ADVERTISEMENT

ಕೊಡಗು: ಯೋಗ ದಿನಕ್ಕೆ 620 ಮಂದಿ ನೋಂದಣಿ

ಕೆಳಗಿನ ಗೌಡ ಸಮಾಜದಲ್ಲೇ ಕಾರ್ಯಕ್ರಮ ಆಯೋಜಿಸಲು ಸ್ಥಳೀಯರ ಆಗ್ರಹ

ಕೆ.ಎಸ್.ಗಿರೀಶ್
Published 20 ಜೂನ್ 2022, 3:10 IST
Last Updated 20 ಜೂನ್ 2022, 3:10 IST
ಯೋಗ
ಯೋಗ   

ಮಡಿಕೇರಿ: ಜೂನ್ 21ರಂದು ನಡೆಯಲಿರುವ ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗವಹಿಸಲು ಕಾಫಿ ನಾಡಿನ ಜನರು ಜಿಲ್ಲಾ ಆಯುಷ್ ಇಲಾಖೆಯ ನಿರೀಕ್ಷೆಗೂ ಮೀರಿ ಹೆಚ್ಚಿನ ಉತ್ಸಾಹ ತೋರಿದ್ದಾರೆ. ಈ ಮೊದಲು 300 ಮಂದಿ ಭಾಗಿಯಾಗಬಹುದು ಎಂಬ ಅಂದಾಜು ಇತ್ತು. ಆದರೆ, ಬರೋಬ್ಬರಿ 620 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.

ಕೊಡಗಿನ ಜನರ ಮಿತಿ ಮೀರಿದ ಸ್ಪಂದನೆ ಕಂಡು ಮೂಕರಾಗಿರುವ ಆಯುಷ್ ಇಲಾಖೆ ಅಧಿಕಾರಿಗಳು ನೋಂದಣಿಯನ್ನೇ ಸ್ಥಗಿತ ಮಾಡಿದ್ದಾರೆ. ಸದ್ಯ, ಇಷ್ಟು ಮಂದಿಗೆ ಸ್ಥಳಾವಕಾಶ ಹಾಗೂ ಲಘು ಉಪಾಹಾರ ಒದಗಿಸಲು ಸಿದ್ಧತೆ ನಡೆಸಿದ್ದಾರೆ.

ಜಿಲ್ಲಾ ಆಯುಷ್ ಇಲಾಖೆಯಲ್ಲಿ 78 ಹುದ್ದೆಗಳಿಗೆ ಮಂಜೂರಾತಿ ಇದೆ. ಆದರೆ, 56 ಮಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಡಿಕೇರಿಯ ಜಿಲ್ಲಾ ಆಯುಷ್ ಕಚೇರಿಯಲ್ಲಿ 6 ಮಂದಿ ಮಾತ್ರ ಕಾಯಂ ಸಿಬ್ಬಂದಿ ಇದ್ದಾರೆ. ಈ 6 ಮಂದಿ ಸಿಬ್ಬಂದಿ ಇತರೆ ಇಲಾಖೆಗಳು, ಯೋಗ ತರಬೇತಿ ಕೇಂದ್ರಗಳು, ಶಾಲಾ, ಕಾಲೇಜುಗಳ ಸಹಕಾರ ಪಡೆದು ಯೋಗ ದಿನಾಚರಣೆಯಂತಹ ಬೃಹತ್ ಕಾರ್ಯ ಕ್ರಮಕ್ಕಾಗಿ ಭರದ ಸಿದ್ಧತೆ ನಡೆಸಿದ್ದಾರೆ.

ADVERTISEMENT

ಮಡಿಕೇರಿಯಲ್ಲಿ ಮಳೆ ಆಗಾಗ್ಗೆ ಬಂದು ಹೋಗುತ್ತಿದೆ. ಜೂನ್ 20 ಹಾಗೂ 21ರಂದು ಹೆಚ್ಚಿನ ಮಳೆ ಬೀಳಬಹುದು ಎಂಬ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಪರಿಸ್ಥಿತಿ ಹೀಗಿದ್ದರೂ, ಪ್ರತಿಷ್ಠೆಗಾಗಿ ನಗರದ ಭಾರತೀಯ ಕ್ರೀಡಾ ಪ್ರಾಧಿಕಾರ ಸಾಯಿ, ಟರ್ಫ್ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸುವುದು ಬೇಡ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

