ಮಡಿಕೇರಿ: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಲಿಹೊಳೆ ಕಟ್ಟೆಹಾಡಿಯಲ್ಲಿ ಅರಣ್ಯ ಹಕ್ಕು ಗ್ರಾಮಸಭೆಯು ಜ. 21ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದ್ದು, ಎಲ್ಲ ಅಧಿಕಾರಿಗಳೂ ಸಭೆಗೆ ಹಾಜರಾಬೇಕು. ಗೈರಾದರೆ ಜಿಲ್ಲಾವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದು ಆದಿವಾಸಿ ಮುಖಂಡ ಆರ್.ಕೆ.ಚಂದ್ರು ಎಚ್ಚರಿಕೆ ನೀಡಿದರು.
‘ಇದನ್ನೇ ಆಹ್ವಾನ ಎಂದು ಪರಿಗಣಿಸಿ ಎಲ್ಲ ಅಧಿಕಾರಿಗಳೂ ಸಭೆಗೆ ಹಾಜರಾಗಿ ಆದಿವಾಸಿಗಳ ನೋವನ್ನು ಆಲಿಸಬೇಕು’ ಎಂದು ಅವರು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
2006ರಲ್ಲೇ ಜಾರಿಗೆ ಬಂದಿರುವ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದಿದ್ದರೂ ಇನ್ನೂ ಆದಿವಾಸಿಗಳಿಗೆ ಯಾವುದೇ ಹಕ್ಕು ಲಭ್ಯವಾಗಿಲ್ಲ. ಕೆಲವರಿಗೆ ಹಕ್ಕುಪತ್ರ ನೀಡಿದ್ದರೂ ಆರ್‌ಟಿಸಿ ಒದಗಿಸಿಲ್ಲ. ಇದರಿಂದ ಯಾವುದೇ ಸರ್ಕಾರಿ ಸೌಲಭ್ಯಗಳನ್ನು ಪಡೆಯಲಾಗಿಲ್ಲ ಎಂದು ಅವರು ದೂರಿದರು.
ವೈಯಕ್ತಿಕ ಹಕ್ಕು ಹಾಗೂ ಸಮುದಾಯ ಹಕ್ಕಿಗಾಗಿ ಎಲ್ಲ ದಾಖಲೆಗಳನ್ನು ಒದಗಿಸಿದ್ದರೂ, ಹಕ್ಕುಪತ್ರ ನೀಡುವಲ್ಲಿ ಸರ್ಕಾರ ಆಸಕ್ತಿ ತೋರಿಲ್ಲ ಎಂದು ಅವರು ಕಿಡಿಕಾರಿದರು.
ಜೇನುಕುರುಬರ ಅಭಿವೃದ್ಧಿ ಸಂಘದ ಸಂಘಟನಾ ಕಾರ್ಯದರ್ಶಿ ಜೆ.ಟಿ.ಕಾಳಿಂಗ ಮಾತನಾಡಿ, ‘ಅರಣ್ಯ ಹಕ್ಕು ಪತ್ರ ಜಮೀನನನ್ನು ಕಂದಾಯ ಜಮೀನಾಗಿ ಪರಿವರ್ತಿಸಿ ಭೂ ಒಡೆತನ ನೀಡಬೇಕು, ಪಿಯುಸಿ ಮತ್ತು ಪದವಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗ ನೀಡಬೇಕು, ಕೂಡಲೇ ಎಲ್ಲ ಹಾಡಿಗಳಿಗೆ ಸಮುದಾಯದ ಹಕ್ಕು ನೀಡಬೇಕು, ಆದಿವಾಸಿ ಸಮುದಾಯಗಳ ಹೆಸರಿನಲ್ಲಿ ಬರುವ ಕಾಮಗಾರಿಗಳು ದುರುಪಯೋಗ ಆಗುತ್ತಿರುವುದು ನಿಲ್ಲಬೇಕು’ ಎಂದು ಒತ್ತಾಯಿಸಿದರು.
ಮಾವಿನಹಳ್ಳ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷ ಜೆ.ಎಂ.ನಾಗೇಶ, ಉಪಾಧ್ಯಕ್ಷ ಜೆ.ಪಿ.ಚಂದ್ರಪ್ಪ, ಕಟ್ಟೆಹಾಡಿ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷ ಜೆ.ಕೆ.ಅಪ್ಪು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.