ಮಡಿಕೇರಿ: ಬಾಯಲ್ಲಿ ನೀರೂರಿಸುವ ಉಪ್ಪಿನಕಾಯಿ, ಮತ್ತೊಮ್ಮೆ ಸವಿಯಬೇಕು ಎನ್ನಿಸುವ ಜೇನು, ನೋಡಿದಷ್ಟೂ ನೋಡಲೇಬೇಕೆನ್ನುವ ಕೈಮಗ್ಗದ ಬಟ್ಟೆಗಳು, ಒಂದರೆಕ್ಷಣ ಚಕಿತಗೊಳಿಸುವ ಕರಕುಶಲ ವಸ್ತುಗಳು.
ಹೀಗೆ ಒಂದೇ, ಎರಡೇ. ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಪಕ್ಕದಲ್ಲಿರುವ ಬಾಲಭವನದ ಆವರಣಕ್ಕೆ ಮಂಗಳವಾರ ಬಂದವರಿಗೆ ಬರೋಬರಿ 25 ಮಳಿಗೆಗಳು ಕಣ್ಣಿಗೆ ಸಿಕ್ಕವು. ಇಲ್ಲಿ ಕೊಡಗು ಜಿಲ್ಲೆಯ 50 ಸಂಜೀವಿನಿ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ತಮ್ಮ ತಮ್ಮ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಮತ್ತು ಮಾರಾಟಕ್ಕೆ ಇರಿಸಿದ್ದರು.
ಕೊಡಗು ಜಿಲ್ಲಾ ಪಂಚಾಯಿತಿಯ ಎನ್‍ಆರ್‌ಎಲ್‍ಎಂ ಸಂಜೀವಿನಿ ಯೋಜನೆಯ ವತಿಯಿಂದ ಮಾರ್ಚ್ 7ರವರೆಗೂ ಆಯೋಜನೆಗೊಂಡಿರುವ ಜಿಲ್ಲೆಯ ಸ್ವಸಹಾಯ ಸಂಘಗಳ ಸದಸ್ಯರು ತಯಾರಿಸಿರುವ ವಸ್ತುಗಳ ಮಾರಾಟ ಮತ್ತು ವಸ್ತು ಪ್ರದರ್ಶನ ಮೇಳ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ಮೇಳವನ್ನು ಉದ್ಘಾಟಿಸಿದ ಶಾಸಕ ಡಾ.ಮಂತರ್‌ಗೌಡ, ‘ಮಹಿಳೆಯರ ಸ್ವಾವಲಂಬಿ ಆರ್ಥಿಕ ಜೀವನ ಮಟ್ಟಕ್ಕೆ ಪೂರಕವಾದ ಮಾರುಕಟ್ಟೆ ವ್ಯವಸ್ಥೆ ಇದಾಗಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.
ಮಹಿಳೆಯರ ಒಡನಾಡಿಯಾಗಿ ಸಹಾಯ ಸಂಘಗಳ ಅಭಿವೃದ್ಧಿಗೆ ಪೂರಕವಾಗಿ ಸಹಕರಿಸುವುದಾಗಿಯೂ ಅವರು ಭರವಸೆ ನೀಡಿದರು. ಜೊತೆಗೆ, ₹ 5 ಸಾವಿರ ಮೌಲ್ಯದ ವಸ್ತುಗಳನ್ನು ಖರೀದಿಸಿದ್ದು, ಮಾತ್ರವಲ್ಲ ಸಿಹಿ ವಿತರಿಸಿ ಸಂಭ್ರಮಿಸಿದ್ದು ವಿಶೇಷ ಎನಿಸಿತು.
ಮಡಿಕೇರಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಝೀವಲ್ ಖಾನ್, ಸಹಾಯಕ ಯೋಜನಾ ಅಧಿಕಾರಿ ಜೀವನ್ ಕುಮಾರ್, ಎನ್‍ಆರ್‌ಎಲ್‍ಎಂ ಸಂಜೀವಿನಿ ಯೋಜನೆಯ ಜಿಲ್ಲಾ ಮತ್ತು ತಾಲ್ಲೂಕು ಸಿಬ್ಬಂದಿಗಳು ಹಾಗೂ ಸ್ವ ಸಹಾಯ ಸಂಘಗಳ ಸದಸ್ಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.