ADVERTISEMENT

ಹ್ಯಾಶಿಶ್‌ ಆಯಿಲ್‌ ಮಾರಾಟ ಜಾಲ ಪತ್ತೆ

₹ 10 ಲಕ್ಷ ಮೌಲ್ಯದ ಮಾದಕ ವಸ್ತು ವಶ, ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2022, 15:09 IST
Last Updated 30 ಆಗಸ್ಟ್ 2022, 15:09 IST
ಅಯ್ಯಪ್ಪ
ಅಯ್ಯಪ್ಪ   

ಮಡಿಕೇರಿ:ಮಾದಕ ವಸ್ತು ‘ಹ್ಯಾಶಿಶ್‌ ಆಯಿಲ್‌’ ಮಾರಾಟ ಜಾಲದ ಮೂವರನ್ನು ಬಂಧಿಸಿರುವ ಕೊಡಗು ಜಿಲ್ಲಾ ಪೊಲೀಸರು ಬಂಧಿತರಿಂದ ₹ 10 ಲಕ್ಷ ಮೌಲ್ಯದ 1.6 ಕೆ.ಜಿ. ಹ್ಯಾಶಿಶ್ ಆಯಿಲ್‌ನ್ನು ವಶಪಡಿಸಿಕೊಂಡಿದ್ದಾರೆ.

‘ಕೇರಳದ ಕಾಸರಗೋಡು ಜಿಲ್ಲೆಯ ಕೊಟ್ಟಪಲ್ಲಿಯ ಅಹಮ್ಮದ್ ಕಬೀರ್ (37), ಕೇರಳದ ಕಜ್ಞಗಾಡು ತಾಲ್ಲೂಕಿನ ಕೊಳಬೈಲು ಗ್ರಾಮದ ಅಬ್ದುಲ್ ಖಾದರ್ (27) ಹಾಗೂ ತಾನಿಯಾಂದ್ರಮ್ ವೈನಿಂಗಾಲ್ ಗ್ರಾಮದ ಮೊಹಮ್ಮದ್ ಮುಜಮಿಲ್ (22) ಬಂಧಿತ ಆರೋಪಿಗಳು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಭಾಗಮಂಡಲ ಠಾಣಾ ವ್ಯಾಪ್ತಿಯ ಕರಿಕೆ ಮಾರ್ಗದ ತಾವೂರು ಕಡೆಗೆ ಕೇರಳದಿಂದ ಬಂದ ಮಾರುತಿ ಸೆಲೇರಿಯೊ ಕಾರೊಂದು ಅನುಮಾನಾಸ್ಪದವಾಗಿ ಸುಳಿದಾಡುತ್ತಿದೆ ಎಂಬ ಮಾಹಿತಿ ಆಧರಿಸಿ ಕಾರನ್ನು ಸುತ್ತುವರೆದ ಪೊಲೀಸರು, ಪರಿಶೀಲಿಸಿದಾಗ 2 ಪ್ರತ್ಯೇಕ ನಂಬರ್ ಪ್ಲೇಟ್‌ಗಳು ಪತ್ತೆಯಾದವು.

ADVERTISEMENT

‘ಕೂಲಂಕಷವಾಗಿ ತಪಾಸಣೆ ಮಾಡಿದಾಗ ಪ್ಲಾಸ್ಟಿಕ್ ಡಬ್ಬದಲ್ಲಿ ಅಂಟು ಮಾದರಿಯ ಪದಾರ್ಥ ಕಂಡು ಬಂದಿತು. ಅದರ ವಾಸನೆಯು ಮಾದಕ ದ್ರವ್ಯದಂತಿತ್ತು. ಈ ಬಗ್ಗೆ ವಿಚಾರಿಸಿದಾಗ ಮಾರಾಟದ ಉದ್ದೇಶದಿಂದ ಹ್ಯಾಶಿಶ್‌ನ್ನು ಜಿಲ್ಲೆಗೆ ತರಲಾಗಿದೆ ಎಂದು ಆರೋಪಿಗಳು ತಿಳಿಸಿದರು’ ಎಂದು ಅವರು ಹೇಳಿದರು.

‘ಕಾರಿನ ನಂಬರ್ ಪ್ಲೇಟ್ ಅನ್ನು ಬದಲಾಯಿಸಿಕೊಂಡು ಮಾದಕದ್ರವ್ಯವನ್ನು ಮಾರಾಟ ಮಾಡುತ್ತಿದ್ದ ಅಂಶ ಬೆಳಕಿಗೆ ಬಂದಿದೆ. ಬಂಧಿತರ ಪೈಕಿ ಅಹಮ್ಮದ್ ಕಬೀರ್ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ವಾಹನ ಕಳ್ಳತನ ಪ್ರಕರಣದ ಆರೋಪಿಯಾಗಿದ್ದು, ಕೇರಳ ರಾಜ್ಯದಲ್ಲಿಯೂ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ’ ಎಂದು ತಿಳಿಸಿದರು.

ಮಡಿಕೇರಿ ಡಿವೈಎಸ್‌ಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಸಿಪಿಐ ಅನೂಪ್ ಮಾದಪ್ಪ, ಭಾಗಮಂಡಲ ಪೊಲೀಸ್ ಠಾಣೆಯ ‍ಪಿಎಸ್‌ಐ ಪ್ರಿಯಾಂಕಾ, ಸಿಬ್ಬಂದಿ ಬೆಳ್ಳಿಯಪ್ಪ, ಎಚ್.ಸಿ.ಇಬ್ರಾಹಿಂ, ಬಿ.ಸಿ.ಮಹೇಶ್, ಯಲ್ಲಾಲಿಂಗ ಶೇಗುಣಸಿ, ಮಹದೇವಸ್ವಾಮಿ, ಪುನೀತ್ ಕುಮಾರ್, ಸುರೇಶ್ ಕುಮಾರ್ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.