ADVERTISEMENT

ವನ್ಯಜೀವಿ ಸಂಘರ್ಷ: ಶೀಘ್ರ ಪ್ರಸ್ತಾವನೆ

ಮಡಿಕೇರಿ ವಿಭಾಗದ ಉಪಸಂರಕ್ಷಣಾಧಿಕಾರಿ ಭಾಸ್ಕರ್

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 16:16 IST
Last Updated 19 ಜುಲೈ 2024, 16:16 IST

ಸುಂಟಿಕೊಪ್ಪ: ಆನೆ -ಮಾನವ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಲು ತಾತ್ಕಾಲಿಕ ಮತ್ತು ಶಾಶ್ವತ ಪರಿಹಾರಗಳ ಕುರಿತು ಶೀಘ್ರದಲ್ಲೇ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಹಿರಿಯ ಅಧಿಕಾರಿಗಳಿಗೆ ಶೀಘ್ರ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಅರಣ್ಯ ಇಲಾಖೆಯ ಮಡಿಕೇರಿ ವಿಭಾಗದ ಉಪಸಂರಕ್ಷಣಾಧಿಕಾರಿ ಭಾಸ್ಕರ್ ಹೇಳಿದರು.

ಕೆದಕಲ್‌ನಲ್ಲಿ ಗುರುವಾರ ನಡೆದ ಕಾಫಿ ಬೆಳೆಗಾರರ ಮತ್ತು ಅರಣ್ಯ ಇಲಾಖಾಧಿಕಾರಿಗಳ ಸಭೆಯಲ್ಲಿ ಅವರು ಮಾಹಿತಿ ನೀಡಿದರು. ಕಾಡಾನೆ ಓಡಿಸುವ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿಗೆ ಮತ್ತು ಸಾರ್ವಜನಿಕರಿಗೆ ತುರ್ತು ಅಂಬ್ಯುಲೆನ್ಸ್ ವಾಹನ ಒದಗಿಸುವ ಬಗ್ಗೆ ಘೋಷಣೆ, ಒಂದೂವರೆ ವರ್ಷದ ಹಿಂದೆ ನಡೆದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳ ಮರುಪರಿಶೀಲನೆ ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ಕರೆಯುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಈಗಾಗಲೇ ಆನೆ ಓಡಿಸುವ ಕಾರ್ಯಚರಣೆ ಚಾಲ್ತಿಯಲ್ಲಿದ್ದು,  ಮಾನವ ಜೀವಹಾನಿ ಆಗಬಾರದೆಂಬುದು  ಕಾಡಾನೆ ಓಡಿಸುವ ಕಾರ್ಯಾಚರಣೆ ಬಗ್ಗೆ ಆರ್‌ಆರ್‌ಟಿಗೆ  ಜವಾಬ್ದಾರಿಯನ್ನು ನೀಡಿರುವುದಾಗಿ ಘೋಷಿದರು. ಆನೆಗಳ ಬರುವಿಕೆಯನ್ನು ತಡೆಗಟ್ಟುವ ಕೆಲಸಕ್ಕೆ ಹೆಚ್ಚು ಒತ್ತುಕೊಡಬೇಕಾಗಿದೆ. ವಿರಾಜಪೇಟೆ ಮತ್ತು ಮಡಿಕೇರಿ ವಿಭಾಗದಲ್ಲಿ ಕ್ರಮವಾಗಿ 130 ಮತ್ತು 65 ಆನೆಗಳು ಪತ್ತೆಯಾಗಿದ್ದು, ಇದರಲ್ಲಿ ವಿರಾಜಪೇಟೆ ವ್ಯಾಪ್ತಿಯಲ್ಲಿ ಕೇವಲ 5 ಆನೆಗಳು ಅರಣ್ಯದಲ್ಲಿದ್ದರೆ, 125 ಆನೆಗಳು ತೋಟಗಳಲ್ಲಿ ಬೀಡುಬಿಟ್ಟಿವೆ. ಅದೇ ರೀತಿ ಮಡಿಕೇರಿ ವಿಭಾಗದಲ್ಲಿ 25 ಆನೆಗಳು ಕಾಡಿನಲ್ಲಿದ್ದರೆ, ಉಳಿದ ಆನೆಗಳು ತೋಟಗಳಲ್ಲಿ ಸಂಚರಿಸುತ್ತಿವೆ ಎಂದರು.

ಕಾಡಾನೆಗಳು ಸೆರೆಹಿಡಿಯುವ ಬಗ್ಗೆ ವಿರೋಧ ಮತ್ತು ಅವುಗಳನ್ನು ಪಳಗಿಸುವಾಗ ನೀಡುವ ಹಿಂಸೆಯನ್ನು ತಪ್ಪಿಸುವ ನಿಟ್ಟಿನಲ್ಲಿ ನಿರ್ದೇಶನಗಳನ್ನು ನೀಡಬೇಕೆಂದು ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆಯಲ್ಲಿರುವ ವಿಷಯವನ್ನು  ಭಾಸ್ಕರ್  ಹೇಳಿದರು.

ಸಭೆಯಲ್ಲಿ ಕೊಡಗರಹಳ್ಳಿ, ಕಂಬಿಬಾಣೆ, ನಾಕೂರು ಶಿರಂಗಾಲ, ಕೆದಕಲ್, ಹೊರೂರು,ಕಾರೆಕೊಲ್ಲಿ,ಭೂತನಕಾಡು, ಮತ್ತಿಕಾಡು,ಚೌಡಿಕಾಡು ವ್ಯಾಪ್ತಿಯಲ್ಲಿನ ಕಾಫಿಬೆಳೆಗಾರರು ಪಾಲ್ಗೊಂಡು ತಮ್ಮ ದುಖಃ ದುಮನ ಕಷ್ಟನಷ್ಟಗಳನ್ನು ಅರಣ್ಯಾಧಿಕಾರಿಗಳ ಮುಂದಿಟ್ಟರು.
ಸಹಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಸಿಗೋಪಾಲ್, ಕುಶಾಲನಗರ ವಲಯ ಅರಣ್ಯ ಅಧಿಕಾರಿ ರತನ್‌ಕುಮಾರ್,ಆರ್ ಆರ್ ಟಿ ತಂಡದ ಮುಖ್ಯಸ್ಥ ಸಹಾಯಕ ವಲಯ ಅರಣ್ಯಾಧಿಕಾರಿ ದೇವಯ್ಯ, ಸಿದ್ದರಾಮ ಸೇರಿದಂತೆ ಸಿಬ್ಬಂದಿಗಳು, ಸುಂಟಿಕೊಪ್ಪ ಅಪರಾಧ ವಿಭಾಗದ ಪಿಎಸ್‌ಐ ಸ್ವಾಮಿ, ಎಎಸ್‌ಐ ತೀರ್ಥಕುಮಾರ್ ಸಿಬ್ಬಂದಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT