣ, ಕೆ.ಎಸ್.ಆರ್.ಟಿ. ಬಸ್ ನಿಲ್ದಾಣ, ನಿಸರ್ಗಧಾಮ, ಕೊಡ್ಲಿಪೇಟೆ ಬಸ್ ನಿಲ್ದಾಣ, ಶನಿವಾರಸಂತೆ ಬಸ್ ನಿಲ್ದಾಣಗಳಲ್ಲಿ ಟ್ರಾನ್ಸಿಸ್ಟ್ ತಂಡವನ್ನು ನಿಯೋಜಿಸಲಾಗುತ್ತದೆ ಎಂದರು.

ಹಾಗೆಯೇ ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪ ಬಸ್ ನಿಲ್ದಾಣ, ಮಾಕುಟ್ಟ, ಕುಟ್ಟ ಗೇಟ್, ತಿತಿಮತಿ ಆನೆ ಚೌಕೂರು ಗೇಟ್, ಮಾಲ್ದಾರೆ ಗೇಟ್, ಅಮ್ಮತ್ತಿ ಬಸ್ ನಿಲ್ದಾಣ, ಸಿದ್ದಾಪುರ ಬಸ್ ನಿಲ್ದಾಣಗಳಲ್ಲಿ ಟ್ರಾನ್ಸಿಸ್ಟ್ ತಂಡವನ್ನು ನಿಯೋಜಿಸ ಲಾಗುತ್ತದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಡಾ. ಪುಟ್ಟರಾಜು, ಜಿಲ್ಲಾ ಸರ್ಜನ್ ಡಾ. ಕೆ.ಬಿ. ಮುತ್ತಪ್ಪ, ಡಾ. ದೇವಿ ಆನಂದ್, ಆಯುಷ್ ಅಧಿಕಾರಿ ಹರೀಶ್ ಬಾಬು ಮತ್ತಿತರರು ಪಲ್ಸ್ ಪೊಲಿಯೋ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.