ಸೋಮವಾರಪೇಟೆ: ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ದಿ. ಬಿ.ಬಿ.ಶಿವಪ್ಪ ಅವರ ಅಭಿಮಾನಿಗಳ ಬಳಗದಿಂದ 7ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮ ಇಲ್ಲಿನ ಮಹಿಳಾ ಸಮಾಜದಲ್ಲಿ ಬುಧವಾರ ನಡೆಯಿತು.
ವೀರಾಜಪೇಟೆ ಕ್ಷೇತ್ರದ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಶಿವಪ್ಪ ಅವರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ರಾಜಕಾರಣದ ಮುನ್ನೆಲೆಗೆ ಬಂದರು. ಎ.ಕೆ. ಸುಬ್ಬಯ್ಯ ಅವರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂದರ್ಭ ಬಿಜೆಪಿಯನ್ನು ರಾಜ್ಯದಲ್ಲಿ ಪ್ರಬಲವಾಗಿ ಸಂಘಟಿಸಿದ್ದರು. ಶಿವಪ್ಪ ಅವರು ಅಧ್ಯಕ್ಷರಾಗಿ ಪಕ್ಷವನ್ನು ಸಂಕಷ್ಟದ ದಿನಗಳಲ್ಲೂ ಮುನ್ನಡೆಸಿದರು ಎಂದು ಸ್ಮರಿಸಿದರು.
ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಶಿವಪ್ಪ ಅವರು ಪಕ್ಷಕ್ಕೆ ರಾಜ್ಯದಲ್ಲಿ ಗಟ್ಟಿ ತಳಪಾಯ ಹಾಕಿದ ಪರಿಣಾಮ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರ ಹಿಡಿಯುವ ಮಟ್ಟಕ್ಕೆ ಬಂತು. ಅಜಾತಶತ್ರುವಾಗಿ ರಾಜಕಾರಣ ಮಾಡಿದ ಅಪರೂಪದ ರಾಜಕಾರಣಿಯಾಗಿದ್ದರು. ಅವರ ಕಾರ್ಯಗಳು ಎಲ್ಲಾ ನಾಯಕರು ಮತ್ತು ಕಾರ್ಯಕರ್ತರಿಗೆ ಮಾರ್ಗದರ್ಶನವಾಗಬೇಕು ಎಂದರು.
ಮಾಜಿ ಎಂಎಲ್‌ಸಿ ಎಸ್.ಜಿ. ಮೇದಪ್ಪ ಮಾತನಾಡಿ, ರಾಷ್ಟ್ರ ಹಾಗೂ ರಾಜ್ಯ ಕಂಡ ಶ್ರೇಷ್ಠ ವ್ಯಕ್ತಿಯಾಗಿದ್ದರು. ನಿಷ್ಕಳಂಕ, ಪ್ರಾಮಾಣಿಕ, ಜಾತಿ ವರ್ಗವನ್ನು ಮೀರಿದ ಅವರ ಆದರ್ಶ ಪಾಲನೆಯಾಗಬೇಕು. ಶಿವಪ್ಪ ಅವರು ಬಿಜೆಪಿಗೆ ನೀಡಿದ ಕೊಡುಗೆ ಅಪಾರ. ಅವರ ಪತ್ನಿಯಾಗಿದ್ದ ಸುಶೀಲಮ್ಮ ಅವರೂ ಪತಿಯೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಲು ಶ್ರಮಿಸಿದರು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಶಿವಪ್ಪ ಅವರ ಪುತ್ರ ಪ್ರತಾಪ್ ಶಿವಪ್ಪ, ಸಕಲೇಶಪುರದ ಶಾಸಕ ಸಿಮೆಂಟ್ ಮಂಜು, ಅಭಿಮಾನಿ ಬಳಗದ ತಿಮ್ಮಶೆಟ್ಟಿ ಸೇರಿದಂತೆ ನೂರಾರು ಅಭಿಮಾನಿಗಳು ಉಪಸ್ಥಿತರಿದ್ದರು. ಬಿ.ಬಿ. ಶಿವಪ್ಪ ಹಾಗೂ ಅವರಪತ್ನಿ ಸುಶೀಲಮ್ಮ ಅವರ ಭಾವಚಿತ್ರಕ್ಕೆ ಕಾರ್ಯಕರ್ತರು ಪುಷ್ಪಾರ್ಚನೆ ಮಾಡಿದರು. ಇದೇ ಸಂದರ್ಭ ಬಿ .ಬಿ. ಶಿವಪ್ಪ ಅವರ ನಿಕಟವರ್ತಿ, ಇತ್ತೀಚೆಗೆ ನಿಧನರಾದ ಕೈಲಾಸ ಮಾಸ್ಟರ್ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.