‘ಭಾರತೀಯ ಸ್ಕೌಟ್ಸ್ ಅಂಡ್ ಗೈಡ್ಸ್‌ ಸೇರಿದಂತೆ ವಿವಿಧ ಶಾಲೆಗಳ ಮಕ್ಕಳೂ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಳೆ ಏನಾದರೂ ಹೆಚ್ಚಾಗಿ ಬಂದರೆ ಖಂಡಿತವಾಗಿಯೂ ಅವರಿಗೆ ತೊಂದರೆಯಾಗುತ್ತದೆ. ಹಾಗಾಗಿ, ಒಳಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸುವುದು ಒಳಿತು’ ಎಂದು ಜಿಲ್ಲೆಯ ಆಯುಷ್ ಇಲಾಖೆಯ ಸಿಬ್ಬಂದಿಯೊಬ್ಬರು ತಿಳಿಸಿದರು.

ಮಳೆ ಇಲ್ಲದೇ ಹೋದರೆ ಮಾತ್ರ ಸಾಯಿ ಟರ್ಫ್ ಮೈದಾನದಲ್ಲಿ ಕಾರ್ಯ ಕ್ರಮ ಆಯೋಜಿಸುವುದಾಗಿ ಜಿಲ್ಲಾಡಳಿತ ತಿಳಿಸಿದೆ. ಆದರೆ, ರಾತ್ರಿ ಹೊತ್ತು ಮಳೆ ಬಂದರೆ ಮೈದಾನದಲ್ಲಿ ಯೋಗ ಮಾಡುವುದೂ ಕಷ್ಟಕರವಾಗಲಿದೆ. ಈಗಂತೂ ನಿತ್ಯವೂ ಒಂದಷ್ಟು ಹೊತ್ತು ಮಳೆ ಬರುತ್ತಲೇ ಇದೆ. ರಾತ್ರಿ ಸ್ವಲ್ಪ ಹೊತ್ತು ಮಳೆ ಬಂದು, ಬೆಳಿಗ್ಗೆ ಬಿಸಿಲಿದ್ದರೂ ಯೋಗ ಮಾಡುವುದು ಕಷ್ಟವಾಗಲಿದೆ ಎಂಬ ಅಭಿಪ್ರಾಯವೂ ಅಧಿಕಾರಿಗಳ ವಲಯದಲ್ಲಿ ಕೇಳಿ ಬರುತ್ತಿದೆ.

ಮಳೆ ಬಂದಲ್ಲಿ ಕೆಳಗಿನ ಗೌಡ ಸಮಾಜದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ. ಇದು ಸಾರ್ವಜನಿಕರಲ್ಲಿ ಗೊಂದಲಕ್ಕೆ ಎಡೆ ಮಾಡುವ ಸಾಧ್ಯತೆಯೇ ಅಧಿಕವಾಗಿದೆ. ಹಾಗಾಗಿ, ಒಳಾಂಗಣದ ಒಂದು ಸ್ಥಳವನ್ನು ಮಾತ್ರ ನಿಗದಿ ಮಾಡಿದ್ದಲ್ಲಿ ಗೊಂದಲಕ್ಕೆ ಆಸ್ಪದ ಇರುತ್ತಿರಲಿಲ್ಲ.

ಬೆಳಿಗ್ಗೆ 6.30ಕ್ಕೆ ಕಾರ್ಯಕ್ರಮ

‘ಜೂನ್ 21ರಂದು ಬೆಳಿಗ್ಗೆ 6.30ಕ್ಕೆ ನಗರದ ಭಾರತೀಯ ಕ್ರೀಡಾ ಪ್ರಾಧಿಕಾರ ಸಾಯಿ, ಟರ್ಫ್ ಮೈದಾನದಲ್ಲಿ (ಮಳೆ ಇದ್ದ ಸಂದರ್ಭದಲ್ಲಿ ಕೆಳಗಿನ ಗೌಡ ಸಮಾಜದಲ್ಲಿ) ಯೋಗ ದಿನಾಚರಣೆ ಆರಂಭವಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಕೆ.ಜಿ.ಬೋಪಯ್ಯ, ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ರವಿಕುಶಾಲಪ್ಪ ಭಾಗವಹಿಸಲಿದ್ದಾರೆ’ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.